ಇಡೀ ರಾಜ್ಯವು ಬರದಿಂದ ಸಂಕಷ್ಟಕ್ಕೆ ತುತ್ತಾಗಿದ್ದು, ಜಗಳೂರು ಸೇರಿದಂತೆ ರಾಜ್ಯದ ಎಲ್ಲ ತಾಲೂಕುಗಳಿಗೆ ತಕ್ಷಣವೇ ತಲಾ ₹50 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಸಂಕಷ್ಟಕ್ಕೆ ಸಿಲುಕಿರುವ ರೈತರಿಗಾಗಿ ₹10,000 ಕೋಟಿ ಪರಿಹಾರ ಧನ ವಿಳಂಬವಿಲ್ಲದೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
- ವಿಪಕ್ಷ ನಾಯಕ ಅಶೋಕ್ ಆಗ್ರಹ । ಕಾಮಗೇತನಹಳ್ಳಿಯಲ್ಲಿ ಬರ ಅಧ್ಯಯನ
- - -
ಕನ್ನಡಪ್ರಭ ವಾರ್ತೆ ಜಗಳೂರು
ಇಡೀ ರಾಜ್ಯವು ಬರದಿಂದ ಸಂಕಷ್ಟಕ್ಕೆ ತುತ್ತಾಗಿದ್ದು, ಜಗಳೂರು ಸೇರಿದಂತೆ ರಾಜ್ಯದ ಎಲ್ಲ ತಾಲೂಕುಗಳಿಗೆ ತಕ್ಷಣವೇ ತಲಾ ₹50 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಸಂಕಷ್ಟಕ್ಕೆ ಸಿಲುಕಿರುವ ರೈತರಿಗಾಗಿ ₹10,000 ಕೋಟಿ ಪರಿಹಾರ ಧನ ವಿಳಂಬವಿಲ್ಲದೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದರು.
ತಾಲೂಕಿನ ಕಾಮಗೇತನಹಳ್ಳಿ ಸೇರಿದಂತೆ ವಿವಿಧ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮೆಕ್ಕೇಜೋಳ, ಹತ್ತಿ ಬೆಳೆ ಖುದ್ದು ಪರಿಶೀಲನೆ ನಡೆಸಿದರು. ಅನಂತರ ಸುದ್ಧಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಆಡಳಿತದಲ್ಲಿ ಬರಗಾಲ ಎದುರಾದಾಗ ಒಂದೇ ತಿಂಗಳಲ್ಲಿ ರೈತರಿಗೆ ಪರಿಹಾರ ನೀಡಲಾಗಿತ್ತು. ಪರಿಹಾರ ಮೊತ್ತ ದುಪ್ಪಟ್ಟು ಮಾಡಲಾಗಿತ್ತು. ರಾಜ್ಯ ಸರ್ಕಾರವು ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಕೇಂದ್ರ ಸರ್ಕಾರದ ಕಡೆಗೆ ಬೆರಳು ತೋರಿಸುತ್ತಿದೆ. ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯದರ್ಶಿಗಳು ಸರಿಯಾದ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸದೇ, ಕೇವಲ ಸಚಿವ ಸಂಪುಟ ರಚನೆ ಹಾಗೂ ರಾಜಕೀಯದಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ತರಾಟೆ ತೆಗೆದುಕೊಂಡರು. ಸರ್ಕಾರ ತಕ್ಷಣವೇ ಎಚ್ಚೆತ್ತು ರೈತರ ಮನೆ ಬಾಗಿಲಿಗೆ ತೆರಳಿ, ಕುಂದುಕೊರತೆಗಳ ಆಲಿಸಿ ಬರ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.
