ಹೇಮಾವತಿ ಅಣೆಕಟ್ಟೆಯಿಂದ ನೀರು ಹರಿಸಿ ಕೆರೆಕಟ್ಟೆ ತುಂಬಿಸಿ: ಮಾಜಿ ಸಚಿವ ಸಿ.ಎಸ್.ಪುಟ್ಟರಾಜು

KannadaprabhaNewsNetwork |  
Published : Jul 29, 2026, 01:45 AM IST
28ಕೆಎಂಎನ್ ಡಿ13 | Kannada Prabha

ಸಾರಾಂಶ

ಹೇಮಾವತಿ ಅಣೆಕಟ್ಟೆ ವ್ಯಾಪ್ತಿಯ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ ತಾಲೂಕಿನಲ್ಲಿ ಲಕ್ಷಾಂತರ ಎಕ್ಟೇರ್ ಕೃಷಿ ಭೂಮಿ ಅವಲಂಭಿತವಾಗಿದೆ. ಹೇಮಾವತಿ ವ್ಯಾಪ್ತಿಯ ಪ್ರದೇಶದಲ್ಲಿ ಕೆರೆಕಟ್ಟೆಗಳು, ಹಳ್ಳಕೊಳ್ಳಲ್ಲದಲ್ಲಿ ಹನಿ ನೀರು ಇಲ್ಲದಂತೆ ಸಂಪೂರ್ಣವಾಗಿ ಬರಿದಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಹೇಮಾವತಿ ಅಣೆಕಟ್ಟೆಯಿಂದ ಮಂಡ್ಯ ಜಿಲ್ಲೆ ನಾಲೆಗಳಿಗೆ ನೀರು ಹರಿಸಿ ಜನ-ಜಾನುವಾರುಗಳ ಕುಡಿಯುವ ನೀರು ಹಾಗೂ ಕೆರೆಕಟ್ಟೆ ತುಂಬಿಸುವಂತೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸರ್ಕಾರವನ್ನು ಒತ್ತಾಯಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೇಮಾವತಿ ಅಣೆಕಟ್ಟೆ ವ್ಯಾಪ್ತಿಯ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ ತಾಲೂಕಿನಲ್ಲಿ ಲಕ್ಷಾಂತರ ಎಕ್ಟೇರ್ ಕೃಷಿ ಭೂಮಿ ಅವಲಂಭಿತವಾಗಿದೆ. ಹೇಮಾವತಿ ವ್ಯಾಪ್ತಿಯ ಪ್ರದೇಶದಲ್ಲಿ ಕೆರೆಕಟ್ಟೆಗಳು, ಹಳ್ಳಕೊಳ್ಳಲ್ಲದಲ್ಲಿ ಹನಿ ನೀರು ಇಲ್ಲದಂತೆ ಸಂಪೂರ್ಣವಾಗಿ ಬರಿದಾಗಿದೆ ಎಂದರು.

ರೈತರು ಬೋರ್ ಬೆಲ್ ಒತ್ತಿ ನೀರು ಹೊರತೆಯುವ ಪರಿಸ್ಥಿತಿ ಎದುರಾಗಿದೆ. ಹೇಮಾವತಿ ಅಣೆಕಟ್ಟೆಯಲ್ಲಿ 23 ಟಿಎಂಸಿ ನೀರು ಸಂಗ್ರಹವಾಗಿದೆ. ಅಣೆಕಟ್ಟೆಯಲ್ಲಿ ಡೆಡ್ ಸ್ಟೋರೇಜ್ ಹಾಗೂ ಕುಡಿಯುವ ನೀರಿಗಾಗಿ ಸಂಗ್ರಹಿಸಿಟ್ಟುಕೊಂಡು ಉಳಿಕೆ ನೀರನ್ನು ನಮ್ಮ ವ್ಯಾಪ್ತಿಯಲ್ಲಿ ಜನ-ಜಾನುವಾರುಗಳ ಕುಡಿಯುವ ನೀರಿಗೆ ಅನುಕೂಲವಾಗಲು ಕೆರೆಕಟ್ಟೆಗಳನ್ನು ತುಂಬಿಸಲು ನಾಲೆಗೆಳಿಗೆ ಶೀಘ್ರವೇ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ಹೇಮಾವತಿ ನಾಲೆಗಳಿಗೆ ನೀರುಹರಿಸುವ ವಿಚಾರದಲ್ಲಿ ಶಾಸಕಗಳು ಮೌನವಹಿಸಿದ್ದಾರೆ. ಕೆರೆಕಟ್ಟೆಗಳು ತುಂಬಿಸಲು ಕೂಡಲೇ ನೀರು ಹರಿಸದಿದ್ದರೆ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತರಿಗೆ ಬೆಳೆ ಪರಿಹಾರ ಘೋಷಣೆ ಮಾಡಿ:

ಕಳೆದ ವರ್ಷ ಕೆಆರ್‌ಎಸ್ ಅಣೆಕಟ್ಟೆ ಅವಧಿಗೂ ಮುನ್ನವೇ ಭರ್ತಿಯಾಗಿದ್ದರೂ ಸಹ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ನೀರು ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ನೀರಿನ ಕೊರತೆಯಿಂದ ಜಿಲ್ಲೆಯಲ್ಲಿ ಬೆಳೆದಿರುವ ಕಬ್ಬು ಬೆಳೆಗೆ ನೀರಿಲ್ಲದೆ ಸಂಪೂರ್ಣ ಒಣಗಿ ಹೋಗಿವೆ ಎಂದರು.

