ವಾರ್ಷಿಕ ಮಹಾಸಭೆಯಲ್ಲಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ
ಕನ್ನಡಪ್ರಭ ವಾರ್ತೆ ಗಂಗಾವತಿಸುಸ್ತಿ ಸಾಲ ಪಾವತಿ ಮಾಡಿದ ರೈತರಿಗೆ ಮೊದಲ ಆದ್ಯತೆಯಂತೆ ಮರು ಸಾಲ ನೀಡಲಾಗುವುದು ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ ಹೇಳಿದರು.ನಗರದ ಶ್ರೀ ಚೆನ್ನಬಸವಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ 70 ವರ್ಷದಲ್ಲಿ ಗಂಗಾವತಿ ಪಿಕಾರ್ಡ್ ಬ್ಯಾಂಕ್‌ನಲ್ಲಿ ಒಟ್ಟು 134 ರೈತರು ₹1.41 ಕೋಟಿ ಬಡ್ಡಿ ಹೊರತಾದ ಸುಸ್ತಿ ಸಾಲ ಇದೆ. ಈ ಎಲ್ಲ ರೈತರಿಗೆ ಕಾಲಕಾಲಕ್ಕೆ ನೋಟಿಸ್ ನೀಡಿ, ಸುಸ್ತಿ ಸಾಲದ ಬಗ್ಗೆ ಮಾಹಿತಿ ನೀಡಲಾಗಿದೆ. ಕೆಲವರಿಗೆ ಸಾಲಮನ್ನಾ ಆಗುತ್ತದೆ ಎಂಬ ತಪ್ಪು ಕಲ್ಪನೆ ಇದ್ದು, ಯಾವತ್ತೂ ಪಿಕಾರ್ಡ್ ಬ್ಯಾಂಕ್ ಸಾಲಮನ್ನಾ ಆಗುವುದಿಲ್ಲ. ಈ ಹಿನ್ನೆಲೆ ರೈತರು ನಿಮ್ಮ ಸುಸ್ತಿ ಸಾಲ ಪಾವತಿ ಮಾಡುವ ಮೂಲಕ ಸಾಲದಿಂದ ಮುಕ್ತರಾದರೆ, ಬ್ಯಾಂಕ್‌ನಿಂದ ಮರು ಸಾಲ ನೀಡಲಾಗುವುದು ಎಂದರು.ಸಾಲ ವಿತರಣೆಯಲ್ಲಿ ಯಾರಿಗೂ ತಾರತಮ್ಯ ಮಾಡಿಲ್ಲ. ಕೃಷಿಗೆ ಸಂಬಂಧಿಸಿದ ಎಲ್ಲ ರೀತಿಯ ಸಾಲ ಸೌಲಭ್ಯ ಬ್ಯಾಂಕ್ ಮೂಲಕ ದೊರೆಯುತ್ತವೆ. ಕುರಿ ಸಾಲಕ್ಕೆ ವಿಮೆ ಮಾಡಬೇಕಿದೆ. ಇದರ ಜೊತೆಗೆ ಒಟ್ಟು ಸಾಲಕ್ಕೆ ಶೇ. 5ರಷ್ಟು ಶೇರು ಮೊತ್ತ ನಾವು ಉಳಿಸಿಕೊಳ್ಳುತ್ತೇವೆ. ಜೊತೆಗೆ ಸುಮಾರು 18 ಸಾವಿರ ರೂ.ವರೆಗೆ ವಿಮೆ ಪಾವತಿ ಮಾಡಬೇಕಾಗಿದೆ. ಈ ಎಲ್ಲ ಸಾಧಕ ಬಾದಕ ನೋಡಿಕೊಂಡು ಕುರಿ ಸಾಲಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ವ್ಯವಸ್ಥಾಪಕ ಅಬ್ದುಲ್ ನಜೀರ್ ವಾರ್ಷಿಕ ವರದಿ ಮಂಡಿಸಿದರು. ಮಾಜಿ ಸಂಸದ ಶಿವರಾಮಗೌಡ, ರೈತ ಸದಸ್ಯರಾದ ಸತ್ಯನಾರಾಯಣ, ಗಿರೇಗೌಡ, ಹನುಮೇಶ ನಾಯಕ ಅಭಿಪ್ರಾಯ ವ್ಯಕ್ತ ಪಡಿಸಿದರು.ಉಪಾಧ್ಯಕ್ಷ ಜನಗಂಡಪ್ಪ ಪೂಜಾರಿ, ನಿರ್ದೇಶಕರಾದ ಶರಣೇಗೌಡ ಮಾಲಿಪಾಟೀಲ್, ಬಸವರಾಜ ಹಳ್ಳಿ, ಪಂಪನಗೌಡ, ಹನುಮಪ್ಪ ದಾಸರ, ಚೆನ್ನಮ್ಮ ಬಸವರಾಜ, ಯಂಕಮ್ಮ ಮಹಾದೇವಪ್ಪ, ಉಮಾದೇವಿ ಯಮನೂರಪ್ಪ, ರತ್ನಮ್ಮ ಬೀರಪ್ಪ, ಬ್ಯಾಂಕ್ ಸಿಬ್ಬಂದಿ ಸೋಮೇಶ ಪುರದ, ಡಿ.ರಾಘವೇಂದ್ರರಾವ್, ಬಸವರಾಜ ಹಳ್ಳಿ, ಪರಶುರಾಮ, ಕುಮಾರ, ಜಂಬಣ್ಣ ತಟ್ಟಿ ಇದ್ದರು. ಜಿಲ್ಲಾ ವ್ಯವಸ್ಥಾಪಕ ಬಸವರಾಜಗೌಡ ಪಾಟೀಲ್ ವಂದಿಸಿದರು.