ಡಂಬಳ: ಹಿಂದು ಧರ್ಮದಲ್ಲಿ ಏಕಾದಶಿ, ಶಿವರಾತ್ರಿ, ನವರಾತ್ರಿ ಪವಿತ್ರ ದಿನಗಳಾದರೆ. ಮುಸ್ಲಿಂ ಧರ್ಮದಲ್ಲಿ ರಂಜಾನ ಪವಿತ್ರ ದಿನವಾಗಿದೆ. ಈ ತಿಂಗಳಲ್ಲಿ ಮಾಡುವ ಉಪವಾಸ ವೃತಕ್ಕೆ ವೈಜ್ಞಾನಿಕ ಹಿನ್ನೆಲೆ ಇದ್ದು, ಉತ್ತಮ ಆರೋಗ್ಯಕ್ಕೆ ಪೂರಕವಾಗಿದೆ ಎಂದು ರೋಣ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ (ಮಿಥುನ) ಜಿ. ಪಾಟೀಲ್ ಹೇಳಿದರು.
ಧಾರ್ಮಿಕ ಆಚರಣೆಗಳು ಕೇವಲ ಸಂಪ್ರದಾಯಗಳಿಗೆ ಸೀಮಿತವಾಗದೆ, ಮಾನವೀಯ ಮೌಲ್ಯಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು. ಎಲ್ಲ ಧರ್ಮಗಳ ಸಾರ ಒಂದೇ. ಧರ್ಮ ಮಾನವೀಯತೆ, ಪ್ರೀತಿ ಮತ್ತು ಸಹೋದರತ್ವವನ್ನು ಸಾರುತ್ತದೆ. ಇಫ್ತಿಯಾರ್ ಕೂಟಗಳಂತಹ ಕಾರ್ಯಕ್ರಮಗಳು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದ ಗಟ್ಟಿಗೊಳಿಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಗಣ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿ ಸೌಹಾರ್ದದ ಸಂದೇಶ ಸಾರಿದರು. ಉಪವಾಸ ಮುಕ್ತಾಯದ ನಂತರ ಎಲ್ಲರೂ ಸೇರಿ ಇಫ್ತಿಯಾರ್ ಸೇವಿಸಿ ಸಾಮರಸ್ಯದ ಸಂಕೇತ ಮೂಡಿಸಿದರು.ಖ್ಯಾತ ವಕಿಲರಾದ ಬಿ.ಎಸ್. ಕೆರಿ ಮಾತನಾಡಿ ರಂಜಾನ್ ತಿಂಗಳು ತ್ಯಾಗ, ಸಹನೆ ಮತ್ತು ಸಹೋದರತ್ವದ ಸಂಕೇತವಾಗಿದೆ. ಶಾಸಕರಾದ ಜಿ.ಎಸ್. ಪಾಟೀಲರು ಮತ್ತು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ ಜಿ. ಪಾಟೀಲರು ಇಫ್ತಿಯಾರ ಕೂಟ ಆಯೋಜಿಸಿದ್ದಾರೆ. ಸಮಾಜದಲ್ಲಿ ಪರಸ್ಪರ ಪ್ರೀತಿ, ಸೌಹಾರ್ದ ಮತ್ತು ಏಕತೆಯನ್ನು ಕಾಪಾಡಿಕೊಳ್ಳಲು ಇಂತಹ ಇಫ್ತಿಯಾರ್ ಕೂಟಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.