ಕನ್ನಡಪ್ರಭ ವಾರ್ತೆ ಮಡಿಕೇರಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವ ಮೂಲಕ ಪರಂಪರೆ, ಪದ್ಧತಿ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಯುವ ಸಮೂಹ ಮಾಡಬೇಕೆಂದು ಕಲಾವಿದೆ ಪದ್ಮಶ್ರೀ ರಾಣಿ ಮಾಚಯ್ಯ ಕರೆ ನೀಡಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಬರಹಗಾರ ಕೊಟ್ಟುಕತ್ತಿರ ಜಾಲಿ ಸೋಮಣ್ಣ ಅವರು ಬರೆದಿರುವ ಕೊಡವ ಮಕ್ಕಡ ಕೂಟದಿಂದ ಹೊರ ತಂದಿರುವ ದಾಖಲೆಯ 75ನೇ ಪುಸ್ತಕ ‘ಆ ಪನ್ನೆರಂಡ್ ತಿಂಗ’ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಮ್ಮ ಪರಂಪರೆ, ಪದ್ಧತಿ ಮತ್ತು ಸಂಸ್ಕೃತಿಯನ್ನು ಅನುಸರಿಸಲು ಯುವ ಜನರು ಅಸಡ್ಡೆ ತೋರುತ್ತಿದ್ದಾರೆ. ಹಬ್ಬಗಳ ಆಚರಣೆಯಲ್ಲಿ ಪಾಲ್ಗೊಳ್ಳಲು ಕೂಡ ಹಿಂದೇಟು ಹಾಕುತ್ತಿದ್ದಾರೆ. ಜ್ಞಾನವನ್ನು ಹೆಚ್ಚಿಸುವ ಶಕ್ತಿ ಹೊಂದಿರುವ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಿಲ್ಲ. ಯುವ ಸಮೂಹದ ನಿರ್ಲಕ್ಷ್ಯ ಮನೋಭಾವದಿಂದ ಇಂದು ಪರಂಪರೆ, ಪದ್ಧತಿ ಮತ್ತು ಸಂಸ್ಕೃತಿ ನಾಶವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಪುಸ್ತಕಗಳನ್ನು ರಚಿಸುವುದು ಅತ್ಯಂತ ಒಳ್ಳೆಯ ಅಭ್ಯಾಸ, ನನಗೆ ಓದುವ ಹವ್ಯಾಸವಿದೆ, ಆದರೆ ಬರೆಯುತ್ತಿಲ್ಲ. ಇನ್ನು ಮುಂದೆ ಬರೆಯುವ ಪ್ರಯತ್ನ ಮಾಡುವುದಾಗಿ ರಾಣಿ ಮಾಚಯ್ಯ ಹೇಳಿದರು. ಕೊಡವ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣ ಅವರು, ಪುಸ್ತಕಗಳ ಗಾತ್ರಗಿಂತ ಅದರೊಳಗಿರುವ ವಿಚಾರದ ಮೌಲ್ಯಗಳು ದೊಡ್ಡದಾಗಿರಬೇಕು ಮತ್ತು ಮಹತ್ವದ್ದಾಗಿರಬೇಕು ಎಂದರು. ಇಂದು ಜನ ಪುಸ್ತಕಗಳನ್ನು ಓದುತ್ತಿಲ್ಲ, ಮೊದಲ ಪುಟ, ಕೊನೆಯ ಪುಟ, ದಪ್ಪಾಕ್ಷರಗಳು ಹಾಗೂ ಅದರಲ್ಲಿರುವ ಚಿತ್ರಗಳನ್ನು ನೋಡಿ ಕಪಾಟಿನಲ್ಲಿಟ್ಟು ಬಿಡುತ್ತಾರೆ. ಆದರೆ ಇಂದು ಬಿಡುಗಡೆಯಾಗಿರುವ ‘ಆ ಪನ್ನೆರಂಡ್ ತಿಂಗ’ ಪುಸ್ತಕ ಕಪಾಟಿನಲ್ಲಿಡುವ ಪುಸ್ತಕವಲ್ಲ, ಕೊಡಗಿನ ಮೂಲನಿವಾಸಿಗಳ ಪ್ರತಿಯೊಬ್ಬರ ಮನೆಯ ಮೇಜಿನ ಮೇಲಿರಬೇಕಾದ ಮಾರ್ಗದರ್ಶಕ ಪುಸ್ತಕವಾಗಿದೆ. ಕೊಡಗಿನ ಎಲ್ಲ ಹಬ್ಬಗಳು, ಪದ್ಧತಿ, ಪರಂಪರೆ, ಹುಟ್ಟಿನಿಂದ ಹಿಡಿದು ಸಾವಿನವರೆಗೆ ಇರುವ ಆಚಾರ, ವಿಚಾರಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಈ ಪುಸ್ತಕ ಮನೆಯಲ್ಲಿದ್ದರೆ ಯಾವುದೇ ಸಂದರ್ಭದಲ್ಲಿ ಪದ್ಧತಿಯ ಕುರಿತು ಮತ್ತೊಬ್ಬರಿಂದ ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು. ಕೊಡವ ಸಂಸ್ಕೃತಿಯನ್ನು ಆಳವಾಗಿ ಅಧ್ಯಯನ ಮಾಡಿ ಪುಸ್ತಕದ ರೂಪದಲ್ಲಿ ಹೊರ ತರುವಲ್ಲಿ ಮಾಜಿ ಯೋಧರೂ ಆಗಿರುವ ಲೇಖಕ ಕೊಟ್ಟುಕತ್ತಿರ ಜಾಲಿ ಸೋಮಣ್ಣ ಅವರು ಯಶಸ್ವಿಯಾಗಿದ್ದಾರೆ ಎಂದು ಬಾಚರಣಿಯಂಡ ಪಿ. ಅಪ್ಪಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು. ಪುಸ್ತಕದ ಬರಹಗಾರ ಕೊಟ್ಟುಕತ್ತಿರ ಜಾಲಿ ಸೋಮಣ್ಣ ಅವರು ಮಾತನಾಡಿ ಇದು ನನ್ನ 5ನೇ ಪುಸ್ತಕವಾಗಿದ್ದು, ಪದ್ಧತಿ, ಪರಂಪರೆಗಳನ್ನು ಅಧ್ಯಯನ ಮಾಡಿ ಬರೆದಿದ್ದೇನೆ. ಪುಸ್ತಕ ಪ್ರತಿಯೊಬ್ಬರ ಕೈಸೇರುವ ಮೂಲಕ ನಮ್ಮ ಕೇರಿ, ಊರು, ನಾಡಿನ ಪರಂಪರೆಯ ಪರಿಚಯವಾಗಬೇಕು ಎಂದು ತಿಳಿಸಿದರು. ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಿರುವ ಕೊಡವ ಮಕ್ಕಡ ಕೂಟದ ಶ್ರಮವನ್ನು ಶ್ಲಾಘಿಸಿದರು. ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ಸಂಘಟನೆ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿದೆ. ನನ್ನ ಅಧ್ಯಕ್ಷತೆಯಲ್ಲಿ ಈವರೆಗೆ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಒಟ್ಟು 74 ಕೃತಿಗಳನ್ನು ಬಿಡುಗಡೆ ಮಾಡಲಾಗಿದೆ. ಇದೀಗ 75ನೇ ಪುಸ್ತಕವಾಗಿ 75 ವರ್ಷದ ಬರಹಗಾರ ಜಾಲಿ ಸೋಮಣ್ಣ ಅವರು ರಚಿಸಿರುವ ‘ಆ ಪನ್ನೆರಂಡ್ ತಿಂಗ’ ಬಿಡುಗಡೆಗೊಂಡಿದೆ ಎಂದರು.