ಈ ಭಾಗದ ಐತಿಹಾಸಿಕ, ಧಾರ್ಮಿಕ ಪರಂಪರೆಯ ಪ್ರತೀಕವಾಗಿರುವ "ಕುಂದಗೋಳದ ಕರಿಬಂಡಿ ಉತ್ಸವ ", ಕಾರ ಹುಣ್ಣಿಮೆ ಬ್ರಹ್ಮೋತ್ಸವ ಪ್ರತಿವರ್ಷವೂ ವಿಜೃಂಭಣೆಯಿಂದ ನೆರವೇರಲಿದೆ. ಈ ಬಾರಿ ಜೂ. 28ರಂದು ಹೊನ್ನುಗ್ಗಿ ನಡೆದರೆ, ಜೂ. 29ರಂದು ಕರಿಬಂಡಿ ಉತ್ಸವ ಅದ್ಧೂರಿಯಾಗಿ ನೆರವೇರಲಿದೆ.
ಗಂಗಾಧರ ಡಾಂಗೆ
ಕುಂದಗೋಳ: ಈ ಭಾಗದ ಐತಿಹಾಸಿಕ, ಧಾರ್ಮಿಕ ಪರಂಪರೆಯ ಪ್ರತೀಕವಾಗಿರುವ "ಕುಂದಗೋಳದ ಕರಿಬಂಡಿ ಉತ್ಸವ ", ಕಾರ ಹುಣ್ಣಿಮೆ ಬ್ರಹ್ಮೋತ್ಸವ ಪ್ರತಿವರ್ಷವೂ ವಿಜೃಂಭಣೆಯಿಂದ ನೆರವೇರಲಿದೆ. ಈ ಬಾರಿ ಜೂ. 28ರಂದು ಹೊನ್ನುಗ್ಗಿ ನಡೆದರೆ, ಜೂ. 29ರಂದು ಕರಿಬಂಡಿ ಉತ್ಸವ ಅದ್ಧೂರಿಯಾಗಿ ನೆರವೇರಲಿದೆ.
ರಾಜರ ಆಳ್ವಿಕೆ, ಬ್ರಿಟಿಷರ ಆಳ್ವಿಕೆಯಿಂದ ಹಿಡಿದು ಪ್ರಸ್ತುತ ಈಗಿರುವ ಪ್ರಜಾಪ್ರಭುತ್ವದ ವರೆಗೂ ಸುಪ್ರಸಿದ್ಧ ಕುಂದಗೋಳದ ಕರಿಬಂಡಿ ಉತ್ಸವ ನಡೆದುಕೊಂಡು ಬಂದಿದೆ. ರೈತರು ತಮ್ಮ ಎತ್ತುಗಳನ್ನು ಸಿಂಗರಿಸಿ ಸಕಲ ವಾದ್ಯ ಮೇಳನೊಂದಿಗೆ ಬ್ರಹ್ಮದೇವರ ಗುಡಿಗೆ ಬಂದು ಪ್ರದಕ್ಷಿಣೆ ಹಾಕಿಕೊಂಡು ಹೋಗುವುದನ್ನು ನೋಡುವುದೇ ಚಂದ. ಈ ಕ್ಷಣವನ್ನು ನೋಡಲು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯ ಜನರು ಆಗಮಿಸುವುದು ವಿಶೇಷ.
ಈ ಕರಿಬಂಡಿ ಉತ್ಸವ ಬ್ರಹ್ಮ ದೇವಸ್ಥಾನದ ಅರ್ಚಕರಾದ ಕರೋಗಲ್ಲ ಮನೆತನ ಧಾರ್ಮಿಕ ಪೂಜೆಯ ಕೇಂದ್ರ ಬಿಂದುವಾಗಿದೆ. ಈ ಉತ್ಸವ ಪ್ರತಿವರ್ಷ ಮೂಲಾ ನಕ್ಷತ್ರದ ಗೋಧೂಳಿ ಸಮಯದಲ್ಲಿ ಜರುಗುವುದು.
