ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಮೀಪದ ಹೊಳೆಹನಸವಾಡಿ ಗ್ರಾಮದ ಶ್ರೀ ಚೌಡೇಶ್ವರಿ ದೇವಾಲಯ ಗೋಪುರ ಲೋಕಾರ್ಪಣೆ ಮತ್ತು ಕಳಸಾರೋಹಣ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ದೇವಾಲಯಗಳಿಗೆ ಭೇಟಿ ನೀಡುವುದರಿಂದ ಮನಸ್ಸಿಗೆ ಶಾಂತಿ ಲಭಿಸುತ್ತದೆ. ನಮ್ಮಲ್ಲಿನ ದುಷ್ಟ ಗುಣಗಳು ದೂರವಾಗುತ್ತದೆ ಎಂದರು.
ನಮ್ಮ ದೇಹದೊಳಗಿನ ದೇವರನ್ನು ಅರಿಯುವುದು ತಪಸ್ಸು. ಹಾಗೆಯೇ ದೇವಾಲಯದಲ್ಲಿನ ದೇವರನ್ನು ನೆನೆಯುವುದು ಭಕ್ತಿ. ಎರಡು ದಾರಿಗಳು ಒಂದೇ ತಾಣವನ್ನು ತಲುಪುತ್ತದೆ. ದೇವಾಲಯಗಳು ಕೇವಲ ಪೂಜಾ ಸ್ಥಳವಲ್ಲ. ಭಕ್ತರಿಗೆ ಸಕಲವನ್ನು ಕರುಣಿಸುವ ಕೇಂದ್ರವಾಗಿದೆ ಎಂದರು.ಜನರು ಇಂದು ತಮ್ಮದೇ ಆದ ಪ್ರಪಂಚದಲ್ಲಿ ಮುಳುಗಿ ಹೋಗಿದ್ದಾರೆ. ಕಷ್ಟದಲ್ಲಿರುವವರಿಗೆ ಉಪಕಾರ ಮಾಡುವ ಮನೋಭಾವ ಕಡಿಮೆಯಾಗುತ್ತಿದೆ. ಹೀಗಾಗಬಾರದು. ಪರೋಪಕಾರ ಮಾಡುವುದರಿಂದ, ಬೇರೆಯವರಿಗೆ ಕೇಡನ್ನು ಬಯಸದೆ ಇರುವುದರಿಂದ ಸಕಲವೂ ಪ್ರಾಪ್ತಿಯಾಗುತ್ತದೆ. ಸಮಾಜದ ಒಳಿತಿಗೆ ನಾವುಗಳೆಲ್ಲರೂ ನಮ್ಮ ಕೈಲಾದಂತಹ ಸಹಾಯ ಮಾಡಬೇಕಿದೆ ಎಂದು ಹೇಳಿದರು.
ಹೊಂಗಿರಣ ಲೋಕೇಶ ಅಧ್ಯಕ್ಷತೆ ವಹಿಸಿದ್ದರು. ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್, ನಿಗಮದ ಮಾಜಿ ನಿರ್ದೇಶಕ ದೇವಿಕುಮಾರ್, ನಿವೃತ್ತ ನ್ಯಾಯಧೀಶ ವೀರಭದ್ರಪ್ಪ ಪೂಜಾರ, ಉದ್ಯಮಿ ಹೊಳಲೂರು ಸಂತೋಷ, ಬೂದಿಗೆರೆ ಬಸವರಾಜ ಮಾತನಾಡಿದರು.
ಇದೇ ಸಂದರ್ಭದಲ್ಲಿ ಗ್ರಾಮೀಣ ಕ್ರೀಡಾಕೂಟಗಳು ಜರುಗಿದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾತಂಡಗಳೊಂದಿಗೆ ದೇವಿಯ ಉತ್ಸವ ಅದ್ದೂರಿಯಾಗಿ ನಡೆಯಿತು.