ಹೋರಾಟಗಾರರನ್ನು ಬಿಡುಗಡೆಗೊಳಿಸಿ, ಕೇಸ್ ಹಿಂಪಡೆಯಿರಿ

KannadaprabhaNewsNetwork |  
Published : Jan 06, 2026, 04:30 AM IST
 | Kannada Prabha

ಸಾರಾಂಶ

ಯಾರೂ ಸಹ ಈ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಬಾರದು. ಹಲವು ದಶಕಗಳಿಂದ ಆಡಳಿತ ಮಾಡುತ್ತಿರುವ ಸಚಿವ ಶಿವಾನಂದ ಪಾಟೀಲ, ಶಾಸಕ ಸಿ.ಎಸ್.ನಾಡಗೌಡ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಕಾಲೇಜು ಮಾಡಲು ಶ್ರಮಿಸಬೇಕು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಗೆ‌ ಪಿಪಿಪಿ ಮಾದರಿ ಬೇಡ, ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಎಂದು ಆಗ್ರಹಿಸಿ ಹಲವು ಸಂಘಟನೆಗಳಿಂದ ಕಳೆದ 107 ದಿನಗಳಿಂದ ಹೋರಾಟ ನಡೆದಿತ್ತು. ಆದರೆ ಮೊನ್ನೆದಿನ ಹೋರಾಟಗಾರ ಅನೀಲ ಹೊಸಮನಿ ಸೇರಿದಂತೆ ಇತರರನ್ನು ಬಂಧಿಸಿದ್ದಾರೆ. ತಕ್ಷಣ ಎಲ್ಲ ಹೋರಾಟಗಾರರನ್ನೂ ಬಿಡುಗಡೆ ಮಾಡಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಕ್ಷಣ ಹೋರಾಟಗಾರರನ್ನು ಬಿಡುಗಡೆ ಮಾಡದಿದ್ದರೆ, ಮತ್ತೊಂದು ಹೋರಾಟ ಮಾಡುತ್ತೇವೆ. ಹೋರಾಟ ಹತ್ತಿಕ್ಕಲು ಅಮಾನುಷವಾಗಿ ಹೋರಾಟದ ಟೆಂಟ್ ಕಿತ್ತಿದ್ದಾರೆ. ರಾತ್ರೋರಾತ್ರಿ ಕಿತ್ತುಹಾಕಿದ ಟೆಂಟ್‌ ಅನ್ನು ಮತ್ತೆ ಸ್ಥಾಪಿಸಿ ಕೊಡಬೇಕು. ಜ.9ರಂದು ಸಿಎಂ ಜಿಲ್ಲೆಗೆ ಬರಲಿದ್ದು, ಅಷ್ಟರೊಳಗೆ ಸರ್ಕಾರ ತನ್ನ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು. ಸಚಿವ ಶಿವಾನಂದ ಪಾಟೀಲ ಸಹ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಮಾಡಲು ಕಾಳಜಿ ವಹಿಸಬೇಕು. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಒಕ್ಕಟ್ಟಾಗಿ ಸರ್ಕಾರಿ ಮೆಡಿಕಲ್ ಕಾಲೇಜು ತರಬೇಕು. ಉಸ್ತುವಾರಿ ಸಚಿವರು ಸಿಎಂ ಆಗಬೇಕು ಎಂಬ ಆಸೆ ನಮಗೂ ಇದೆ, ಆದರೆ ಅದಕ್ಕಾಗಿ ಅವರು ಜನರಿಗೆ ಅನುಕೂಲ ಕಲ್ಪಿಸಲು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂದರು.

ಯಾರೂ ಸಹ ಈ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಬಾರದು. ಹಲವು ದಶಕಗಳಿಂದ ಆಡಳಿತ ಮಾಡುತ್ತಿರುವ ಸಚಿವ ಶಿವಾನಂದ ಪಾಟೀಲ, ಶಾಸಕ ಸಿ.ಎಸ್.ನಾಡಗೌಡ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಕಾಲೇಜು ಮಾಡಲು ಶ್ರಮಿಸಬೇಕು. ಜಿಲ್ಲೆಯ ಎಲ್ಲ ಶಾಸಕರು ಒಕ್ಕಟ್ಟಾಗಿ ಸಿಎಂ ಬಳಿಗೆ ನಿಯೋಗ ಹೋಗಿ ಎಂ.ಬಿ.ಪಾಟೀಲರಿಗೆ ಶಕ್ತಿ ತುಂಬಬೇಕು. ಈ ಹೋರಾಟ ಬೂದಿ ಮುಚ್ಚಿದ ಕೆಂಡದಂತಾಗಿದೆ. ಈಗ ಹೋರಾಟದ ಮಾದರಿ ಬದಲಾಗಿದ್ದು, ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜ.9ರೊಳಗೆ ನಿರ್ಣಯ ತೆಗೆದುಕೊಳ್ಳದಿದ್ದರೆ ಮತ್ತೊಂದು ಹೋರಾಟದ ಜನಾಂದೋಲನ ಅಭಿಯಾನ ಆರಂಭವಾಗಲಿದೆ. 150ಕ್ಕೂ ಅಧಿಕ ಸಂಘಟನೆಗಳ‌ ಬೆಂಬಲದಿಂದ ನಾವು ಕಳೆದುಕೊಂಡ ಎಲ್ಲ ಯೋಜನೆಗಳನ್ನು ತರಲು ಮತ್ತೊಂದು ಹಂತದ ಹೋರಾಟ ನಡೆಯಲಿದೆ ಎಂದರು.

