ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ತಾಲೂಕಿನ ನಾಗೂರ ಗ್ರಾಮದ ಆರಾಧ್ಯದೈವ ಯಮನೂರೇಶ್ವರ (ರಾಜಾಭಕ್ಷಾರ) ಉರುಸಿನಂಗವಾಗಿ ಭಾರತರತ್ನ ಡಾ.ಎ.ಪಿ.ಜೆ.ಅಬ್ದುಲಕಲಾಂ ಯುವಕ ಸಂಘವು ಹಮ್ಮಿಕೊಂಡಿದ್ದ ರಿವಾಯಿತ್ ಪದಗಳ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಪ್ರಧಾನಿಯಿದ್ದಾಗ ಡಾ.ಅಬ್ದುಲ್ ಕಲಾಂ ಅವರ ಆದರ್ಶ ವ್ಯಕ್ತಿತ್ವದಿಂದಾಗಿ ದೇಶದ ರಾಷ್ಟ್ರಪತಿಯನ್ನಾಗಿ ಮಾಡುವ ಮೂಲಕ ಜಾತಿ,ಧರ್ಮ ಮುಖ್ಯವಲ್ಲ ಎಂಬ ಸಂದೇಶ ನೀಡಿದರು. ಒಂದು ದೀಪದಿಂದ ಸಾವಿರ ದೀಪಗಳನ್ನು ಬೆಳಗಿದರೂ ಮೂಲದೀಪಕ್ಕೆ ಬಡತನ ಉಂಟಾಗುವದಿಲ್ಲ. ಸ್ವಾರ್ಥ ಕಡಿಮೆಯಾಗಿ ನಿಸ್ವಾರ್ಥತೆ ಹೆಚ್ಚಾಗಬೇಕಿದೆ. ದೇಶದಲ್ಲಿರುವ ಎಲ್ಲರೂ ಸಾಮರಸ್ಯದಿಂದ ಜೀವನ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಎಲ್ಲ ಬಾಂಧವರು ಅನೋನ್ಯವಾಗಿ ಜೀವನ ಮಾಡುತ್ತಾರೆ. ಅದೇ ಶಿಕ್ಷಣವಂತರಿಂದ ಇಂದು ವಿಷಬೀಜ ಬಿತ್ತಿ ಸಮಾಜದ ಸಾಮರಸ್ಯಕ್ಕೆ ಧಕ್ಕೆಯಾಗುತ್ತಿರುವುದು ದುರಂತದ ಸಂಗತಿ. ನಮ್ಮ ಶ್ರೀಮಠವು ಹಿಂದು-ಮುಸ್ಲಿಂ ಭಾವೈಕ್ಯತೆ ಸಂಕೇತವಾಗಿ ಸಮಾಜಕ್ಕೆ ಸಂದೇಶ ನೀಡುತ್ತದೆ. ಸಾಮರಸ್ಯ ಬೆಸೆಯುವದು ನಮ್ಮ ಶ್ರೀಮಠದ ಕಾಯಕವಾಗಿದೆ. ಸಮಾಜದಲ್ಲಿ ಸಮರ್ಥರು ದುರ್ಬಲರಿಗೆ ಸಹಾಯ ಮಾಡಿದರೆ ದೇಶ ಸಮೃದ್ಧವಾಗುತ್ತದೆ ಎಂದರು.ದೇಶದಲ್ಲಿರುವ ಎಲ್ಲ ಜನರ ರಕ್ತದ ಬಣ್ಣ ಒಂದೇಯಾಗಿದೆ. ರಕ್ತದ ಗುಂಪುಗಳನ್ನು ಮಾತ್ರ ನಾವು ನೋಡುತ್ತೇವೆ. ಯಾರಿಗಾದರೂ ರಕ್ತ ಬೇಕಾದರೇ ಆಗ ಧರ್ಮ ಬರುವದಿಲ್ಲ. ಜಾತಿ ವ್ಯವಸ್ಥೆ ಮನುಷ್ಯರು ಸೃಷ್ಟಿಸಿಕೊಂಡಿದ್ದಾರೆ. ಜಾತಿ ವ್ಯವಸ್ಥೆ, ಧರ್ಮ ವ್ಯವಸ್ಥೆ ಅಪರಿಪೂರ್ಣವಾಗಿ ಅವೈಜ್ಞಾನಿಕವಾಗಿದೆ. ಇದು ಸೈದ್ಧಾಂತಿಕವಾಗಿಲ್ಲ ಎಂದು ಅಭಿಪ್ರಾಯಪಟ್ಟರು.