ಅಣೆಕಟ್ಟೆಯಲ್ಲಿ 90 ಅಡಿಗೂ ಅಧಿಕ ನೀರಿದ್ದರೂ ಸಹ ಸಕಾಲಕ್ಕೆ ನಾಲೆಗೆ ನೀರು ಹರಿಸಲಿಲ್ಲ. ಇದರಿಂದ ರೈತರ ಕೋಟ್ಯಂತರ ರು. ಬೆಳೆ ನಷ್ಟವಾಗಿದೆ. ಹಾಗಾಗಿ ಜಿಲ್ಲಾಡಳಿತ ಕೂಡಲೇ ರೈತರಿಗೆ ಬೆಳೆ ಪರಿಹಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ನಾನು ಸಚಿವನಾಗಿ ಕೆಲಸ ಮಾಡುತ್ತಿದ್ದಾಗ ಕುಡಿಯುವ ನೀರು, ಕೆರೆ-ಕಟ್ಟೆಗಳ ತುಂಬಿಸಿ ಕೃಷಿಗೆ ನೀರು ಪೂರೈಕೆ ಮಾಡಬೇಕು ಎಂಬ ಸದುದ್ದೇಶದಿಂದ ಕೋಟ್ಯಂತರ ರು. ವೆಚ್ಚದಲ್ಲಿ ಬಳಘಟ್ಟ, ದುದ್ದ, ಶ್ಯಾದನಹಳ್ಳಿ, ಬಳೇಅತ್ತಿಗುಪ್ಪೆ ಗ್ರಾಮಗಳ ಏತನೀರಾವರಿ ಯೋಜನೆಗಳನ್ನು ನಿರ್ಮಿಸಲಾಗಿದೆ ಎಂದರು.

ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಕೇವಲ 60 ಅಡಿ ನೀರು ಇದ್ದರೂ ಸಹ ಈ ಏತನೀರಾವರಿ ಯೋಜನೆ ಮೂಲಕ ನೀರೆತ್ತಿ ಕೆರೆಕಟ್ಟೆಗಳನ್ನು ಭರ್ತಿ ಮಾಡಿ ರೈತರಿಗೂ ಅನುಕೂಲ ಮಾಡಿಕೊಡಬಹುದು. ಆದರೆ, ಅಧಿಕಾರಿಗಳ ಧೋರಣೆ ನೀತಿಯಿಂದ ಆ ಯೋಜನೆ ಸರಿಯಾಗಿ ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.

ಈ ವರ್ಷ ಅಣೆಕಟ್ಟೆಯಲ್ಲಿ ನೀರು ಇದ್ದರೂ ನೀರು ತುಂಬಿಸುವ ಕೆಲಸ ಮಾಡಲಿಲ್ಲ. ತಮಿಳುನಾಡಿಗೆ ನೀರು ಬಿಡಲು ಅಣೆಕಟ್ಟೆಯಲ್ಲಿ ನೀರು ಇಟ್ಟುಕೊಂಡಿದ್ದಾರೇನೋ? ಅನಿಸುತ್ತಿದೆ. ಕೂಡಲೇ ಏತನೀರಾವರಿ ಯೋಜನೆಗಳ ಮೂಲಕ ಕೆರೆಕಟ್ಟೆ ತುಂಬಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಜುಲೈ 30ರಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಧರ್ಮಪತ್ನಿ ಚನ್ನಮ್ಮರ 11ನೇ ದಿನದ ತಿಥಿ ಕಾರ್ಯ ನಡೆಯಲಿದೆ. ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸಬೇಕು. ಸಾರಿಗೆ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂಸಿದರು.

ಸುದ್ದಿಗೋಷ್ಠಿಯಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಚಿಕ್ಕಾಡೆ ಗಿರೀಶ್, ನಿರ್ದೇಶಕ ಆದರ್ಶ, ಪುರಸಭೆ ಮಾಜಿ ಅಧ್ಯಕ್ಷರಾದ ಆರ್.ಸೋಮಶೇಖರ್, ಎಂ.ಗಿರೀಶ್, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಕೋಡಿ, ಉಮೇಶ್, ಶಶಿ,ಗುರು ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿ ಗ್ರಾ.ಪಂನಲ್ಲಿ ಅರ್ಹ ಮೂವರು ಗೃಹಲಕ್ಷ್ಮಿಯರಿಗೆ ಸನ್ಮಾನ: ಎಲ್.ಪಿ. ಪ್ರಕಾಶ್‌ಗೌಡ
ಸೌಲಭ್ಯ ವಂಚಿತರಿಗೆ ನೆರವಾಗುವ ದೊಡ್ಡ ಸಂಸ್ಥೆ ರೋಟರಿ: ಅಲೆನ್ ವಿನಯ್ ಲಿವಿಸ್