ಹೋರಾಟಗಾರ ಪ್ರಭುಗೌಡ ಪಾಟೀಲ ಮಾತನಾಡಿ, ಸರ್ಕಾರಿ ಮೆಡಿಕಲ್ ಕಾಲೇಜು ಘೋಷಣೆ ಬಗ್ಗೆ ಜ.9ರಂದು ಜಿಲ್ಲೆಗೆ ಬರಲಿರುವ ಸಿಎಂ ಅವರು ಸ್ಪಷ್ಟಪಡಿಸಬೇಕು. ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲು ಜ.1ರಂದು ಎಂ.ಬಿ.ಪಾಟೀಲರ ಮನೆಮುಂದೆ ಹೋಗಿದ್ದೆವು. ಆ ವೇಳೆ ನಮ್ಮ ಹೋರಾಟವನ್ನು ಹತ್ತಿಕ್ಕಲಾಗಿದೆ. ನಮ್ಮ ಯೋಜನೆಯಂತೆ ಜ.2ರಂದು ಸಚಿವ ಶಿವಾನಂದ ಪಾಟೀಲರ ಮನೆಮುಂದೆ, ಜ.3ರಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಮನೆಮುಂದೆ ಹೋರಾಟ ಇತ್ತು. ಆದರೆ ಇದನ್ನು ಮುತ್ತಿಗೆ ಎಂದು ಅಪಾರ್ಥ ಮಾಡಿಕೊಂಡು ಹತ್ತಿಕ್ಕಲಾಗಿದೆ. ಸಚಿವ ಎಂ.ಬಿ‌.ಪಾಟೀಲರ ಹೆಸರು ಕೆಡಿಸಲು ಪೊಲೀಸ್ ಇಲಾಖೆಯಿಂದ ನಮ್ಮ ಮೇಲೆ ದೌರ್ಜನ್ಯ ಮಾಡಲಾಗಿದೆ. ಎಲ್ಲ ಪ್ರಗತಿಪರ ಹೋರಾಟಗಾರರು ನಡೆಸುತ್ತಿದ್ದ ಹೋರಾಟವನ್ನು ದಮನ ಮಾಡುವ ಕೆಲಸ ಮಾಡಬಾರದಿತ್ತು. ಈಗಾಗಲೇ ಬಂಧಿಸಿದ ಹೋರಾಟಗಾರರನ್ನು ತಕ್ಷಣ ಬಿಡುಗಡೆಗೊಳಿಸಿ, ಅವರ ಮೇಲಿನ ಪ್ರಕರಣ ತೆಗೆದುಹಾಕಬೇಕು ಎಂದು ಮನವಿ ಮಾಡಿದರು.

ಹೋರಾಟಗಾರ ಚೆನ್ನು ಕಟ್ಟಿಮನಿ ಮಾತನಾಡಿ, 107 ದಿನಗಳ ಸರ್ಕಾರಿ ಮೆಡಿಕಲ್ ಕಾಲೇಜು ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಿದ್ದು ಖೇದಕರವಾಗಿದೆ. ಹೋರಾಟಗಾರರನ್ನು ಜಿಲ್ಲೆಯ ಜನರು ಬೆಂಬಲಿಸದಿರುವುದು ಹೋರಾಟಗಾರರ ಆತ್ಮಸ್ಥೈರ್ಯ ಕುಂದಿಸಿದೆ. ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಅವಶ್ಯಕತೆ ಇರುವುದರಿಂದ ಸರ್ಕಾರ ಅದನ್ನು ಮಾಡಲೇಬೇಕು ಎಂದರು. ಅಕ್ಷಯಕುಮಾರ ಅಜಮನಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