ಹಿನ್ನೆಲೆ
ಕುಂದಗೋಳದ ದಟ್ಟವಾದ ಅರಣ್ಯ ಪ್ರದೇಶದಲ್ಲಿ ರಾಕ್ಷಸರು ವಾಸವಾಗಿದ್ದರು. ಅವರು ಜನರಿಗೆ ತುಂಬಾ ಉಪಟಳ ನೀಡುತ್ತಿದ್ದರು. ಇದನ್ನು ತಪ್ಪಿಸಲು ದತ್ತೋಪಾಸಕರಾಗಿರುವ ಕುಲಕರ್ಣಿ ಮನೆತನದ ಹಿರಿಯರು ಮತ್ತು ಊರಿನ ಹಿರಿಯರು ಕೂಡಿಕೊಂಡು ಶ್ರೀ ಬ್ರಹ್ಮ ದೇವರ, ಶ್ರೀ ಲಕ್ಷ್ಮೀನರಸಿಂಹದೇವರ ಪ್ರೇರಣೆ ಪಡೆದು ಶಸ್ತ್ರಧಾರಿಯಾದ ಪಿತಾಂಬರವನ್ನು ಧರಿಸಿ ವೃತಾಚರಣೆ ಮಾಡಿಸಿ ಅವರನ್ನು ವೃಷಭ ಮೂಲಕವಾಗಿ ಬಂಡಿಯನ್ನು ಮಾಡಿ ರಾಕ್ಷಸರ ವಿರುದ್ಧ ಯುದ್ಧಕ್ಕೆ ತೆರಳಿ ಜಯಗಳಿಸುತ್ತಾರೆ. ಅದರ ಪ್ರತೀಕವಾಗಿ ಇಂದಿಗೂ ಪ್ರತಿವರ್ಷ ಈ ಕರಬಂಡಿ ಉತ್ಸವ ನಡೆಸಿಕೊಂಡು ಬರಲಾಗುತ್ತಿದೆ.
ಬ್ರಹ್ಮದೇವರಿಗೆ ಅಗ್ರಪೂಜೆ ಸಲ್ಲಿಸಿ, ಎರಡು ಬಂಡಿಗಳಲ್ಲಿ (ಗೌಡರ ಮತ್ತು ಶಾನುಭೋಗರ ಬಂಡಿ) ಎತ್ತುಗಳನ್ನು ಸಿದ್ಧಪಡಿಸಲಾಗುತ್ತದೆ. ಒಂದು ಬಂಡಿಯಲ್ಲಿ 7ರಂತೆ ಒಟ್ಟು 14 ಜನ ಶಸ್ತ್ರಧಾರಿಗಳು(ವೀರಗಾರರು) ಕರೋಗಲ್ಲರ ಮನೆಯಿಂದ ಜಯಬ್ರಹ್ಮ ಲಿಂಗೋಂ ಲಕ್ಷ್ಮೀ ನರಸಿಂಹೋಮ್ ಲಿಂಗೋಂ ಎಂದು ನಾಮಸ್ಮರಣೆ ಮಾಡುತ್ತಾ ಊರಿನ ಕರಿಹರಿದು ಬ್ರಹ್ಮದೇವರ ಗುಡಿಗೆ ಹೋಗಿ ಸುತ್ತಿ ದೇವರಿಗೆ ನಮಸ್ಕರಿಸಿ ಬರುವ ಪದ್ದತಿ ಇಂದಿಗೂ ನಡೆದುಕೊಂಡು ಬಂದಿದೆ. ಈ ವೀರಗಾರರು ಉತ್ಸವದ 24 ಗಂಟೆ ಮೊದಲು ಕಠಿಣ ಉಪವಾಸ ವೃತಾಚರಣೆ ಕೈಗೊಳ್ಳುತ್ತಾರೆ.
ವಿಶ್ವಕರ್ಮ ಸಮಾಜದವರು ಕರಿಬಂಡಿಯನ್ನು ಸಿಂಗರಿಸಿದರೆ, ಎಸ್‌ಸಿ ಸಮಾಜದವರು ಗುದ್ದಲಿ ಪೂಜೆ, ಎಸ್‌ಟಿ ಸಮಾಜದವರು ಬಾರು ಕೋಲು ಇತ್ಯಾದಿ ಧಾರ್ಮಿಕ ಪೂಜೆ ಮಾಡುತ್ತಾರೆ. ಹೀಗೆ ಸರ್ವ ಸಮಾಜದವರು ಈ ಉತ್ಸವದಲ್ಲಿ ಪಾಲ್ಗೊಳ್ಳುವುದು ವಿಶೇಷ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.