ಗಣಪತಿಯ ಮುಂದೆ ಕರಗಿದ ಧರ್ಮದ ಗಡಿ!

KannadaprabhaNewsNetwork |  
Published : Sep 21, 2026, 02:00 AM IST
ಗಣೇಶ ಮೂರ್ತಿ ಕೊಡುಗೆಯಾಗಿ ನೀಡಿದ ದಾದಾಹಯಾತ್ ಕಿತ್ತೂರ ಅವರನ್ನು ಸ್ಥಳೀಯರು ಸನ್ಮಾನಿಸಿದರು. | Kannada Prabha

ಸಾರಾಂಶ

ಮೂರ್ತಿ ಪ್ರತಿಷ್ಠಾಪನೆಯಾದ ಕ್ಷಣದಿಂದಲೇ ಬೀದಿಯಲ್ಲಿ ಹಬ್ಬದ ವಾತಾವರಣ. ಯುವಕರು ವ್ಯವಸ್ಥೆಯಲ್ಲಿ ತೊಡಗಿಸಿಕೊಂಡರೆ, ಹಿರಿಯರು ಹಳೆಯ ಗಣೇಶೋತ್ಸವದ ನೆನಪುಗಳನ್ನು ಮೆಲುಕು ಹಾಕುತ್ತಾರೆ

ಅಜೀಜಅಹ್ಮದ ಬಳಗಾನೂರ ಹುಬ್ಬಳ್ಳಿ

ಒಂದೆಡೆ ಗಣಪತಿ ಆರಾಧನೆ... ಮತ್ತೊಂದೆಡೆ ಅನ್ನದಾಸೋಹದ ಸಿದ್ಧತೆ. ಬೀದಿಯ ತುಂಬೆಲ್ಲ ಹಬ್ಬದ ಸಂಭ್ರಮ. ಗಣಪತಿಯ ಮುಂದೆ ಹಿಂದೂಗಳ ಜತೆಗೆ ಮುಸ್ಲಿಂ ಕುಟುಂಬವೂ ಭಕ್ತಿಯಿಂದ ನಿಂತಿದೆ. "ಇದು ಯಾರ ಹಬ್ಬ? " ಎಂದು ಕೇಳಿದರೆ ಇಲ್ಲಿನವರ ಉತ್ತರ ಒಂದೇ... "ನಮ್ಮ ಹಬ್ಬ! ".

ಹಳೇ ಹುಬ್ಬಳ್ಳಿಯ ಅಕ್ಕಿಪೇಟೆಯಲ್ಲಿ ಕಾಣಸಿಗುವ ಈ ದೃಶ್ಯ, ಧರ್ಮದ ಎಲ್ಲೆಗಳನ್ನು ಮೀರಿ ಬೆಸೆದಿರುವ ಭಾವೈಕ್ಯತೆಯ ಜೀವಂತ ಚಿತ್ರಣ. ಇಲ್ಲಿನ ಸಾರ್ವಜನಿಕ ವೆಂಕಟೇಶ್ವರ ದೇವರ ಗುಡಿ ಟ್ರಸ್ಟ್‌ನ ಗಣೇಶೋತ್ಸವಕ್ಕೆ 60ರಿಂದ 75 ವರ್ಷಗಳ ಇತಿಹಾಸವಿದೆ. ಪ್ರತಿವರ್ಷ ಸ್ಥಳೀಯ ಕುಟುಂಬಗಳು ಸರದಿಯಂತೆ ಗಣಪತಿ ಮೂರ್ತಿ ನೀಡುವ ಪರಂಪರೆ ಹಲವು ದಶಕಗಳಿಂದ ಮುಂದುವರಿದಿದೆ. ಈ ಬಾರಿ ಈ ಪರಂಪರೆಗೆ ಹೊಸ ಅರ್ಥ ಸಿಕ್ಕಿದೆ. ಮುಸ್ಲಿಂ ಕುಟುಂಬವೊಂದು ಮೊದಲ ಬಾರಿಗೆ ಗಣಪತಿ ಮೂರ್ತಿಯನ್ನು ಕೊಡುಗೆಯಾಗಿ ನೀಡಿದೆ.

ಸ್ಥಳೀಯ ಕಟಗರ ಓಣಿ ನಿವಾಸಿ ದಾದಾಹಯಾತ್ (ಬುಡ್ಡೆಸಾಬ) ಕಿತ್ತೂರ ಅವರು ಸುಮಾರು ₹15 ಸಾವಿರ ವೆಚ್ಚದಲ್ಲಿ ಗಣಪತಿ ಮೂರ್ತಿ ನೀಡಿದ್ದು, ಅಕ್ಕಿಪೇಟೆಯ ಜನರ ಸಂಭ್ರಮಕ್ಕೆ ಕಾರಣವಾಗಿದೆ.

ಮೂರ್ತಿ ಪ್ರತಿಷ್ಠಾಪನೆಯಾದ ಕ್ಷಣದಿಂದಲೇ ಬೀದಿಯಲ್ಲಿ ಹಬ್ಬದ ವಾತಾವರಣ. ಯುವಕರು ವ್ಯವಸ್ಥೆಯಲ್ಲಿ ತೊಡಗಿಸಿಕೊಂಡರೆ, ಹಿರಿಯರು ಹಳೆಯ ಗಣೇಶೋತ್ಸವದ ನೆನಪುಗಳನ್ನು ಮೆಲುಕು ಹಾಕುತ್ತಾರೆ. "ನಮ್ಮೂರಿನ ಹಬ್ಬ " ಎಂಬ ಭಾವನೆ ಎಲ್ಲರ ಮಾತಿನಲ್ಲೂ ಅನುರಣಿಸುತ್ತದೆ.

