ಕನ್ನಡಪ್ರಭ ವಾರ್ತೆ ಬೀದರ್
ಪುಲ್ವಾಮಾ ದಾಳಿಯ ದುರಂತದಲ್ಲಿ ಮೃತರಾದ ಹುತಾತ್ಮ ಯೋಧರ ಸೇವೆಯನ್ನು ಈ ದೇಶದ ಮಕ್ಕಳೂ ಎಂದೂ ಮರೆಯಬಾರದು ನಾವೆಲ್ಲರೂ ದೇಶ ಸೇವೆಗೆ ಮುಂದಾಗಬೇಕೆಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಹಾಗೂ ನಿವೃತ್ತ ಯೋಧ ಅರುಣ ಮೊಕಾಶಿ ಹೇಳಿದರು.ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಪುಲ್ವಾಮಾ ದಾಳಿಯ ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಿ ಮಾತನಾಡಿದ ಅವರು, ನಮ್ಮ ದೇಶ ಹಿಂದೆಂದಿಗಿಂತಲೂ ಈಗ ಬಲಿಷ್ಠವಾಗಿದೆ. 2019ರ ಫೆ. 14ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ನಮ್ಮ ಸೇನೆಯ 40 ಜನ ಬಲಿಯಾದರು. ಅವರ ಕುಟುಂಬ ಹಾಗೂ ನಮ್ಮ ದೇಶ ಈ ಮಹಾನ್ ಯೋಧರ ತ್ಯಾಗ ಬಲಿದಾನಗಳನ್ನು ಸ್ಮರಿಸುತ್ತಿದೆ ಎಂದರು.
ನಿಗರಾಣಿ ಭಿತ್ತಿಪತ್ರ ಅನಾವರಣ: ಜಿಲ್ಲಾ ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ‘ನಿಗರಾಣಿ’ ಯೋಜನೆಯ ಭಿತ್ತಿಪತ್ರವನ್ನು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿ ಪ್ರಾಚಾರ್ಯರಾದ ಮಲ್ಲಿಕಾರ್ಜುನ ಬಿ.ಆರ್ ಅನಾವರಣ ಮಾಡಿ, ಪೊಲೀಸ್ ಇಲಾಖೆಗೆ ನಮ್ಮ ಸಂಸ್ಥೆಯ ಉಪನ್ಯಾಸಕರಾದ ಶಿವಕುಮಾರ ಕಟ್ಟೆಯವರು ಸೂಚಿಸಿರುವ ಹೆಸರನ್ನು ಆಯ್ಕೆ ಮಾಡಿಕೊಂಡಿರುವುದು ನಮಗೆಲ್ಲ ಸಂತಸ ತಂದಿದೆ ಎಂದು ಹೇಳಿದರು.ಮತದಾನದ ಪ್ರತಿಜ್ಞೆ: ಉಪನ್ಯಾಸಕರಾದ ಶಿವಕುಮಾರ ಕಟ್ಟೆ ಮತದಾನ ಜಾಗೃತಿಯ ಬಗ್ಗೆ ಮಾತನಾಡಿ, ಕಾಲೇಜಿನಲ್ಲಿ 18 ವರ್ಷ ತುಂಬಿರುವ ಎಲ್ಲ ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಮತ್ತು ಕಡ್ಡಾಯವಾಗಿ ಎಲ್ಲರೂ ಮತ ಚಲಾಯಿಸಬೇಕೆಂದು ಹೇಳಿದರು. ಚುನಾವಣಾ ಆಯೋಗ ನೀಡಿರುವ ಮತದಾರರ ಪ್ರತಿಜ್ಞಾ ವಿಧಿಯನ್ನು ಎಲ್ಲರಿಗೂ ಬೋಧಿಸಿದರು.
ರಾಜ್ಯ ಕೌಶಲ್ಯಾಭಿವೃದ್ಧಿ ಇಲಾಖೆಯು ಇದೇ ಫೆ.26 ಮತ್ತು 27ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ ಮಹಾಉದ್ಯೋಗ ಮೇಳಕ್ಕೆ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿ ಭೀಮಣ್ಣ ತಿಳಿಸಿದರು.ಇದೇ ಸಂದರ್ಭದಲ್ಲಿ ಸೀ.ಪಿ. ವಿಭಾಗದ ವಿದ್ಯಾರ್ಥಿಗಳು ಈ ವರ್ಷ ಕೈಗೆತ್ತಿಕೊಂಡಿರುವ ‘ಬೀದರ್ ಜಿಲ್ಲೆಯಲ್ಲಿ ಆಚರಿಸುವ ಧಾರ್ಮಿಕ ಹಬ್ಬಗಳ ಖರ್ಚು-ವೆಚ್ಚಗಳು’ ಎನ್ನುವ ವಿಷಯದ ಅಧ್ಯಯನಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸಲಾದ ಭಿತ್ತಿಪತ್ರಗಳ ಪ್ರದರ್ಶನ ಕೂಡ ನೆರವೇರಿತು. ಪ್ರಾಚಾರ್ಯರು ಮತ್ತು ಎಲ್ಲ ಸಿಬ್ಬಂದಿ ಭಿತ್ತಿ ಪತ್ರಗಳ ಪ್ರದರ್ಶನ ವೀಕ್ಷಿಸಿ ಪ್ರಶಂಸಿದರು.