ಧಾರ್ಮಿಕ ಮುಖಂಡರಾದ ಸನ್ಯಾಸಿಗಳು ಕೇವಲ ಪೂಜೆ, ಪುನಸ್ಕಾರಗಳಲ್ಲಿ ಮಾತ್ರ ತೊಡಗಿಕೊಳ್ಳದೆ, ರೈತ ಹೋರಾಟಗಳಲ್ಲಿ ಭಾಗವಹಿಸುವ ಮೂಲಕ ಯುವರೈತರು ಸಾವಯುವ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಣೆ ನೀಡಬೇಕಾಗಿದೆ ಎಂದು ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ತುಮಕೂರು ಧಾರ್ಮಿಕ ಮುಖಂಡರಾದ ಸನ್ಯಾಸಿಗಳು ಕೇವಲ ಪೂಜೆ, ಪುನಸ್ಕಾರಗಳಲ್ಲಿ ಮಾತ್ರ ತೊಡಗಿಕೊಳ್ಳದೆ, ರೈತ ಹೋರಾಟಗಳಲ್ಲಿ ಭಾಗವಹಿಸುವ ಮೂಲಕ ಯುವರೈತರು ಸಾವಯುವ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಣೆ ನೀಡಬೇಕಾಗಿದೆ ಎಂದು ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದ್ದಾರೆ.ನಗರದ ಟೌನ್‌ಹಾಲ್ ಮುಂಭಾಗದಲ್ಲಿ ದೊಡ್ಡಹೊಸೂರಿನ ರೈತರ ಸತ್ಯಾಗ್ರಹದ ಎರಡನೇ ದಿನ ಹಮ್ಮಿಕೊಂಡಿದ್ದ ರೈತರ ಬೃಹತ್ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಪೂಜೆಗಳು ಮನಸ್ಸಿಗೆ ಶಾಂತಿ ನೀಡಿದರೆ, ಇಂತಹ ಕಾರ್ಯಕ್ರಮಗಳು ದೇಶದಲ್ಲಿ ಸಮೃದ್ಧಿ ತರಲಿವೆ. ಹಾಗಾಗಿ ಸ್ವಾಮೀಜಿಗಳು ಸಹ ಕೃಷಿಕರನ್ನು ಪ್ರೋತ್ಸಾಹಿಸುವುದನ್ನುತಮ್ಮ ದೈನಂದಿನ ಚಟುವಟಿಕೆಯ ಭಾಗವಹಿಸಿಕೊಳ್ಳುವ ಅಗತ್ಯವಿದೆ ಎಂದರು.
ರಾಜ್ಯಸರ್ಕಾರ ಮುಂದಿನ ಬಜೆಟ್‌ನಲ್ಲಿ ಮಣ್ಣು, ನೀರು ಮತ್ತು ವಿದ್ಯುತ್ ಕುರಿತಂತೆ, ಮತ್ತು ಕೃಷಿಗೆ ಅಗತ್ಯವಾದ ಬೀಜ, ಗೊಬ್ಬರ ಹಾಗೂ ಇನ್ನಿತರ ಕೃಷಿಗೆ ಪೂರಕ ವಸ್ತುಗಳ ಕುರಿತು ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಗತಿಪರ ಆಲೋಚನೆ ಉಳ್ಳವರು, ಹಾಗಾಗಿ ಅವರಿಗೆ ನಾನು ಸಹ ವೈಕ್ತಿಕವಾಗಿ ಮನವಿ ಮಾಡುತ್ತೇನೆ. ರೈತರು ಸಹ ಈ ನಿಟ್ಟಿನಲ್ಲಿ ನಿಯೋಗ ಹೋಗಿ ಮನವಿ ಮಾಡಿದರೆ ಮತ್ತಷ್ಟು ಅನುಕೂಲವಾಗುತ್ತದೆ. ಇದರಿಂದ ಲಕ್ಷಾಂತರ ರು. ವೇತನ ಕೆಲಸ ಬಿಟ್ಟು ಕೃಷಿಯತ್ತ ಮುಖ ಮಾಡಿರುವ ಕೃಷಿ ವಿಜ್ಞಾನಿ ಡಾ.ಮಂಜುನಾಥ್ ರಂತಹ ಯುವಜನರು ಏನನ್ನಾದರೂ ಸಾಧಿಸಲು ಅನುವು ಮಾಡಿಕೊಟ್ಟಂತಾಗುತ್ತದೆ ಎಂದರು. ಚಿಕ್ಕನಾಯಕನಹಳ್ಳಿಯ ಇಮ್ಮಡಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಆಸೆ ಬಿದ್ದ ರೈತ ಕೃಷಿಗೆ ಬೇಕಾದ ಮಣ್ಣು ಮತ್ತು ನೀರನ್ನು ಕುಲುಷಿತಗೊಳಿಸಿದ್ದಾನೆ. ಇದರ ಜೊತೆಗೆರೈತರ ಫಲವತ್ತಾದ ಭೂಮಿ ಕೈಗಾರಿಕೆ, ರಸ್ತೆ, ಕಾರಿಡಾರ್, ರಿಂಗ್ ರಸ್ತೆ ಹೆಸರಿನಲ್ಲಿ ಬಂಡವಾಳಶಾಹಿಗಳ ಪಾಲಾಗುತ್ತಿರುವುದು ವಿಷಾದದ ಸಂಗತಿಯಾಗಿದೆ. ಡಾ.