ಸೋಡಿಗದ್ದೆ ಮಹಾಸತಿ ದೇವಸ್ಥಾನದ ನೂತನ ಕಟ್ಟಡಕ್ಕೆ ಶಿಲಾನ್ಯಾಸ
ಧರ್ಮವನ್ನು ಆಚರಿಸಿದಾಗ ಮಾತ್ರ ಯಾವುದೇ ಮನುಷ್ಯ ಸುಖದ ಜೀವನ ಸಾಗಿಸಲು ಸಾಧ್ಯ. ಭಕ್ತಿ, ಶ್ರದ್ಧೆ ಮತ್ತು ಗುರುಭಕ್ತಿಯ ಮೂಲಕವೇ ಜೀವನಕ್ಕೆ ಸಾರ್ಥಕತೆ ದೊರೆಯುತ್ತದೆ ಎಂದು ಉಜಿರೆಯು ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಗುರುವಾರ ಸೋಡಿಗದ್ದೆಯ ಶ್ರೀ ಮಹಾಸತಿ ದೇವಸ್ಥಾನ ಅಭಿವೃದ್ಧಿ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ, ಶ್ರೀ ಮಹಾಸತಿ ದೇವಸ್ಥಾನ ಸೋಡಿಗದ್ದೆ ಇವರ ಜಂಟಿ ಆಶ್ರಯದಲ್ಲಿ ನಡೆದ ನೂತನ ಶಿಲಾಮಯ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಧರ್ಮ ಮತ್ತು ಆಚಾರವನ್ನು ಚೆನ್ನಾಗಿ ಅರಿತು ನಡೆಯುವವನು ಮೋಕ್ಷದ ಮಾರ್ಗವನ್ನು ಕಂಡುಕೊಳ್ಳುತ್ತಾನೆ. ಕೇವಲ ದೇವಸ್ಥಾನಕ್ಕೆ ತೆರಳುವುದರಿಂದ ಮಾತ್ರ ದೇವರ ಆಶೀರ್ವಾದ ಸಿಗುವುದಿಲ್ಲ. ಗುರುದಾಸನಾದಾಗ ಮಾತ್ರ ದೇವರ ಕೃಪೆ ದೊರೆಯುತ್ತದೆ. ಗುರು ಮತ್ತು ಶಿಷ್ಯರ ಸಂಬಂಧ ಪ್ರಶ್ನಾತೀತವಾದದ್ದು ಎಂದು ಹೇಳಿದರು.ಮಹಾಸತಿ ದೇವಿಯ ಮೇಲಿನ ಶ್ರದ್ಧೆ ನೆರಳಿನಂತೆ ಭಕ್ತರನ್ನು ಕಾಪಾಡುತ್ತದೆ. ಬ್ರಹ್ಮಾಂಡದ ಸೃಷ್ಟಿಯೇ ಒಂದು ದಿವ್ಯ ಬೆಳಕು. ಪರಬ್ರಹ್ಮನ ಕೃಪೆ ಸಿಕ್ಕಾಗ ಆತ್ಮೋದ್ಧಾರ ಸಾಧ್ಯವಾಗುತ್ತದೆ. ದೇಹದಲ್ಲಿ ಶಕ್ತಿ, ಮನಸ್ಸಿನಲ್ಲಿ ಭಕ್ತಿ ಮತ್ತು ಶ್ರದ್ಧೆ ಇರುವಾಗಲೇ ಒಳ್ಳೆಯ ಕೆಲಸಗಳನ್ನು ಮಾಡಬೇಕು, ಅದು ಮುಂದಿನ ಜೀವನಕ್ಕೆ ಠೇವಣಿ ಆಗುತ್ತದೆ. ಅಧಿಕಾರ ಮತ್ತು ಸಂಪತ್ತನ್ನು ಸದ್ಬಳಕೆ ಮಾಡಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಗುರುವಿನ ಆಶೀರ್ವಾದ ಹೆಚ್ಚಾದಾಗ ದೈವಬಲವೂ ವೃದ್ಧಿಯಾಗುತ್ತದೆ. ಅದನ್ನು ಭಯದಿಂದಲೋ, ಹಣದಿಂದಲೋ ಪಡೆಯಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ತಮ್ಮ ಆತ್ಮೋದ್ದಾರವನ್ನು ತಾವೇ ಮಾಡಿಕೊಂಡು ವಸುದೈವ ಕುಟುಂಬಕಂ ಎಂಬ ಭಾವನೆಯೊಂದಿಗೆ ಬದುಕಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಮಾತನಾಡಿ, ದೇವಸ್ಥಾನದ ಅಭಿವೃದ್ಧಿಗೆ ಅಗತ್ಯವಿರುವ ಪ್ರಕ್ರಿಯೆಗಳು ಹಾಗೂ ಹಂತ ಹಂತದ ಕಾಮಗಾರಿಗಳನ್ನು ಜವಾಬ್ದಾರಿಯಿಂದ ಕೈಗೊಳ್ಳಲಾಗುವುದು. ಸಾರ್ವಜನಿಕರ ಹಣ ಸದ್ಬಳಕೆಯಾಗುವಂತೆ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲಾಗುವುದು ಎಂದರು.