ಏಳು ದಿನಗಳ ಗಣೇಶೋತ್ಸವದಲ್ಲಿ ಪೂಜೆ ಮಾತ್ರವಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳ ಆಟೋಟ, ವಿವಿಧ ಸಭೆಗಳು ಹಾಗೂ ಅನ್ನಸಂತರ್ಪಣೆಯೂ ನಡೆಯುತ್ತದೆ. ಸುಮಾರು 50ಕ್ಕೂ ಹೆಚ್ಚು ಹಿಂದು-ಮುಸ್ಲಿಂ ದಾನಿಗಳು ₹500ರಿಂದ ₹2,500ರ ವರೆಗೆ ನೆರವು ನೀಡುವ ಮೂಲಕ ಅನ್ನದಾಸೋಹಕ್ಕೆ ಕೈಜೋಡಿಸುತ್ತಾರೆ.

ಹಬ್ಬ ಬೇರೆ, ಬಾಂಧವ್ಯ ಒಂದೇ!:

ಬಸವಣ್ಣನವರ ಗುಡಿ ಕಾರ್ಯಕ್ರಮವಾಗಲಿ, ದರ್ಗಾ ಉತ್ಸವವಾಗಲಿ ಅಥವಾ ಗಣೇಶೋತ್ಸವವಾಗಲಿ ಹಬ್ಬಗಳ ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಪರಸ್ಪರ ದೇಣಿಗೆ ನೀಡುವುದು, ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಇಲ್ಲಿನ ದಶಕಗಳ ಸಂಪ್ರದಾಯ. ಒಂದು ಮನೆಯ ಹಬ್ಬದಲ್ಲಿ ಮತ್ತೊಂದು ಮನೆಯವರು ಭಾಗಿಯಾಗುವುದು ಇಲ್ಲಿನ ಸಹಬಾಳ್ವೆಯ ವಿಶೇಷತೆ.

ಗಣೇಶೋತ್ಸವದ ಏಳು ದಿನಗಳ ಕಾರ್ಯಕ್ರಮ ಮುಗಿದರೂ ಮೂರ್ತಿಯನ್ನು ತಕ್ಷಣ ವಿಸರ್ಜಿಸುವುದಿಲ್ಲ. ಸ್ಥಳೀಯ ಸಂಪ್ರದಾಯದಂತೆ ಮಹಾನವಮಿ ದಿನ ಅದ್ಧೂರಿ ಮೆರವಣಿಗೆಯೊಂದಿಗೆ ಗಣಪತಿ ವಿಸರ್ಜನೆ ನಡೆಯುತ್ತದೆ.

ಕಾಲ ಬದಲಾದರೂ ಅಕ್ಕಿಪೇಟೆಯ ಜನರ ಒಗ್ಗಟ್ಟಿನ ಬದುಕು ಬದಲಾಗಿಲ್ಲ. ಈ ಬಾರಿ ಗಣಪತಿಯ ಮೂರ್ತಿಯ ಜತೆಗೆ ಭಾವೈಕ್ಯತೆಯೂ ಪ್ರತಿಷ್ಠಾಪನೆಯಾಗಿದೆ ಎಂಬುದು ಸ್ಥಳೀಯರ ಸಂತಸದ ಮಾತು.

ನಮ್ಮಲ್ಲಿ ಜಾತಿ- ಧರ್ಮದ ಯಾವುದೇ ಬೇಧಭಾವವಿಲ್ಲ. ಹಿಂದೂ- ಮುಸಲ್ಮಾನರು ಅಣ್ಣ- ತಮ್ಮಂದಿರಂತೆ ಜೀವನ ನಡೆಸುತ್ತಿದ್ದೇವೆ. ಚಿಕ್ಕವನಿದ್ದಾಗಿನಿಂದಲೂ ಕುಟುಂಬ ಸಮೇತನಾಗಿ ಗಣೇಶೋತ್ಸವದಲ್ಲಿ ಪಾಲ್ಗೊಳ್ಳುತ್ತೇನೆ ಗಣಪತಿ ಮೂರ್ತಿ ದಾನಿ ದಾದಾಹಯಾತ ಕಿತ್ತೂರ ತಿಳಿಸಿದ್ದಾರೆ.

ದಶಕಗಳಿಂದ ಹಿಂದೂ- ಮುಸ್ಲಿಮರು ಪರಸ್ಪರ ಹಬ್ಬಗಳಲ್ಲಿ ಪಾಲ್ಗೊಂಡು, ನೆರವು ನೀಡುತ್ತ ಬಂದಿದ್ದೇವೆ. ಈ ಬಾರಿ ಮುಸ್ಲಿಂ ಕುಟುಂಬದಿಂದ ಗಣಪತಿ ಮೂರ್ತಿ ಕೊಡುಗೆ ನೀಡಿರುವುದು ನಮ್ಮ ಅಕ್ಕಿಪೇಟೆಯ ಭಾವೈಕ್ಯತೆಗೆ ಮತ್ತಷ್ಟು ಬಲ ನೀಡಿದೆ ಎಂದು ಸ್ಥಳೀಯ ನಿವಾಸಿ ಸಿದ್ದಪ್ಪ ಕೋಳೂರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಯೂಟ ತಯಾರಕರ ಬಾಕಿ ವೇತನ ನೀಡುವಂತೆ ಆಗ್ರಹ
ಬೆಳೆ ನಷ್ಟ ಅನುಭವಿಸಿದ ರೈತರಿಗೆ ಎಕರೆಗೆ 50 ಸಾವಿರ ಪರಿಹಾರ ನೀಡಿ