ದಾಬಸ್‍ಪೇಟೆ: ಆನ್‍ಲೈನ್ ಗೇಮಿಂಗ್ ಚಟಕ್ಕೆ ಒಳಗಾಗಿ ಲಕ್ಷಾಂತರ ರು.ಗಳು ಕಳೆದುಕೊಂಡಿದ್ದ ಗೃಹಿಣಿಯೊಬ್ಬರು ಸಾಲಬಾಧೆಗೆ ಹೆದರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನೆಲಮಂಗಲ ತಾಲೂಕಿನ ಬೊಮ್ಮನಹಳ್ಳಿ ರಂಜಿತಾ(28) ಆತ್ಮಹತ್ಯೆಗೆ ಶರಣಾದ ಮಹಿಳೆ. ನೆಲಮಂಗಲದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

ರಂಜಿತಾ ಸುಮಾರು 10 ವರ್ಷಗಳ ಹಿಂದೆ ಅರುಣ್ ಜತೆ ವಿವಾಹವಾಗಿದ್ದರು. ಮೂಲತಃ ಗುಲ್ಬರ್ಗಾ ನಿವಾಸಿ. ಈ ದಂಪತಿ ಕಳೆದ ಐದು ವರ್ಷಗಳಿಂದ ನೆಲಮಂಗಲದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ದಂಪತಿಗೆ 7 ವರ್ಷದ ಮಗನಿದ್ದಾನೆ. ಕಳೆದ ಒಂದು ವರ್ಷದ ಹಿಂದೆ ರಂಜಿತಾ ಆನ್‍ಲೈನ್ ಗೇಮಿಂಗ್‍ನಲ್ಲಿ ಹೆಚ್ಚು ತೊಡಗಿಕೊಂಡಿದ್ದರು ಎನ್ನಲಾಗಿದೆ. ಗೇಮಿಂಗ್‍ನಲ್ಲಿ ಹಣ ಹೂಡಿಕೆ ಮಾಡುತ್ತಿದ್ದ ಅವರು ಹಂತ ಹಂತವಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಆರ್ಥಿಕ ಒತ್ತಡ: ಆನ್‍ಲೈನ್ ಗೇಮಿಂಗ್‍ನಿಂದ ಹಣ ಕಳೆದುಕೊಂಡ ಹಿನ್ನೆಲೆಯಲ್ಲಿ ರಂಜಿತಾ ಸಾಲ ಮಾಡಿಕೊಂಡಿದ್ದು, ಪರಿಸ್ಥಿತಿ ಗಂಭೀರವಾದ ಬಳಿಕ ತಾಯಿ ಹಾಗೂ ಪತಿ ಅರುಣ್ ಸೇರಿ ಸುಮಾರು 15 ಲಕ್ಷ ರು.ಪಾಯಿಗಳಷ್ಟು ಸಾಲ ತೀರಿಸಿದ್ದರು. ಆದರೆ, ಸಾಲ ತೀರಿಸಿದ ಬಳಿಕವೂ ರಂಜಿತಾ ಆನ್‍ಲೈನ್ ಗೇಮಿಂಗ್ ಚಟ ಸಂಪೂರ್ಣವಾಗಿ ಬಿಡಲಿಲ್ಲ. ಮತ್ತೆ ಹಣ ಕಳೆದುಕೊಂಡು ಸಾಲ ಮಾಡಿಕೊಂಡಿದ್ದರು. ಇದರಿಂದ ಕುಟುಂಬದಲ್ಲಿ ಆರ್ಥಿಕ ಒತ್ತಡ ಮತ್ತಷ್ಟು ಹೆಚ್ಚಾಗಿತ್ತು ಎಂಬ ಮಾಹಿತಿ ತಿಳಿದು ಬಂದಿದೆ.

ಪತಿ ಗುಲ್ಬರ್ಗಾಕ್ಕೆ ತೆರಳಿದ್ದ ವೇಳೆ ಘಟನೆ: ಘಟನೆಗೂ ಒಂದು ದಿನ ಮೊದಲು ರಂಜಿತಾ ಪತಿ ಅರುಣ್ ಕೆಲಸದ ನಿಮಿತ್ತ ಗುಲ್ಬರ್ಗಾಕ್ಕೆ ತೆರಳಿದ್ದರು. ಮನೆಯಲ್ಲಿ ರಂಜಿತಾ ಮಗನೊಂದಿಗೆ ಇದ್ದರು. ರಾತ್ರಿ ವೇಳೆ ರಂಜಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ಮಾಹಿತಿ ಪಡೆದ ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೋಟೋ 6 : ಗೃಹಿಣಿ ರಂಜಿತಾ