ಧರ್ಮ ಪ್ರತಿಯೊಬ್ಬ ಮನುಷ್ಯನಿಗೂ ಅತ್ಯಂತ ಅಗತ್ಯವಾಗಿ ಬೇಕು: ಯತೀಂದ್ರ ಸಿದ್ದರಾಮಯ್ಯ

KannadaprabhaNewsNetwork | Published : Nov 30, 2024 12:46 AM

ಸಾರಾಂಶ

ಇತ್ತೀಚೆಗೆ ರಾಜಕೀಯ ನಾಯಕರು ಧರ್ಮವನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದು, ಇದು ಸರಿಯಲ್ಲ ಯಾವ ದೇಶದಲ್ಲಿ ಧರ್ಮದೊಳಗೆ ರಾಜಕಾರಣ ಬೆರೆಸುತ್ತಾರೊ ಅವುಗಳು ಸರ್ವ ನಾಶವಾದ ಉದಾಹರಣೆ ನಮ್ಮ ಮುಂದಿದೆ. ರಾಜಕಾರಣಿಗಳು ಧರ್ಮ ಕಾಪಾಡಲು ಸಾಧ್ಯವಿಲ್ಲ, ಅದರ ಬದಲು ಕೆಲವರು ಅದನ್ನು ವೋಟ್ ಬ್ಯಾಂಕ್ ರಾಜಕೀಯಕ್ಕೆ ದುರುಪಯೋಗ ಮಾಡಿಕೊಂಡು ತಮ್ನ ಮೂಲ ಉದ್ದೇಶ ಮರೆಯುತ್ತಿದ್ದು, ಇದು ಸಮಾಜಕ್ಕೆ ಅಪಾಯಕಾರಿ.

ಕನ್ನಡಪ್ರಭ ವಾರ್ತೆ ಕೆ.ಆರ್.ನಗರ

ಧರ್ಮ ಪ್ರತಿಯೊಬ್ಬ ಮನುಷ್ಯನಿಗೂ ಅತ್ಯಂತ ಅಗತ್ಯವಾಗಿ ಬೇಕು ಆದರೆ ಅದರ ಹೆಸರಿನಲ್ಲಿ ಮೂಢ ನಂಬಿಕೆ ಬಿತ್ತಿ ರಾಜಕೀಯ ಮಾಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ಕೆಸ್ತೂರುಕೊಪ್ಪಲು ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಸುಡುಗಾಡಮ್ಮ ಮತ್ತು ವೀರಭದ್ರೇಶ್ವರ ದೇವಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚೆಗೆ ರಾಜಕೀಯ ನಾಯಕರು ಧರ್ಮವನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದು, ಇದು ಸರಿಯಲ್ಲ ಯಾವ ದೇಶದಲ್ಲಿ ಧರ್ಮದೊಳಗೆ ರಾಜಕಾರಣ ಬೆರೆಸುತ್ತಾರೊ ಅವುಗಳು ಸರ್ವ ನಾಶವಾದ ಉದಾಹರಣೆ ನಮ್ಮ ಮುಂದಿದೆ ಎಂದರು.

ರಾಜಕಾರಣಿಗಳು ಧರ್ಮ ಕಾಪಾಡಲು ಸಾಧ್ಯವಿಲ್ಲ, ಅದರ ಬದಲು ಕೆಲವರು ಅದನ್ನು ವೋಟ್ ಬ್ಯಾಂಕ್ ರಾಜಕೀಯಕ್ಕೆ ದುರುಪಯೋಗ ಮಾಡಿಕೊಂಡು ತಮ್ನ ಮೂಲ ಉದ್ದೇಶ ಮರೆಯುತ್ತಿದ್ದು, ಇದು ಸಮಾಜಕ್ಕೆ ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದರು.