ಸಂಸದರ ಸಭೆಯಲ್ಲಿ ಚರ್ಚಿಸಿಲ್ಲ:
ಇತ್ತೀಚೆಗೆ ಸಂಸದರ ಸಭೆಯಲ್ಲಿ ರಾಜ್ಯದ ಸಂಸದರೆಲ್ಲರೂ ಭಾಗವಹಿಸಿದ್ದರೂ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬರ ಪರಿಸ್ಥಿತಿ ಕುರಿತು ಮತ್ತು ರಾಜ್ಯಕ್ಕೆ ಆಗಬೇಕಿರುವ ಸಹಾಯದ ಕುರಿತು ಯಾವುದೇ ಚರ್ಚೆ ನಡೆಸಿಲ್ಲ. ಕೇಂದ್ರದ ಎಲ್ಲ ಸಚಿವರು "ಕರ್ನಾಟಕದ ವಿಚಾರವಾಗಿ ಯಾವುದೇ ರಾಜಕಾರಣ ಮಾಡುವುದಿಲ್ಲ " ಎಂದು ರಾಜ್ಯ ಬಿಜೆಪಿ ವತಿಯಿಂದ ಕೇಂದ್ರ ಸರ್ಕಾರಕ್ಕೆ ಬರದ ಬಗ್ಗೆ ಮನವಿ ಮಾಡಬಹುದಿತ್ತಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಸ್ಪಷ್ಟಪಡಿಸಿದರು.
ಕಾಲಹರಣ:
ಮುಖ್ಯಮಂತ್ರಿ ಮತ್ತು ಸಚಿವರು ಕೇವಲ ದೇವಸ್ಥಾನಗಳನ್ನು ಸುತ್ತುವುದು ಹಾಗೂ ಕ್ಯಾಬಿನೆಟ್ ಮತ್ತು ಸಚಿವ ಸಂಪುಟದ ವಿಸ್ತರಣೆ/ ರಚನೆಗಳಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ಸರ್ಕಾರ ಬಂದು ಒಂದೆರಡು ತಿಂಗಳಾದರೂ ಜನರಿಗೆ ನೀಡಿದ ಭರವಸೆಗಳಲ್ಲಿ ಹೊಸದೇನೂ ಇಲ್ಲ. "ಅದೇ ಬಾಟಲಿ, ಅದೇ ಮದ್ಯ, ಅದೇ ಹೆಂಡ " ಎನ್ನುವಂತೆ ಹಳೆಯ ಆಡಳಿತ ವೈಖರಿಯೇ ಮುಂದುವರಿದಿದೆ. ಜನರಿಗೆ ಇದರಿಂದ ಯಾವುದೇ ಅನುಕೂಲವಾಗಿಲ್ಲ. ತಕ್ಷಣವೇ ಪ್ರತಿ ಜಿಲ್ಲೆ/ತಾಲೂಕುಗಳ ಮಟ್ಟದಲ್ಲಿ ಪರಿಶೀಲಿಸಿ ಬರ ಘೋಷಣೆ ಮಾಡಬೇಕು. ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವ, ಶಾಸಕ ಬೈರತಿ ಬಸವರಾಜು, ಹರಿಹರ ಶಾಸಕ ಬಿ.ಪಿ.ಹರೀಶ್, ಹೂವಿನಹಡಗಲಿ ಕೃಷ್ಣನಾಯಕ್, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್, ವಿಧಾನ ಪರಿಷತ್ ಸದಸ್ಯ ನವೀನ್, ಬಿಜೆಪಿ ಮುಖಂಡರಾದ ಜಿ.ಎಸ್.ಅನಿತ್, ಮಂಡಲ ಬಿಜೆಪಿ ಅಧ್ಯಕ್ಷ ಮರುಳಾರಾಧ್ಯ, ಅರಸಿಕೆರೆ ಕೆಂಚನಗೌಡ, ಬಿಜೆಪಿ ಪ್ರಮುಖ ನಾಯಕರು, ಕಾರ್ಯಕರ್ತರು ಮತ್ತು ಸ್ಥಳೀಯ ರೈತ ಮುಖಂಡರು ಉಪಸ್ಥಿತರಿದ್ದರು.
- - -
-29ಜೆ.ಜಿ.ಎಲ್.1: ವಿಪಕ್ಷ ನಾಯಕ ಆರ್.ಅಶೋಕ್ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಬರಪೀಡಿತ ಪ್ರದೇಶದ ಕಾಮಗೇತನಹಳ್ಳಿಯಲ್ಲಿ ಬರ ಅಧ್ಯಯನ ವೇಳೆ ಮೆಕ್ಕೇಜೋಳ, ಹತ್ತಿ ಬೆಳೆ ಪರಿಶೀಲನೆ ನಡೆಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.