ಧಾರ್ಮಿಕ ತಾರತಮ್ಯ, ತುಷ್ಟೀಕರಣ ಸಹಿಸುವುದಿಲ್ಲ

KannadaprabhaNewsNetwork |  
Published : Sep 18, 2026, 02:00 AM IST
ಸಿರುಗುಪ್ಪ ನಗರದ ನಿಟ್ಟೂರು ನರಸಿಂಹಮೂರ್ತಿ ಬಯಲು ಜಾಗದಲ್ಲಿ ಹಿಂದೂ ಮಹಾಗಣಪತಿ ಉತ್ಸವದ ವೇದಿಕೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದರು. | Kannada Prabha

ಸಾರಾಂಶ

ಗಣಪತಿ ವಿಸರ್ಜನೆ ಮೆರವಣಿಗೆ ಹಾಗೂ ಧಾರ್ಮಿಕ ಉತ್ಸವಗಳ ಸಂದರ್ಭದಲ್ಲಿ ಆಡಳಿತ ಯಂತ್ರವು ಅನಗತ್ಯ ಕಿರುಕುಳ ನೀಡುತ್ತಿದೆ

ಸಿರುಗುಪ್ಪ: ರಾಜ್ಯ ಕಾಂಗ್ರೆಸ್‌ ಸರ್ಕಾರ ನಿರ್ದಿಷ್ಟ ವರ್ಗವನ್ನು ಓಲೈಸುತ್ತಿದ್ದು, ಹಿಂದು ಸಮಾಜ ಹಾಗೂ ಹಬ್ಬ ಹರಿದಿನಗಳ ಆಚರಣೆ ಕಡೆಗಣಿಸುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ನಿಟ್ಟೂರು ನರಸಿಂಹಮೂರ್ತಿ ಬಯಲು ಜಾಗದಲ್ಲಿ ಹಿಂದೂ ಮಹಾ ಗಣಪತಿ ಉತ್ಸವ ಸಮಿತಿಯ 9ನೇ ವರ್ಷದ ಬೃಹತ್ ಹಿಂದೂ ಮಹಾ ಗಣಪತಿ ಉತ್ಸವದ ಸಾರ್ವಜನಿಕ ಸಮಾವೇಶವೊಂದರಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ತುಷ್ಟೀಕರಣ ರಾಜಕಾರಣ ಹಾಗೂ ಕಾನೂನು ಸುವ್ಯವಸ್ಥೆಯ ಕುಸಿತದ ವಿರುದ್ಧ ಕಟು ಮಾತುಗಳಲ್ಲಿ ವಾಗ್ದಾಳಿ ನಡೆಸಿದರು.

ಗಣಪತಿ ವಿಸರ್ಜನೆ ಮೆರವಣಿಗೆ ಹಾಗೂ ಧಾರ್ಮಿಕ ಉತ್ಸವಗಳ ಸಂದರ್ಭದಲ್ಲಿ ಆಡಳಿತ ಯಂತ್ರವು ಅನಗತ್ಯ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ ಯತ್ನಾಳ್, ಹಿಂದೂಗಳ ಹಕ್ಕುಗಳಿಗಾಗಿ ಧ್ವನಿ ಎತ್ತುವವರ ಮೇಲೆ ಸಾಲು ಸಾಲು ಪ್ರಕರಣ ದಾಖಲಿಸುವುದು ಮತ್ತು ನೋಟಿಸ್ ನೀಡುವುದು ಸರಿಯಲ್ಲ. ಗಣೇಶೋತ್ಸವ ಬಂದಾಗ ಮಾತ್ರ ಡೆಸಿಬಲ್, ಶಬ್ದ ಮಾಲಿನ್ಯ ಮತ್ತು ಡಿಜೆ ನಿಯಮ ಆಡಳಿತಕ್ಕೆ ನೆನಪಾಗುತ್ತವೆ. ಆದರೆ ಇತರ ಮೆರವಣಿಗೆ, ಈದ್ ಮಿಲಾದ್ ಹಾಗೂ ಬೃಹತ್ ಕಟ್‌ಔಟ್‌ಗಳ ನಿರ್ಮಾಣದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಆದೇಶ ಎಲ್ಲಿಗೆ ಹೋಗುತ್ತವೆ? ಎಂದು ಪ್ರಶ್ನಿಸಿದರು.

