ಗುಡ್ಡ ಕುಸಿತ ಸಂತ್ರಸ್ತರಿಗೆ ರಾಮಚಂದ್ರಾಪುರ ಮಠದಿಂದ ನೆರವು

KannadaprabhaNewsNetwork |  
Published : Jul 27, 2024, 12:49 AM IST
ಶಿರೂರು ಗುಡ್ಡಕುಸಿತ ಸಂತ್ರಸ್ತರಿಗೆ ಅಗತ್ಯ ಸಾಮಗ್ರಿ ನೀಡಲಾಯಿತು. | Kannada Prabha

ಸಾರಾಂಶ

ಗೋಕರ್ಣದ ಅಶೋಕೆಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಶ್ರೀಮಠದ ನಿಯೋಗವನ್ನು ಘಟನಾ ಸ್ಥಳಕ್ಕೆ ಅಗತ್ಯ ನೆರವಿನ ವಸ್ತುಗಳೊಂದಿಗೆ ಕಳುಹಿಸಿಕೊಟ್ಟಿದ್ದಾರೆ.

ಗೋಕರ್ಣ: ಶಿರೂರು ಗುಡ್ಡ ಕುಸಿತದ ಸಂದರ್ಭದಲ್ಲಿ ಗಂಗಾವಳಿ ನದಿ ನೀರು ಅಪ್ಪಳಿಸಿ ಏಳು ಮನೆಗಳು ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ಸಂತ್ರಸ್ತ ಕುಟುಂಬಗಳಿಗೆ ರಾಮಚಂದ್ರಾಪುರ ಮಠ ಸಹಾಯಹಸ್ತ ಚಾಚಿದೆ.ಗೋಕರ್ಣದ ಅಶೋಕೆಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಶ್ರೀಮಠದ ನಿಯೋಗವನ್ನು ಘಟನಾ ಸ್ಥಳಕ್ಕೆ ಅಗತ್ಯ ನೆರವಿನ ವಸ್ತುಗಳೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ತಂಡ, ಸಂತ್ರಸ್ತರಿಗೆ ಸಾಂತ್ವನ ಹೇಳಿ, ನಗದು, ಆಹಾರ ಧಾನ್ಯದ ಕಿಟ್‌ಗಳನ್ನು ಸಂತ್ರಸ್ತರ ಕುಟುಂಬಗಳಿಗೆ ವಿತರಿಸಿತು.ರಾಘವೇಶ್ವರ ಭಾರತೀ ಸ್ವಾಮೀಜಿ ಮತ್ತು ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮಾರ್ಗದರ್ಶನದಲ್ಲಿ ವಿವಿವಿ ಆಡಳಿತಾಧಿಕಾರಿ ಡಾ. ಪ್ರಸನ್ನ ಕುಮಾರ್, ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ಪ್ರಾಂತ ಉಪಾಧ್ಯಕ್ಷ ಜಿ.ಎಸ್. ಹೆಗಡೆ, ಕುಮಟಾ ಮಂಡಲ ಅಧ್ಯಕ್ಷ ಸುಬ್ರಾಯ ಭಟ್ ಅವರ ನೇತೃತ್ವದಲ್ಲಿ ತಂಡ ಎಲ್ಲ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳುವ ಜತೆಗೆ ಕಾಳಜಿ ಕೇಂದ್ರಕ್ಕೂ ಭೇಟಿ ನೀಡಿ ಆಸರೆ ಪಡೆದಿರುವ ೮೩ ಮಂದಿಯ ಊಟೋಪಚಾರಕ್ಕೆ ದಿನಸಿ ವಿತರಿಸಿದರು. ಘಟನೆ ಬಗ್ಗೆ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಆಘಾತ ವ್ಯಕ್ತಪಡಿಸಿದ್ದು, ಶ್ರೀಗಳು ಚಾತುರ್ಮಾಸ ವ್ರತಾಚರಣೆಯಲ್ಲಿರುವುರಿಂದ ಎಲ್ಲೂ ಹೊರ ಹೋಗುವಂತಿಲ್ಲ. ಆದರೆ ಸಂತ್ರಸ್ತರ ಸಂಕಷ್ಟಗಳಿಗೆ ಸ್ಪಂದಿಸಿ ನಿಯೋಗವನ್ನು ಕಳುಹಿಸಿಕೊಟ್ಟಿದ್ದಾರೆ. ಸಂತ್ರಸ್ತರು ಸ್ಥೈರ್ಯ ಕಳೆದುಕೊಳ್ಳುವ ಅಗತ್ಯವಿಲ್ಲ. ಶ್ರೀಮಠ ಸದಾ ನಿಮ್ಮ ಬೆಂಬಲಕ್ಕಿದೆ ಎಂಬ ಸ್ವಾಮೀಜಿಯವರ ಅಭಯವನ್ನು ಸಂತ್ರಸ್ತರಿಗೆ ತಿಳಿಸಲಾಯಿತು.

ಸಗಡಗೇರಿ ಪಂಚಾಯಿತಿ ಸದಸ್ಯ ಕೃಷ್ಣಗೌಡ, ಜಗದೀಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಾಗೇಶ್ ಗೌಡ, ಗೋಕರ್ಣ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮನಾ ಗೌಡ, ಹನೇಹಳ್ಳಿ ಪಂಚಾಯಿತಿ ಅಧ್ಯಕ್ಷ ಸಣ್ಣುಗೌಡ, ಹಾಲಕ್ಕಿ ಸಮಾಜದ ಮುಖಂಡರಾದ ಶಂಕರಗೌಡ ಹೆಗ್ರೆ, ನಾಗೇಶ್‌ ಗೌಡ ಕುಡ್ಲೆ, ಶ್ರೀಮಠದ ಪ್ರತಿನಿಧಿಗಳಾದ ಎಸ್.ವಿ. ಹೆಗಡೆ, ಗೋಪಾಲಕೃಷ್ಣ ಹೆಗಡೆ ಮತ್ತಿತರರು ನಿಯೋಗದಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರೇಜ್‌ ಮೆಕಾನಿಕ್‌ ಕೊಲೆ ಕೇಸ್‌: 7 ಆರೋಪಿಗಳ ಸೆರೆ
ಪೋಟೋ ಫ್ರೇಮ್‌ನಲ್ಲಿ ಅಡಗಿಸಿಟ್ಟುಸಾಗಿಸುತ್ತಿದ್ದ 37 ಲಕ್ಷದ ಗಾಂಜಾ ಜಪ್ತಿ