ಮಂಜುನಾಥ್ ಅವರು ಈ ನಿಟ್ಟಿನಲ್ಲಿ ರೈತರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಈ ಮಣ್ಣಿನ ಮೇಲೆ ಮನುಷ್ಯನಷ್ಟೇ ಅಲ್ಲ, ಗಿಡ, ಮರ, ಪ್ರಾಣಿ ಪಕ್ಷಗಳಿಗೂ ಹಕ್ಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಇಂತಹ ಹೋರಾಟಗಳಿಗೆ ಕೈಜೋಡಿಸಬೇಕೆಂದರು. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ದೊಡ್ಡ ಹೊಸೂರಿನ ಗಾಂಧಿ ಸಹಜ ಬೇಸಾಯ ಆಶ್ರಮದ ಅಡಿಯಲ್ಲಿ ಮಣ್ಣು ಮತ್ತು ನೀರನ್ನು ಸಂರಕ್ಷಿಸುವ ಉದ್ದೇಶದಿಂದ ಸತ್ಯಾಗ್ರಹ ಆರಂಭಿಸಲಾಗಿದೆ. ಎಐ ತಂತ್ರಜ್ಞಾನದಿಂದ ನಮ್ಮ ಭೂಮಿ ಮತ್ತು ನೀರಿಗೆ ಯಾವ ರೀತಿ ಅಪಾಯವಿದೆ. ನಮ್ಮ ಮಕ್ಕಳ ಉದ್ಯೋಗದ ಮೇಲೆ ಯಾವ ದುಷ್ಪರಿಣಾಮ ಬೀರಲಿದೆ ಎಂದು ತಜ್ಞರು ಮಂಡಿಸಿ, ಜನರ ಗಮನ ಸೆಳೆಯಲಾಗಿದೆ ಎಂದರು. ಇಂದು ಎಐ ತಂತ್ರಜ್ಞಾನದಿಂದ ನೀರು ಮತ್ತು ಭೂಮಿಗೆ ಆಗುವ ತೊಂದರೆ ಕುರಿತು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಡಲು ರೈತರು, ಕಾರ್ಮಿಕರು, ನೀರಾವರಿ ತಜ್ಞರು ಇಲ್ಲಿಗೆ ಬಂದಿದ್ದೇವೆ. ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಮೂಲಕ ರಾಮನಗರಕ್ಕೆ ತೆಗೆದುಕೊಂಡು ಹೋಗುವ ಹುನ್ನಾರವನ್ನು ನಾವು ವಿರೋಧಿಸುತ್ತಿದ್ದೇವೆ. ಹಾಗೆಯೇ ನಂದಿಹಳ್ಳಿ ಯಿಂದ ಮಲ್ಲಸಂದ್ರ ಮೂಲಕ ವಸಂತನರಸಾಪುರಕ್ಕೆ ಹೋಗುವ ಔಟರ್ ರಿಂಗ್ ರಸ್ತೆಯ ಸಂತ್ರಸ್ತರು ಸಹ ಈ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದೇವೆ ಎಂದರು. ಪ್ರತಿಭಟನೆಯಲ್ಲಿ ಚಿಕ್ಕನಾಯಕನಹಳ್ಳಿಯ ಶ್ರೀಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ, ಸಂಯುಕ್ತ ಹೋರಾಟ ಕರ್ನಾಟಕದ ಸಿ.ಯತಿರಾಜು, ಪಂಡಿತ ಜವಹರ್,ಗಾಂಧಿ ಸಹಜ ಬೇಸಾಯ ಆಶ್ರಮದ ಕೃಷಿ ವಿಜ್ಞಾನಿ ಡಾ.ಮಂಜುನಾಥ್, ರವೀಶ್, ರೈತ ಸಂಘದ ಚಿಕ್ಕಬೋರೇಗೌಡ,ಗುಬ್ಬಿ ಲೋಕೇಶ್, ನಂದಿಹಳ್ಳಿ ಉದಯಕುಮಾರ್, ರಮೇಶ, ನಿಂಗರಾಜು, ರಾಜಶೇಖರ್,ಸುರೇಶ್, ಆರ್.ವಿ. ಪುಟ್ಟಕಾಮಣ್ಣ, ಕೃಷಿ ವಿಜ್ಞಾನಿಗಳು, ಯುವರೈತರು,ರೈತ ಮಹಿಳೆಯರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.