ಕನ್ನಡಪ್ರಭ ವಾರ್ತೆ ಬೆಂಗಳೂರು
ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶೈಕ್ಷಣಿಕ ನೀತಿ ಕುರಿತು ರಾಜ್ಯದಲ್ಲಿ ನಡೆಸಿರುವ ಸಮೀಕ್ಷೆಯ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.
ಕೈಪಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಎ.ಮುರಿಗೆಪ್ಪ, ರಾಜ್ಯಕ್ಕೆ ಜನಪರವಾದ ಶಿಕ್ಷಣ ನೀತಿ ಬೇಕಾಗಿದೆ. ಚರ್ಚೆಗಳನ್ನು ನಡೆಸದೆ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಜಾರಿಗೊಳಿಸಿದೆ. ಎನ್‌ಇಪಿ-2020ರಲ್ಲಿ ಮೂರು ವರ್ಷದ ಪದವಿಯನ್ನು ನಾಲ್ಕು ವರ್ಷಕ್ಕೆ ಏರಿಸಲಾಗಿದೆ. ಇದರ ಅವಶ್ಯಕತೆ ಕುರಿತು ಸರ್ಕಾರ ಯಾರನ್ನು ಕೇಳಿದೆ, ವಿದ್ಯಾರ್ಥಿಗಳ ಸಮೀಕ್ಷೆ ನಡೆಸಿದೆಯೇ? ಮುಖ್ಯವಾಗಿ ಶಾಲಾ-ಕಾಲೇಜುಗಳಲ್ಲಿ ತರಗತಿ ಕೊಠಡಿಗಳಿವೆಯೇ? ಪೂರ್ಣಕಾಲಿಕ ಶಿಕ್ಷಕರು, ಬೋಧಕರು ಇದ್ದಾರೆಯೇ ಎಂದು ಪ್ರಶ್ನಿಸಿದರು.ಶಿಕ್ಷಣ ಕೇವಲ ಉದ್ಯೋಗ ಗಿಟ್ಟಿಸಿಕೊಳ್ಳಲು ಮಾತ್ರವಲ್ಲ. ಸ್ವಾವಲಂಬಿಯಾಗಿ, ಸ್ವತಂತ್ರವಾಗಿ ಜೀವನ ನಡೆಸಲು ಧೈರ್ಯ ತುಂಬುವಂತಿರಬೇಕು ಎಂದು ಅವರು ಹೇಳಿದರು.
ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಮಾತನಾಡಿ, ಸಮೀಕ್ಷೆಯಲ್ಲಿ 21 ಸಾವಿರ ಜನ ಭಾಗಿಯಾಗಿದ್ದಾರೆ. 9 ಪ್ರಶ್ನೆಗಳನ್ನು ನೀಡಿ ಪ್ರತಿಕ್ರಿಯೆಗಳನ್ನು ಪಡೆಯಲಾಗಿದೆ. ಇದೇ ಮೊದಲ ಬಾರಿಗೆ ಶಿಕ್ಷಣ ನೀತಿಯ ಕುರಿತು ರಾಜ್ಯದಲ್ಲಿ ಬೃಹತ್ ಪ್ರಮಾಣದ ಸಮೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದರು.ಸಮೀಕ್ಷೆಯ ಅಭಿಪ್ರಾಯ
-ನವೋದಯ ಚಿಂತಕರು, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅಧ್ಯಯನ ಆಗಬೇಕು.
-ಕಡಿಮೆ ದಾಖಲಾತಿ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಬಾರದು ಮತ್ತು ಮುಚ್ಚಬಾರದು.
-ವಿದ್ಯಾರ್ಥಿಗಳಿಗೆ ಕೌಶಲ್ಯ, ತರಬೇತಿ ನೆಪದಲ್ಲಿ ಮೌಲ್ಯಗಳ ಕಡೆಗಣನೆ ತಪ್ಪು.