ಕ್ರೀಡೆಯಿಂದ ಮಾನಸಿಕ ಒತ್ತಡಕ್ಕೆ ಮುಕ್ತಿ: ಡಿಸಿ ಶ್ರೀಧರ್‌

KannadaprabhaNewsNetwork |  
Published : Oct 08, 2026, 02:15 AM IST
ಕ್ರೀಡಾಕೂಟವನ್ನ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಉದ್ಘಾಟಿಸಿದರು. | Kannada Prabha

ಸಾರಾಂಶ

ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕೇವಲ ಓದು, ಬರವಣಿಗೆ, ಮನೆಕೆಲಸಗಳಿಗೆ ಸೀಮಿತವಾಗದೆ, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಜೀವನದ ಮಾನಸಿಕ ಒತ್ತಡ ಕಡಿಮೆಯಾಗಿ ಸರ್ವಾಂಗೀಣ ವಿಕಾಸ ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಗದಗ

ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕೇವಲ ಓದು, ಬರವಣಿಗೆ, ಮನೆಕೆಲಸಗಳಿಗೆ ಸೀಮಿತವಾಗದೆ, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಜೀವನದ ಮಾನಸಿಕ ಒತ್ತಡ ಕಡಿಮೆಯಾಗಿ ಸರ್ವಾಂಗೀಣ ವಿಕಾಸ ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.

ನಗರದ ಲೊಯಲಾ ಪ್ರಾಥಮಿಕ ಪ್ರೌಢಶಾಲೆಯ ಆವರಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ 2026-27ನೇ ಸಾಲಿನ ಬೆಳಗಾವಿ ವಿಭಾಗ ಮಟ್ಟದ 14-17 ವಯೋಮಿತಿಯ ಬಾಲಕ ಬಾಲಕಿಯರ ಬಾಸ್ಕೆಟ್‌ಬಾಲ್ ಕ್ರೀಡಾಕೂಟ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ವ್ಯಕ್ತಿಗತ ಆಟಗಳಿಗಿಂತ ತಂಡದ ಆಟಗಳು ಹೆಚ್ಚು ಸವಾಲಿನದ್ದಾಗಿರುತ್ತವೆ. ಇಲ್ಲಿ ಎಲ್ಲರೂ ಒಂದಾಗಿ, ಪರಸ್ಪರ ಸಾಮರಸ್ಯದಿಂದ ಆಡುವುದು ಮತ್ತು ಒಗ್ಗಟ್ಟಿನಿಂದ ಆಲೋಚಿಸುವುದು ಅತ್ಯಗತ್ಯ ಎಂದರು.

ಸೋಲು-ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವಿಕೆ ಮುಖ್ಯ, ಸೋತ ತಕ್ಷಣವೇ ಕ್ರೀಡಾಪಟುಗಳು ನಿರಾಶರಾಗಬಾರದು. ಆಯಾ ದಿನದ ಪ್ರದರ್ಶನ ಗೆಲುವನ್ನು ನಿರ್ಧರಿಸುತ್ತದೆಯೇ ಹೊರತು, ಕ್ರೀಡಾಪಟುವಿನ ಪ್ರತಿಭೆಯನ್ನಲ್ಲ. ಕ್ರೀಡೆಯಲ್ಲಿ ಸದಾ ಸುಧಾರಣೆಗೆ ಅವಕಾಶವಿರುತ್ತದೆ ಎಂದು ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆರ್.ಎಸ್. ಬುರಡಿ ಮಾತನಾಡಿ, ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಶಿಕ್ಷಣ ಮತ್ತು ರಕ್ಷಣೆಯ ಜೊತೆಗೆ ಕ್ರೀಡೆಗಳು ಅತ್ಯಂತ ಅಗತ್ಯ. ಕ್ರೀಡಾ ಚಟುವಟಿಕೆಗಳು ಮಕ್ಕಳಲ್ಲಿ ಶಿಸ್ತು, ಸಮಯ ಪಾಲನೆ, ಸಮನ್ವಯತೆ ಸಕ್ರಿಯ ಭಾಗಿತ್ವ ಹಾಗೂ ಸೋಲನ್ನು ಮೆಟ್ಟಿ ನಿಲ್ಲುವ ಆತ್ಮವಿಶ್ವಾಸವನ್ನು ಬೆಳೆಸುತ್ತವೆ ಎಂದರು.

ಕ್ರೀಡೆಗಳಲ್ಲಿ ತೊಡಗಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುವುದಲ್ಲದೆ, ದುರಭ್ಯಾಸಗಳಿಂದ ದೂರವಿರಲು ಸಾಧ್ಯವಾಗುತ್ತದೆ. ಕ್ರೀಡೆಯು ನಿಯಮಬದ್ಧ ಶಿಸ್ತು ಹಾಗೂ ಸಮಯ ಪ್ರಜ್ಞೆಯನ್ನು ಕಲಿಸುತ್ತದೆ. ಜೀವನದಲ್ಲಿ ಎದುರಾಗುವ ಸೋಲಿನಿಂದ ಹೇಗೆ ಹೊರಬಂದು ಮತ್ತೆ ಸಾಧನೆ ಮಾಡಬೇಕೆಂಬ ಆತ್ಮವಿಶ್ವಾಸವನ್ನು ನೀಡುತ್ತದೆ ಎಂದರು.

ಈ ವೇಳೆ ಉಪ ವಿಭಾಗಾಧಿಕಾರಿ ಗಂಗಪ್ಪ ಎಂ., ಡಾ. ಶರಣು ಗೋಗೇರಿ, ಎಂ.ಎಚ್. ಕಂಬಳಿ, ಎಸ್.ಡಿ. ಕನವಳ್ಳಿ, ರವಿ ಪ್ರಕಾಶ, ಗಾಯಿತ್ರಿದೇವಿ ಎಂ., ವಿ.ವಿ. ನಡುವಿನಮನಿ, ಎಂ.ಪಿ. ಗೊಟೂರು, ಸಿಸ್ಟರ್ ಲೆವಿನಾ, ಎಚ್.ಬಿ. ರಡ್ಡೆರ, ಎಂ.ಎಚ್. ಸವದತ್ತಿ, ಲೊಯಲಾ ವೆನಿಗ್ನಾ ಸೇರಿ ದೈಹಿಕ ಶಿಕ್ಷಕರು, ಕ್ರೀಡಾಪಟುಗಳು ಇದ್ದರು.

ಕೆಕೆಪಿಪಿಜಿ ಸಂಗೀತ ಪಾಠ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರೀಯ ಗೀತೆ ಮತ್ತು ನಾಡಗೀತೆ ಪ್ರಸ್ತುತ ಪಡಿಸಿದರು. ಎಂ.ಎಸ್. ಕುಚಬಾಳ ನಿರೂಪಿಸಿದರು. ಶಿವಕುಮಾರ ಕುರಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವರ್ಣವಲ್ಲೀ ಮಠದ ನೂತನ ಆಡಳಿತ ಮಂಡಳಿಗೆ ಪದಾಧಿಕಾರಿಗಳ ಆಯ್ಕೆ
ಹಳಿಯಾಳದಲ್ಲಿ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಗೆ ತೆರೆ