ಶಾಸಕ ಡಿ. ರವಿಶಂಕರ್ ಮಾತನಾಡಿ, ಸಾಲಿಗ್ರಾಮ ಮತ್ತು ಕೆ.ಆರ್. ನಗರ ತಾಲೂಕುಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಇರುವ ಗ್ರಾಮಗಳಲ್ಲಿ ಅಭಿವೃದ್ದಿ ಕುಂಠಿತವಾಗಿದ್ದು, ಅವುಗಳ ಅಭಿವೃದ್ದಿಗೆ ಹೆಚ್ಚಿನ ಅನುದಾನ ಕೊಡಿಸಬೇಕೆಂದು ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.

ಸೇತುವೆಗೆ 25 ಕೋಟಿ- ಕೆ.ಆರ್‌.ನಗರ ತಾಲೂಕಿನ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾಗಿರುವ ಕಪ್ಪಡಿ ಬಳಿ ಕಾವೇರಿ ನದಿಗೆ ಸೇತುವೆ ನಿರ್ಮಾಣ ಮಾಡಲು 25 ಕೋಟಿ ಅನುದಾನ ನೀಡಲು ಗುರುವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕಾಗಿನೆಲೆ ಕನಕ ಗುರುಪೀಠದ ಕೆ.ಆರ್. ನಗರ ಶಾಖಾ ಮಠದ ಶಿವಾನಂದಪುರಿ ಶ್ರೀಗಳು ಆಶೀರ್ವಚನ ನೀಡಿದರು. ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಮಾತನಾಡಿ, ದೇವಾಲಯದ ಇತಿಹಾಸ ಮತ್ತು ವಿಶೇಷತೆಯ ಬಗ್ಗೆ ತಿಳಿಸಿದರು.

ದೇವಾಲಯ ಉದ್ಘಾಟನೆಯ ಅಂಗವಾಗಿ ಸುಡುಗಾಡಮ್ಮ ಮತ್ತು ವೀರಭದ್ರೇಶ್ವರ ದೇವಾಲಯದಲ್ಲಿ ಮುಂಜಾನೆಯಿಂದಲೆ ವಿಶೇಷ ಪೂಜೆ ಮತ್ತು ಹೋಮ ಹವನ ನಡೆಸಿ ಮಹಾ ಮಂಗಳಾರತಿ ಮಾಡಿ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಾಘು, ಮೈಸೂರು ಡಿಡಿಪಿಐ ಎಸ್.ಟಿ. ಜವರೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ. ರಮೇಶ್, ತಾಪಂ ಮಾಜಿ ಅಧ್ಯಕ್ಷೆ ಹರಿಣಿ ಪ್ರಕಾಶ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ. ಶಿವಣ್ಣ, ದೇವಾಲಯ ಸಂಯೋಜಕ ಆರ್. ಭಾಸ್ಕರ್, ಎಂ.ಎಸ್. ರಾಮಯ್ಯ ಮೆಡಿಕಲ್ ಕಾಲೇಜಿನ ವೈದ್ಯ ಡಾ.ಆರ್. ವೀರಣ್ಣ, ಬೆಂಗಳೂರು ಮದರ್ ಡೈರಿ ಕಾರ್ಯದರ್ಶಿ ಆರ್. ಕನಕರಾಜು, ಗ್ರಾಮದ ಯಜಮಾನರಾದ ಕೆ. ಶಿವಚಂದ್ರ, ಬಸವರಾಜು, ಜವರೇಗೌಡ, ಕಾಳೇಗೌಡ, ಮೇಲ್ವಿಚಾರಕರಾದ ಕೆ.ಎಲ್. ಲೋಕೇಶ್, ಕೆಸ್ತೂರು ಗ್ರಾಪಂ ಅಧ್ಯಕ್ಷೆ ಮಂಜುಳ ಶ್ರೀನಿವಾಸ್, ಮಾಜಿ ಅಧ್ಯಕ್ಷೆ ನಾಗಮಣಿ ಸತೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಆಸರೆ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸ್ವಾಮೀಗೌಡ ಮತ್ತು ಗ್ರಾಮಸ್ಥರು ಇದ್ದರು.

Share this article