ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಮೆಲ್ಕಾರ್-ಕಲ್ಲಡ್ಕ ರಸ್ತೆಯ ಮಧ್ಯೆ ನರಹರಿ ಪರ್ವತದ ಬಳಿ ಚರಂಡಿಯಲ್ಲಿ ಮಾಂಸಕ್ಕಾಗಿ ಉಪಯೋಗಿಸಿದ ಪ್ರಾಣಿಯ ಅವಶೇಷಗಳು ಪತ್ತೆಯಾಗಿದ್ದು, ಕೆಲಕಾಲ ಗೊಂದಲಕ್ಕೆ ಕಾರಣವಾಯಿತು.
ಈ ಕುರಿತು ಬಂಟ್ವಾಳ ಶಾಸಕರಿಗೆ ಸ್ಥಳೀಯ ಬಿಜೆಪಿ ಪ್ರಮುಖರೋರ್ವರು ಮಾಹಿತಿ ನೀಡಿದ್ದು, ಶಾಸಕರು ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿ, ಯಾವ ಪ್ರಾಣಿ ಎಂಬುದನ್ನು ಖಚಿತ ಪಡಿಸಿಕೊಂಡು ಗೊಂದಲ ಸೃಷ್ಟಿಯಾಗದಂತೆ ಇತ್ಯರ್ಥಪಡಿಸಲು ಸೂಚಿಸಿದ್ದರು. ಪೊಲೀಸರು ಪಶು ವೈದ್ಯರನ್ನು ಕರೆಸಿ ಅವಶೇಷಗಳ ಪರೀಕ್ಷೆ ನಡೆಸಿದಾಗ ಇದು ಕೋಳಿ, ಕುರಿ ಮತ್ತು ಆಡಿನ ಅವಶೇಷ ಎಂಬುದು ಖಾತರಿಯಾಯಿತು.
ಕಿಡಿಗೇಡಿಗಳು ಪ್ರಾಣಿಗಳನ್ನು ಕಡಿದು ಮಾಂಸ ಮಾಡಿದ ಬಳಿಕ ಉಳಿದ ಅವಶೇಷಗಳನ್ನು ಚರಂಡಿಯಲ್ಲಿ ಎಸೆದುಹೋಗಿದ್ದಾರೆ ಎಂದು ಹೇಳಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಅವಶೇಷಗಳನ್ನು ಬಿಸಾಡಿ ಮಲಿನಗೊಳಿಸಿದ ಬಗ್ಗೆ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಪ್ರಾಣಿಗಳ ಅವಶೇಷಗಳನ್ನು ಎಸೆದುಹೋದವರ ಪತ್ತೆ ಕಾರ್ಯಕ್ಕೆ ನಗರ ಠಾಣಾ ಪೋಲೀಸರ ತಂಡ ಮುಂದಾಗಿದೆ.