ಕಳೆದ 50 ವರ್ಷದ ಹಿಂದೆ ಸಮಾಜದಲ್ಲಿ ಈಗಿರುವಷ್ಟು ಜಾತಿ ವ್ಯವಸ್ಥೆ ಇರಲಿಲ್ಲ. ಈಚೆಗೆ ಇದು ಹೆಚ್ಚಾಗಿರುವದು ವಿಷಾದನೀಯ ಸಂಗತಿ. ಯಮನೂರೇಶ್ವರ ಉರುಸು ಭಾವೈಕ್ಯತೆಗೆ ಒಂದು ಮಾದರಿಯಾಗಿದೆ. ಎಲ್ಲ ಬಾಂಧವರು ಸಹೋದರತೆಯಿಂದ ಒಂದೇ ಕುಟುಂಬದ ಸದಸ್ಯರಂತೆ ಬಾಳಬೇಕಿದೆ. ಮಂದಿರ-ಮಸೀದಿಗಳು ನಮ್ಮಗಾಗಿ ಇವೆ ಹೊರತು ಅವುಗಳು ಕಲಹ ಮಾಡಲು ಅಲ್ಲ ಎಂಬುವುದನ್ನು ಅರಿತುಕೊಳ್ಳಬೇಕು. ಇತಿಹಾಸ ಪುಟಗಳಲ್ಲಿ 1400 ವರ್ಷ ಬಾಳಿದ ಯಮನೂರೇಶ್ವರರು ಧರ್ಮ ಪ್ರಚಾರ ಮಾಡದೇ ಮಾನವೀಯತೆ ಪ್ರಚಾರ ಮಾಡಿ ಭಾವೈಕ್ಯತೆಯಿಂದ ಬಾಳಬೇಕೆಂಬ ಸಂದೇಶ ನೀಡಿದ್ದಾರೆ. ಶಿಶುನಾಳ ಶರೀಫರಿಗೆ ಗುರುಗೋವಿಂದ ಭಟ್ಟರು ಗುರುಗಳಾಗಿದ್ದರು. ಎಲ್ಲರೂ ಮಾದರಿಯಾಗಿ ಬಾಳುವ ಅಗತ್ಯವಿದೆ. ನಾವೆಲ್ಲರೂ ಭಾರತಾಂಬೆಯ ಮಕ್ಕಳು ಎಂಬ ಹೆಮ್ಮೆಯಿಂದ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿರುವವರು ಎಲ್ಲರೂ ಮೂಲತಃ ಹಿಂದುಗಳೇ. ನಂತರದಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ ಸೇರಿದಂತೆ ವಿವಿಧ ಧರ್ಮಗಳಾಗಿವೆ. ಈ ಸತ್ಯವನ್ನು ನಾವೆಲ್ಲರೂ ಅರಿತುಕೊಂಡು ಭಾವೈಕ್ಯತೆಯಿಂದ ಬಾಳಬೇಕಿದೆ. ಯಮನೂರೇಶ್ವರರು ಯಮನೂರಿನಲ್ಲಿರುವ ಬೆಣ್ಣೆ ಹಳ್ಳಕ್ಕೆ ಮಂತ್ರಹಾಕಿ ಪವಿತ್ರ ನೀರು ಮಾಡಿದ ಫಲವಾಗಿ ಅನೇಕ ಕಾಯಿಲೆಗಳು ಕಡಿಮೆಯಾಗುತ್ತವೆ. ನನ್ನ ತಾಯಿಯ ಹೆಸರು ಯಮನವ್ವ ಇದ್ದು. ನಾನು ಚಿಕ್ಕವನಿದ್ದಾಗ ನನ್ನ ತಾಯಿಯು ಅನಾರೋಗ್ಯಕ್ಕೆ ಒಳಗಾದಾಗ ಬೆಣ್ಣೆಹಳ್ಳದ ನೀರಿನಿಂದ ಗುಣಮುಖವಾಗಿದ್ದನ್ನು ನೋಡಿದ್ದೇನೆ ಎಂದು ಸ್ಮರಿಸಿಕೊಂಡರು. ನಂತರ ಜನಪದ ಕಲಾವಿದ ಚನ್ನಪ್ಪ ಗಿಡ್ಡಪ್ಪಗೋಳ ಅವರೊಂದಿಗೆ ಚಾಂಗದೇವರಿಗೆ ಸಂಬಂಧಿಸಿದ ಹಂತಿ ಪದ ಸೇರಿದಂತೆ ವಿವಿಧ ಹಂತಿ ಪದಗಳನ್ನು ಹಾಡಿ ರಂಜಿಸಿದರು. ಪ್ರವಚನಕಾರ ಲಾಲಹುಸೇನ ಕಂದಗಲ್ಲ ಮಾತನಾಡಿ, ನಮ್ಮ ದೇಶವು ಭಾವೈಕ್ಯತೆ ಸಂಸ್ಕ್ರತಿಯನ್ನು ಹೊಂದಿದೆ. ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಇದು ಹೃದಯವೈಶ್ಯಾಲ್ಯತೆ ಹೊಂದಿದೆ. ಮನುಷ್ಯರನ್ನು ಪ್ರೀತಿಸಿದರೆ ಮಾತ್ರ ಎಲ್ಲರೂ ನಮ್ಮ ಜೊತೆ ಇರುತ್ತಾರೆ. ವಿವಿಧೆತೆಯಲ್ಲಿ ಏಕತೆ ಸಾರಿದ ದೇಶ ನಮ್ಮದು. ಕೆಲವರು ಧರ್ಮವನ್ನು ಸರಿಯಾಗಿ ಅರಿತುಕೊಳ್ಳದೇ ಸಂಕುಚಿತ ದೃಷ್ಟಿಕೋನದಿಂದ ನೋಡುವದರಿಂದಾಗಿ ಸಮಾಜದಲ್ಲಿ ಪ್ರಚೋದನೆ ಮಾತುಗಳು ಬರುತ್ತವೆ.