ಧಾರ್ಮಿಕ ಗುರುಗಳ ಸಮ್ಮುಖದಲ್ಲಿ ಬೃಹತ್ ಧಾರ್ಮಿಕ ಸಭೆ ನಡೆಯಲಿದೆ. ಸುತ್ತೂರು ಮಠದ ಶ್ರೀಗಳು, ಕನಕಪುರ ದೇಗುಲ ಮಠದ ಶ್ರೀಗಳು, ಸಿದ್ಧಗಂಗಾ ಮಠದ ಶ್ರೀಗಳು, ಕೊಪ್ಪಳದ ಗವಿಸಿದ್ದೇಶ್ವರ ಮಠದ ಶ್ರೀಗಳು, ಆದಿಚುಂಚನಗಿರಿ ಮಠದ ಶ್ರೀಗಳು ಮುಂತಾದ ಜಗದ್ಗುರುಗಳು ಸೇರಿದಂತೆ 300ಕ್ಕೂ ಹೆಚ್ಚು ಧಾರ್ಮಿಕ ಗುರುಗಳ ಸಂಗಮವೇ ಆಗಲಿದೆ.
ಕನ್ನಡಪ್ರಭ ವಾರ್ತೆ ಹಲಗೂರು
ಶ್ರೀಷಡಕ್ಷರ ಗವಿಮಠದಲ್ಲಿ ಮೇ1ರಂದು ನಡೆಯುವ ಧಾರ್ಮಿಕ ಸಭೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಮಠಾಧೀಶರು, ರಾಜಕಾರಣಿಗಳು ಭಾಗವಹಿಸಲಿದ್ದಾರೆ ಎಂದು ಡಿ.ಹಸಲಹಳ್ಳಿಯ ಮುಖಂಡ ಎಚ್.ಆರ್.ಅಶೋಕ್ ಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮದ ಶ್ರೀಗವಿಮಠದಿಂದ ನಡೆಯುವ ಧಾರ್ಮಿಕ ಸಭೆ ವೇಳೆ ಕಳಶಾರೋಹಣ ರಾಜಗೋಪುರ, ಬಸವ ವಿಗ್ರಹ, ಶ್ರೀಷಡಕ್ಷರ ಮಂಗಳ ಮಂಟಪ ಮತ್ತು ಅನ್ನದಾಸೋಹ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದರು.
ನಂತರ ಧಾರ್ಮಿಕ ಗುರುಗಳ ಸಮ್ಮುಖದಲ್ಲಿ ಬೃಹತ್ ಧಾರ್ಮಿಕ ಸಭೆ ನಡೆಯಲಿದೆ. ಸುತ್ತೂರು ಮಠದ ಶ್ರೀಗಳು, ಕನಕಪುರ ದೇಗುಲ ಮಠದ ಶ್ರೀಗಳು, ಸಿದ್ಧಗಂಗಾ ಮಠದ ಶ್ರೀಗಳು, ಕೊಪ್ಪಳದ ಗವಿಸಿದ್ದೇಶ್ವರ ಮಠದ ಶ್ರೀಗಳು, ಆದಿಚುಂಚನಗಿರಿ ಮಠದ ಶ್ರೀಗಳು ಮುಂತಾದ ಜಗದ್ಗುರುಗಳು ಸೇರಿದಂತೆ 300ಕ್ಕೂ ಹೆಚ್ಚು ಧಾರ್ಮಿಕ ಗುರುಗಳ ಸಂಗಮವೇ ಆಗಲಿದೆ ಎಂದರು.
ಇವರೊಂದಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್ ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಹಲವು ಪಕ್ಷಗಳ ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ, ಮಾಜಿ ಸಚಿವ ಬಿ.ಸೋಮಶೇಖರ್ ಪಾಲ್ಗೊಳ್ಳುವರು ಎಂದರು.
ಕನಕಪುರ ದೇಗುಲ ಮಠದ ಶ್ರೀಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಹಾಗೂ ಕಿರಿಯ ಶ್ರೀಗಳಾದ ಚೆನ್ನಬಸವ ಸ್ವಾಮಿಗಳು ಹಾಗೂ ಈ ಮಠವನ್ನು ಯಶಸ್ವಿಯಾಗಿ ಕಟ್ಟಲು ಶ್ರಮಿಸಿದ ಶ್ರೀ ಷಡಕ್ಷರ ಸ್ವಾಮಿಗಳ ನೇತೃತ್ವದಲ್ಲಿದಾರ್ಮಿಕ ಸಭೆ, ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.
ಈ ಕಾರ್ಯಕ್ರಮ ಧರ್ಮಾತೀತ, ಜಾತ್ಯತೀತವಾಗಿ, ರಾಜಕೀಯವಿಲ್ಲದೆ ನಡೆಸಲಾಗುತ್ತಿದೆ. ಎಲ್ಲಾ ಭಕ್ತರು, ಗ್ರಾಮಸ್ಥರು, ಹಿತೈಷಿ ಗಳು ಭಾಗವಹಿಸಬೇಕು. ಕಾರ್ಯಕ್ರಮದಲ್ಲಿ ಸುಮಾರು 35,000 ಜನರಿಗೆ ಅನ್ನದಾಸೋಹ ಆಯೋಜಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಗ್ರಾಮದ ಯಜಮಾನರಾದ ಚಿಕ್ಕವೀರಪ್ಪ, ಪುಟ್ಟಸಿದ್ದಯ್ಯ, ಬಸಪ್ಪ ದೇವರು, ಡಿ.ಹಲಸಹಳ್ಳಿ ವೀರಶೈವ ಸಮಾಜದ ಅಧ್ಯಕ್ಷ ಎಚ್.ವಿ.ಮಹೇಶ, ಸಿದ್ದಾಚಾರಿ, ನವೀನ ಸೇರಿದಂತೆ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.