ಕನ್ನಡಪ್ರಭ ವಾರ್ತೆ ಚಿಂತಾಮಣಿ
ಬೇರೆಯವರು ಏನೂ ಮಾಡುತ್ತಿಲ್ಲವೆಂದು ಸುಮ್ಮನೆ ಕೂರುವ ಬದಲಿಗೆ ನಮ್ಮ ಕೈಲಾದ ಕಾರ್ಯವನ್ನು ಮಾಡುತ್ತಿರಬೇಕು. ಭಾಷಣಗಳಲ್ಲಿ ವಿಚಾರವನ್ನು ತಿಳಿಸುವವರು ಇಂದು ಸಾಕಷ್ಟಿದ್ದಾರೆ, ಧರ್ಮಾಚರಣೆ ಮಾಡುವ ಮಾದರಿ ವ್ಯಕ್ತಿಗಳ ಅಗತ್ಯವಿದೆಯೆಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು.ತಾಲ್ಲೂಕಿನ ಶ್ರೀಕ್ಷೇತ್ರ ಕೈವಾರದ ಶ್ರೀಯೋಗಿನಾರೇಯಣ ಮಠದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ವತಿಯಿಂದ ಆದಿಕವಿ ಹಾಗೂ ವಾಗ್ದೇವಿ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಮಾನ್ಯ ಜನರಿಗೆ ವಿಚಾರಗಳು ತಿಳಿಯಬೇಕೆಂಬ ಕಾರಣಕ್ಕಾಗಿ ಭಾಷೆಗಳು ಆರಂಭವಾದವು ಎಂದರು.
ಉತ್ತಮ ವಿಚಾರ ತಲುಪಿಸಿಸಾಮಾನ್ಯ ಜನರಿಗೂ ಅರಿವಾಗುವಂತಹ ಭಾಷೆ, ವಿಚಾರ ನಮ್ಮಲ್ಲಿ ಈಗಾಗಲೇ ಇದೆ. ಹೊಸದಾಗಿ ಯಾವುದನ್ನೂ ಸೃಷ್ಟಿಸಬೇಕಾಗಿಲ್ಲ. ಈ ನಿಟ್ಟಿನಲ್ಲಿ ಹೆಚ್ಚಿನ ಜನರಿಗೆ ಉತ್ತಮ ವಿಚಾರಗಳು ಜನರಿಗೆ ತಲುಪಲಿ ಎಂಬ ಕಾರಣಕ್ಕೆ ಕಳೆದ ೨೫ ವರ್ಷದಿಂದ ಕೈವಾರ ಮಠವು ಐದು ಸಾವಿರ ಭಜನಾ ತಂಡಗಳನ್ನು ನಡೆಸುತ್ತಿರುವುದು ಸಾರ್ಥಕತೆ ಮೂಡಿಸಿದೆಯೆಂದರು.
ಆಕಾಶವಾಣಿ ನಿವೃತ್ತ ಅಧಿಕಾರಿ ಹಾಗೂ ಏಕವ್ಯಕ್ತಿ ತಾಳ ಮದ್ದಳೆ ಪ್ರಕಾರದ ರೂವಾರಿ ದಿವಾಕರ ಹೆಗಡೆ ಕೆರೆಹೊಂಡ ರವರು ಮಾತನಾಡಿ, ಉತ್ಪನ್ನಗಳು ಮಾತ್ರ ಇದ್ದರೆ ಅದು ಮಾರುಕಟ್ಟೆಯಾಗುತ್ತದೆ. ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಬೇಕೆಂದರೆ ಶ್ರದ್ಧೆ ಮುಖ್ಯ ಎಂದರು.ಸಮಾಜದ ಪ್ರತಿಬಿಂಬ ಸಾಹಿತ್ಯ
ವಿಷ್ಣುಭಟ್ ಡೋಂಗ್ರೆ ಆದಿಕವಿ ಪುರಸ್ಕಾರ ಸ್ವೀಕರಿಸಿ ಮಾತನಾಡಿ ಸಾಹಿತ್ಯವು ಸಮಾಜದ ಪ್ರತಿಬಿಂಬ. ರಾಮಾಯಣ್ವನ್ನು ಓದಿದರೆ ಆಗಿನ ಕಾಲದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಸನ್ನಿವೇಶಗಳನ್ನು ತಿಳಿಯಬಹುದು ಎಂದರು.ಡಾ.ಜಿ.ಬಿ.ಹರೀಶ ವಾಗ್ದೇವಿ ಪುರಸ್ಕಾರ ಸ್ವೀಕರಿಸಿ ಮಾತನಾಡಿ ಜ್ಞಾನವಂತಿಕೆ ಜೊತೆಗೆ ಹೃದಯವಂತಿಕೆಯೂ ಬೇಕು. ಆಕಾಶಕ್ಕೆ ಏಣಿ ಹಾಕುವ ಮನುಷ್ಯನು ಇನ್ನೊಬ್ಬ ಮನುಷ್ಯನ ಹೃದಯವನ್ನು ಅರಿಯುವಲ್ಲಿ ಹಿಂದೆ ಬಿದ್ದಿದ್ದೇವೆ ಎಂದರು.
ಸಾಮಾಜಿಕ ಕಾಳಜಿ ಮತ್ತು ರಾಷ್ಟೀಯ ದೃಷ್ಟಿಕೋನ ಹೊಂದಿರುವ ಹಿರಿಯ ಸಾಹಿತಿ ಮತ್ತು ಯುವಸಾಹಿತಿಗೆ ನೀಡಲಾಗುವ ಪುರಸ್ಕಾರವನ್ನು ಸಾಹಿತಿ ವಿಷ್ಣುಭಟ್ ಡೊಂಗ್ರೆ ಮತ್ತು ಚಿಂತಕ ಲೇಖಕ ಡಾ.ಜಿ.ಬಿ.ಹರೀಶ್‌ರಿಗೆ ಪ್ರದಾನ ಮಾಡಲಾಯಿತು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ಕುರಿತಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ರವರು ಪ್ರಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಕೈವಾರ ಮಠದ ಸಂಕೀರ್ತನಾ ಯೋಜನೆ ಸಂಚಾಲಕ ವಾನರಾಶಿ ಬಾಲಕೃಷ್ಣ, ಭಾಗವತರ್, ಮಠದ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ವಾಗ್ದೇವಿ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿ ರಂಜನ್, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ಖಜಾಂಜಿ ರಾಮಕೃಷ್ಣ ಶ್ರೌತಿ, ಸಹ ಖಜಾಂಚಿ ವಿಜಯ್ ಭರ್ತೂರು, ತುಮಕೂರು ವಿಭಾಗದ ಸಂಯೋಜಕ ಅಶ್ವತ್ಥನಾರಾಯಣ ಮುಂತಾದವರು ಉಪಸ್ಥಿತರಿದ್ದರು.