ನಮ್ಮ ಮಾತುಗಳು ಹೃದಯವನ್ನು ಅರಳಿಸುವಂತೆ ಇರಬೇಕೆ ವಿನಃ ಕೆರಳಿಸುವಂತೆ ಇರಬಾರದು. ನಾವೆಲ್ಲರೂ ಹಿಂದು-ಮುಸ್ಲಿಂ ಶರಣರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯುವಂತಾಗಬೇಕು. ನಾವು ಸಮಾಜಕ್ಕೆ ಏನು ಮಾಡದೇ ಹೋದರೂ ಪರವಾಗಿಲ್ಲ. ನಮ್ಮ ಕುಟುಂಬದವರು ನಮ್ಮನ್ನು ನೆನಪಿಸಿಕೊಳ್ಳುವಂತಹ ಸತ್ ಕಾರ್ಯಗಳನ್ನನು ಮಾಡುವದು ತುಂಬಾ ಮುಖ್ಯವಾಗಿದೆ ಎಂದರು. ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಮಸಬಿನಾಳದ ಸಿದ್ದರಾಮ ಸ್ವಾಮೀಜಿ, ದೇವರಹಿಪ್ಪರಗಿಯ ಮಡಿವಾಳಸ್ವಾಮೀಜಿ, ಕಣಕಾಲದ ಸೈಯದಶಾಹ ಖುತಬೇ ರಬ್ಬಾನಿ ಖಾದ್ರಿ ಸಾನ್ನಿಧ್ಯ ವಹಿಸಿದ್ದರು.ಅಧ್ಯಕ್ಷತೆಯನ್ನು ಜಮಾತೆ ಇಸ್ಲಾಂ ಕಮಿಟಿ ಅಧ್ಯಕ್ಷ ಬಾಬುಸಾಬ ಚಪ್ಪರಬಂದ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖಂಡರಾದ ಚಂದ್ರಶೇಖರ ಮರೋಳ, ಮಲ್ಯಯ್ಯ ಹಾಲಿಹಾಳ, ಅನಿಲ ಅಗರವಾಲ, ರೇವಣಸಿದ್ದ ನಂದಿಹಾಳ, ದಾದಾಕಲಂದರ ದರ್ಗಾ, ಬಂದೇನವಾಜ ವಾಲೀಕಾರ, ಬಸವರಾಜ ವಂದಾಲ, ಬಸನಗೌಡ ಪಾಟೀಲ, ಬಾಬುಗೌಡ ಪಾಟೀಲ, ಸಿ.ಎಂ.ಗಣಕುಮಾರ, ಮಹಿಬೂಬ ಚಪ್ಪರಬಂದ ಇತರರು ಇದ್ದರು. ಬಂದೇನವಾಜ ವಾಲೀಕಾರ ಸ್ವಾಗತಿಸಿದರು. ಶಿಕ್ಷಕಿ ಬಿ.ಬಿ.ಹಳೆಮನಿ ನಿರೂಪಿಸಿದರು. ಕಸ್ತೂರಿ ಆಲಕೊಪ್ಪರ ವಂದಿಸಿದರು. ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮದ ಭೀರಪ್ಪ ಪೂಜಾರಿ, ಮಲ್ಲಪ್ಪ ಮೇಲಿನಮನಿ, ಪರಶುರಾಮ ನಂದಿಹಾಳ, ಮಹಾಂತೇಶ ಮುಳವಾಡ, ಬಸವರಾಜ ಹಿಪ್ಪರಗಿ, ಮಹಾಂತೇಶ ಪೂಜಾರಿ, ವಿನೋದ ಲಮಾಣಿ, ಕರಿಯಪ್ಪ ಮಾದರ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು. ನಂತರ ವಿವಿಧೆಡೆಗಳಿಂದ ಆಗಮಿಸಿದ್ದ ರಿವಾಯಿತ ಹಾಡುಗಾರರಿಂದ ಬೆಳಗಿನವರೆಗೂ ರಿವಾಯಿತ ಪದಗಳು ಜರುಗಿದವು.