ಕನ್ನಡಪ್ರಭ ವಾರ್ತೆ ಬೆಂಗಳೂರು
ಸ್ವಪಕ್ಷೀಯರು ತಪ್ಪು ಮಾಡಿದ ಸಂದರ್ಭಗಳಲ್ಲಿ ಮಾಜಿ ಸಚಿವ ಎಚ್.ಎನ್.ನಂಜೇಗೌಡ ಅವರ ರೀತಿಯಲ್ಲಿ ನಿರ್ಭೀತಿಯಿಂದ ಟೀಕಿಸುವ ರಾಜಕೀಯ ಮುತ್ಸದಿಗಳು ಪ್ರಸ್ತುತ ಸನ್ನಿವೇಶದಲ್ಲಿ ಅಗತ್ಯವಿದೆ ಎಂದು ಮಾಜಿ ಶಾಸಕ ಡಿ.ಆರ್.ಪಾಟೀಲ್ ಅಭಿಪ್ರಾಯಪಟ್ಟರು.ಎಚ್.ಎನ್.ನಂಜೇಗೌಡರ ಅಭಿಮಾನಿ ಬಳಗ ಭಾನುವಾರ ಕುವೆಂಪು ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ನಂಜೇಗೌಡರ ಕುರಿತ ‘ಸಂಸ್ಮರಣ ಗ್ರಂಥ’ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ನಂಜೇಗೌಡರು ಕಾಂಗ್ರೆಸ್ ಸಂಸದರಾಗಿದ್ದ ವೇಳೆ ಬಹುಕೋಟಿ ಬೋಫೋರ್ಸ್ ಹಗರಣ ಸಂಬಂಧ ಸ್ವಪಕ್ಷೀಯದವರ ವಿರುದ್ಧವೇ ಗುಡುಗಿದ್ದರು. ಸ್ವಪಕ್ಷೀಯರು ತಪ್ಪು ಮಾಡಿದ್ದರೆ ನಿರ್ಭೀತಿಯಿಂದ ಟೀಕಿಸುವ ಎದೆಗಾರಿಕೆ ಅವರಲ್ಲಿತ್ತು ಎಂದರು.
ನಂಜೇಗೌಡರು ನೀರಾವರಿ ವಿಚಾರದಲ್ಲಿ ಆಳವಾಗಿ ತಿಳಿದುಕೊಂಡಿದ್ದರು. ಕಾವೇರಿ ಸೇರಿದಂತೆ ನಾಡಿನ ನೀರಾವರಿ ವಿಚಾರ ಬಂದಾಗ ನಂಜೇಗೌಡರೇ ಆಳುವ ಪಕ್ಷದವರಿಗೂ ಮತ್ತು ವಿರೋಧ ಪಕ್ಷದವರಿಗೂ ಮಾರ್ಗದರ್ಶನ ನೀಡುತ್ತಿದ್ದರು. ಅವರು ಸಂಸತ್‌ನಲ್ಲಿ ಇಲ್ಲವೆ ವಿಧಾನ ಸಭೆಯಲ್ಲೇ ಮಾತನಾಡುತ್ತಿದ್ದರೆ ಇಡೀ ಸದನ ಕಿವಿಗೊಟ್ಟು ಕೇಳುತ್ತಿತ್ತು ಎಂದು ಹೇಳಿದರು.ಸಂಸ್ಮರಣ ಗ್ರಂಥದ ಕುರಿತು ಮಾತನಾಡಿದ, ನೀರಾವರಿ ತಜ್ಞ ಅರ್ಜುನಹಳ್ಳಿ ಪ್ರಸನ್ನ ಕುಮಾರ್, ಈಗ ಸಂಸತ್‌ನಲ್ಲಿ ಕಾವೇರಿ ವಿಚಾರ ಪ್ರಸ್ತಾಪ ಮಾಡಿದರೆ ತಮಿಳುನಾಡಿನ ಸಂಸದರೆಲ್ಲರೂ ಗಲಾಟೆ ಎಬ್ಬಿಸುತ್ತಾರೆ. ಆದರೆ, ನಂಜೇಗೌಡ ಅವರು ಸಂಸತ್‌ನಲ್ಲಿ ತೋಳು ಮಡಿಚಿ ಮಾತನಾಡುತ್ತಿದ್ದರೆ ಇಡೀ ಸದನ ಆಲಿಸುತ್ತಿತ್ತು. ಮಾಜಿ ಪ್ರಧಾನಿ ವಾಜಪೇಯಿ, ಪಿ.ವಿ.ನರಸಿಂಹರಾವ್ ಸೇರಿದಂತೆ ಹಲವರು ನಂಜೇಗೌಡರ ಸಲಹೆ ಪಡೆಯುತ್ತಿದ್ದರು. ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಸಂಸದರಿಂದಲೂ ಮೆಚ್ಚುಗೆ ಗಳಿಸಿದ್ದರು ಎಂದರು.
ಈ ವೇಳೆ ಮಾಜಿ ಸಚಿವ ರಾಮಚಂದ್ರಗೌಡ, ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಮತ್ತು ಶಾಸಕ ಎಚ್.ಸಿ.ಬಾಲಕೃಷ್ಣ, ಶಾಸಕ ಎ.ಮಂಜು, ಕೃಷಿ ವಿವಿಯ ವಿಶ್ರಾಂತ ಕುಲಪತಿ ಡಾ.ಕೆ.ನಾರಾಯಣಗೌಡ, ನಂಜೇಗೌಡರ ಕುಟುಂಬಸ್ಥರು ಸೇರಿದಂತೆ ಮತ್ತಿತರರು ಇದ್ದರು.