ಕನ್ನಡಪ್ರಭ ವಾರ್ತೆ ಮಂಗಳೂರು ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ಕಂದಮೂಲಗಳನ್ನು ಸೇವಿಸಿ ಆರೋಗ್ಯಕರ ಜೀವನ ಸಾಗಿಸುತ್ತಿದ್ದರು. ಇಂದಿನ ದಿನಗಳಲ್ಲೂ ಕಂದಮೂಲ, ಗೆಡ್ಡೆಗೆಣಸುಗಳನ್ನು ಆಹಾರದಲ್ಲಿ ಬಳಕೆ ಮಾಡುವುದು ಉತ್ತಮ ಬದುಕಿಗೆ ಪೂರಕವಾಗಿದೆ ಎಂದು ಕಂದಮೂಲ ಮೇಳದ ಕಾರ್ಯಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದ್ದಾರೆ.
ಮಾನವರ ಜೀವನ ಈಗ ಆಧುನಿಕತೆಗೆ ಒಗ್ಗಿ ಹೋಗಿದೆ. ಮನೆಯಂಗಳದ ಸೊಪ್ಪು ತರಕಾರಿಯಿಂದ ದೂರವಾಗಿ ವಿಷಯುಕ್ತ ತರಕಾರಿಗಳತ್ತ ಮನಮಾಡುತ್ತಿರುವುದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ. ಇದರ ಬಗ್ಗೆ ಅರಿವು ಮೂಡಿಸಿ ಕಂದಮೂಲಗಳ ಬಳಕೆಯನ್ನು ಹೆಚ್ಚು ಹೆಚ್ಚು ಉತ್ತೇಜಿಸುವ ಸಲುವಾಗಿ ಈ ಮೇಳ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕಂದಮೂಲ ಮೇಳದ ಅಧ್ಯಕ್ಷ ಪ್ರಭಾಕರ ಶರ್ಮಾ ಅವರು ಆಮಂತ್ರಣ ಪತ್ರ ಹಾಗೂ ಪ್ರಚಾರ ಸಾಮಗ್ರಿಯನ್ನು ಬಿಡುಗಡೆಗೊಳಿಸಿ, ಈ ಮೇಳದ ಬಗ್ಗೆ ಕರಾವಳಿಯಲ್ಲಿ ದೊಡ್ಡ ಸಂಚಲನ ಮೂಡಿದೆ. ನಿತ್ಯದ ಆಹಾರದಲ್ಲಿ ಕಂದಮೂಲ ಹಾಗೂ ಸೊಪ್ಪುಗಳ ಬಳಕೆ ಬಗ್ಗೆ ಎಲ್ಲರಲ್ಲಿ ತಿಳಿವಳಿಕೆ ಮೂಡಬೇಕು ಎಂದರು.ಎರಡು ದಿನ ಕಂದಮೂಲಗಳ ಹವಾ:
ಸಾವಯವ ಕೃಷಿ ಜಾಗೃತಿ ಬಳಗ ಅಧ್ಯಕ್ಷ ಜಿ.ಆರ್.ಪ್ರಸಾದ್, ಕಾರ್ಯದರ್ಶಿ ಡಾ.ಕೇಶವರಾಜ್, ಗೌರವ ಸಲಹೆಗಾರ ಅಡ್ಡೂರು ಕೃಷ್ಣರಾವ್ ಇದ್ದರು.
---------------2 ದಿನಗಳ ಕಾಲ ಏನೇನು ಕಾರ್ಯಕ್ರಮ?ನಗರದ ಸಂಘನಿಕೇತನದಲ್ಲಿ ಜನವರಿ 4ರಂದು ಬೆಳಗ್ಗೆ 9.30ಕ್ಕೆ ಆರ್‌ಎಸ್‌ಎಸ್ ದಕ್ಷಿಣ ಮಧ್ಯಕ್ಷೇತ್ರೀಯ ಸಂಘಚಾಲಕ ಡಾ.ವಾಮನ ಶೆಣೈ ಧ್ವಜಾರೋಹಣ ನೆರವೇರಿಸುವರು. ಕೊಂಡೆವೂರಿನ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ಮೇಳಕ್ಕೆ ಚಾಲನೆ ನೀಡಿ ಆಶೀರ್ವದಿಸುವರು. ಸ್ಪೀಕರ್ ಯು.ಟಿ.ಖಾದರ್ ಉಪಸ್ಥಿತಿ, ಸಂಸದ ಕ್ಯಾ.ಬ್ರಿಜೇಶ್ ಚೌಟ ಅಧ್ಯಕ್ಷತೆಯಲ್ಲಿ ಪಾಲಿಕೆ ಮೇಯರ್ ಮನೋಜ್ ಕುಮಾರ್ ಕೈಪಿಡಿ ಬಿಡುಗಡೆಗೊಳಿಸುವರು. ಮರುದಿನ ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಒಡಿಯೂರಿನ ಶ್ರೀಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು.
ಜನವರಿ 4ರಂದು ಬೆಳಗ್ಗೆ 11ರಿಂದ ‘ಕಂದಮೂಲ ಜ್ಞಾನ ಸಂಪತ್ತು ಆರೋಗ್ಯದ ಕರಾಮತ್ತು’ ಕುರಿತು ಅಡ್ಡೂರು ಕೃಷ್ಣರಾವ್ ಅಧ್ಯಕ್ಷತೆಯಲ್ಲಿ ಸಂದೀಪ್ ಹುಣಸೂರು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುವರು. ಸಂಜೆ 3.30ರಿಂದ ‘ಹಿತ್ತಲ ಗಿಡ ಮದ್ದೇ?’ ವಿಚಾರದಲ್ಲಿ ಪ್ರಮೀಳ ಹರ್ಷ ಅಧ್ಯಕ್ಷತೆಯಲ್ಲಿ ಆಶಾ ನಾಗರಹೊಳೆ ಮಾತನಾಡುವರು. ಜನವರಿ 5ರಂದು ಬೆಳಗ್ಗೆ 10ರಿಂದ ‘ಭೂಮಿಯೇ ಬ್ಯಾಂಕ್-ಗೆಡ್ಡೆ ಗೆಣಸುಗಳೇ ಠೇವಣಿ’ ಕುರಿತು ಡಾ.ಉದಯ ಕುಮಾರ್ ಪಿಲಿಕುಳ ಅಧ್ಯಕ್ಷತೆಯಲ್ಲಿ ವಸಂತ ಕಜೆ ಮಾತನಾಡಲಿದ್ದಾರೆ. ಎರಡು ದಿನಗಳ ಕಾಲ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.