ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ತಾಲೂಕು ಕಚೇರಿಗೆ ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಬಿ.ಸಿ.ಕೃಷ್ಣೇಗೌಡ, ಹೋರಾಟಗಾರ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ಸದಸ್ಯರು ಹಾಗೂ ನೂರಾರು ರೈತರು ಕಚೇರಿ ಮುತ್ತಿಗೆ ಹಾಕಿ ಜಿಲ್ಲಾ ಹಾಗೂ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ಹೊರಹಾಕಿದರು.
ತಾಲೂಕಿನ ಬೀಚನಕುಪ್ಪೆ ಗ್ರಾಮದ ಸರ್ವೇ ನಂ.76ರಲ್ಲಿ ಸುಮಾರು 136 ಎಕರೆ ಗೋಮಾಳ ಜಮೀನಿದ್ದು, ಅದರಲ್ಲಿ 61.26 ಗುಂಟೆ ಜಮೀನಿಗೆ ದುರಸ್ತಿ (ಪೋಡಿ) ಪ್ರಕ್ರಿಯೆ ಪೂರ್ಣಗೊಳಿಸದೆ ಕೆಐಎಡಿಬಿ ಮತ್ತು ತಾಲೂಕು ಸರ್ವೇ ಅಧಿಕಾರಿಗಳು ಜೊತೆಗೂಡಿ ಅಕ್ರಮವಾಗಿ ಜೆಎಂಸಿ ಸರ್ವೇ ಸ್ಕೆಚ್ ತಯಾರಿಸುತ್ತಿದ್ದಾರೆ. ಅಲ್ಲದೇ, ಕೇವಲ 23 ರೈತರಿಗೆ ಮಾತ್ರ ಸಾಗುವಳಿ ಚೀಟಿ ನೀಡಿದ್ದಾರೆ ಎಂದರು.ಸುಮಾರು 45 ಎಕರೆ ಮಾತ್ರ ಸರ್ವೇ ದಾಖಲೆಗಳಿವೆ. ಉಳಿದ ಜಮೀನಿಗೆ ಆರ್‌ಟಿಸಿನಲ್ಲಿ ಸರಿಯಾದ ದಾಖಲೆಗಳಿಲ್ಲ. ಜೊತೆಗೆ ಬರ್ಗರಿನ್ ಪ್ರಾರ್ಪಟಿಸ್‌ನ ಮಾಲೀಕ ಯಾವುದೇ ಮೂಲ ದಾಖಲಾತಿಗಳಿಲ್ಲದೆ ಕೇವಲ ಆರ್‌ಟಿಸಿ ಮುಖಾಂತರ, ಬೇನಾಮಿ ವ್ಯವಹಾರ ಮೂಲಕ ಖಾಸಗಿ ವ್ಯಕ್ತಿಗಳಿಂದ ಜಮೀನು ಕ್ರಯಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಕೇತಾಗನಹಳ್ಳಿ ಆರ್‌ಟಿಸಿಯಂತೆ ಕ್ರಯಕ್ಕೆ ಪಡೆದಿದ್ದು, ಅದರಲ್ಲಿ ಯಾವುದೇ ಸರ್ವೆ ಸ್ಕೆಚ್, ಒ ಅಂಡ್ ಎಂಯು ಸರ್ವೇ ದಾಖಲೆ, ಎಂಆರ್ ದಾಖಲೆಗಳಲ್ಲ ಎಂದು ನ್ಯಾಯಾಲಯ ಮತ್ತು ಕಾನೂನು ಅಧಿಕಾರಿಗಳು ಆರ್‌ಟಿಸಿ ರದ್ದುಪಡಿಸಿದ್ದಂತೆ, ಬೀಚನಕುಪ್ಪೆ ಗ್ರಾಮದ ಸರ್ವೇ ನಂ.76 ರನ್ನು ರದ್ದು ಪಡಿಸಬೇಕು. ಜನ-ಜಾನುವಾರಿಗಳಿಗೆ ಮತ್ತು ಸ್ಥಳೀಯ ಅಭಿವೃದ್ಧಿಗೆ ಈ ಜಮೀನನ್ನು ಮೀಸಲಿಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ ಸರ್ವೇ ನಂ.76ರನ್ನು ಸಂಪೂರ್ಣವಾಗಿ ಗೋಮಾಳ ಎಂದು ಘೋಷಿಸಬೇಕು. ಈಗಾಗಲೇ ನಡೆಯುತ್ತಿರುವ ಎಲ್ಲಾ ಜೆಎಂಸಿ ಸರ್ವೇ ಕಾರ್ಯಗಳನ್ನು ತಕ್ಷಣ ಸ್ಥಗಿತಗೊಳಿಸಬೇಕು. ಜೊತೆಗೆ ಅಕ್ರಮ ಆರ್‌ಟಿಸಿ ಮತ್ತು ಬೇನಾಮಿ ದಾಖೆಲೆಗಳನ್ನು ರದ್ದುಪಡಿಸಬೇಕು. ಈ ಹಿಂದಿನ 2020ರ ಸೆ.9ರ ಆದೇಶವನ್ನು ತಕ್ಷಣ ಜಾರಿಗೊಳಿಸಬೇಕು. ಅಲ್ಲದೇ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.