ಇದೇ ವೇಳೆ ನಾಗಮಂಗಲ ಮತ್ತು ಮಂಡ್ಯ ಭಾಗಗಳಲ್ಲಿ ಗಣಪತಿ ಮೆರವಣಿಗೆಯ ಮೇಲೆ ನಡೆದ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ದಾಳಿ ಪ್ರಸ್ತಾಪಿಸಿದ ಅವರು, ರಾಜ್ಯ ಸರ್ಕಾರವು ಇಂತಹ ಘಟನೆ ಗಂಭೀರವಾಗಿ ಪರಿಗಣಿಸದೆ ಪಶ್ಚಿಮ ಬಂಗಾಳದ ಹಾದಿಯಲ್ಲಿ ಸಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಥಾಟ್ಸ್ ಆನ್ ಪಾಕಿಸ್ತಾನ್ ಕೃತಿ ಹಾಗೂ ಜೋಗೇಂದ್ರನಾಥ್ ಮಂಡಲ್ ಅವರ ಐತಿಹಾಸಿಕ ಘಟನೆ ಉಲ್ಲೇಖಿಸಿದ ಯತ್ನಾಳ್, ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರುವವರೆಗೂ ಮಾತ್ರ ಸಂವಿಧಾನ, ಪ್ರಜಾಸತ್ತಾತ್ಮಕ ಮೌಲ್ಯ ಹಾಗೂ ದಲಿತರ ಹಕ್ಕುಗಳು ಸುರಕ್ಷಿತವಾಗಿರುತ್ತವೆ. ದಲಿತರು ಮತ್ತು ಸಮಸ್ತ ಹಿಂದೂ ಸಮಾಜವು ಜಾತಿಗಳಾಗಿ ವಿಭಾಗವಾಗದೆ ಒಗ್ಗೂಡಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ರಾಜ್ಯದಲ್ಲಿ ದಿನನಿತ್ಯ ಕೊಲೆ, ಕಳ್ಳತನ ಹೆಚ್ಚಾಗುತ್ತಿದ್ದು, ಪೊಲೀಸ್ ಇಲಾಖೆಯಲ್ಲಿ ಪಿಎಸ್ಐ, ಸಿಪಿಐ ಹಾಗೂ ಐಪಿಎಸ್ ಹುದ್ದೆಗಳಿಗೆ ಲಕ್ಷಾಂತರ ಲಂಚ ಪಡೆದು ಟೆಂಡರ್ ಮಾದರಿಯಲ್ಲಿ ವರ್ಗಾವಣೆ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಪೊಲೀಸರಿಗೆ ಪೂರ್ಣ ಸ್ವಾತಂತ್ರ್ಯ ನೀಡಿದರೆ ಅವರು ಕಾನೂನು ಸುವ್ಯವಸ್ಥೆ ಕಾಪಾಡುತ್ತಾರೆ. ರಾಜ್ಯದಲ್ಲಿ ಗೂಂಡಾಗಿರಿ ಮತ್ತು ಅಕ್ರಮಗಳಿಗೆ ಕಡಿವಾಣ ಹಾಕಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾದರಿಯ ಜೆಸಿಬಿ ಆಡಳಿತ ಮತ್ತು ಕಠಿಣ ನಾಯಕತ್ವದ ಅಗತ್ಯವಿದೆ ಎಂದರು.

ಚುನಾವಣೆಗಳಲ್ಲಿ ನೂರಾರು ಕೋಟಿ ಖರ್ಚು ಮಾಡಿ ಗೆಲ್ಲುವ ನಾಯಕರು ಕ್ಷೇತ್ರ ಬೆಳೆಸುವ ಬದಲು ಲೂಟಿ ಮಾಡುವುದರಲ್ಲಿ ಮಗ್ನರಾಗುತ್ತಾರೆ ಎಂದು ಖೇದ ವ್ಯಕ್ತಪಡಿಸಿದರು. ಮತದಾರರು 1,000 ಅಥವಾ 5,000ಗೆ ತಮ್ಮ ಮತ ಮಾರಿಕೊಳ್ಳಬಾರದು ಎಂದು ವಿನಂತಿಸಿದ ಅವರು, ವಿಜಯಪುರದಲ್ಲಿ ಯಾವುದೇ ಹಣದ ಆಮಿಷವಿಲ್ಲದೆ ಹಿಂದುತ್ವ ಹಾಗೂ ಸ್ಪಷ್ಟ ಸಿದ್ಧಾಂತಗಳ ಆಧಾರದ ಮೇಲೆ ಪ್ರಕೃತಿಪರ ರಾಜಕಾರಣ ನಡೆಸಲಾಗುತ್ತಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣದಲ್ಲಿಯೇ ಪ್ರಥಮ ಹಂತದ ಚಿಕಿತ್ಸೆ ದೊರೆಯಬೇಕು: ಬೊಮ್ಮಾಯಿ
ಹಾನಗಲ್ಲ ತಾಲೂಕು ಬರ ಘೋಷಣೆ ನೆಪಕ್ಕೆ ಮಾತ್ರ, ಪೂರ್ಣ ಬರ ಘೋಷಿಸಬೇಕು