ಬ್ರಿಟಿಷರ ಧ್ವಜ ಇಳಿಸಿದ ಸೋಂದಾ ಸದಾಶಿವರಾಯರ ಸಾಹಸಗಾಥೆ ಸ್ಮರಣೆ

KannadaprabhaNewsNetwork |  
Published : Feb 27, 2026, 02:30 AM IST
 | Kannada Prabha

ಸಾರಾಂಶ

ಇತಿಹಾಸದ ಈ ಅದ್ಭುತ ಕ್ಷಣವನ್ನು ಸ್ಮರಿಸುವ ನಿಟ್ಟಿನಲ್ಲಿ ಕಳೆದ 10 ವರ್ಷಗಳಿಂದ ನಿರಂತರವಾಗಿ ವಿಜಯ ದಿವಸವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಕಡವಾಡದಲ್ಲಿ ಸಂಭ್ರಮದ ‘ವಿಜಯ ದಿವಸ’ ಆಚರಣೆ

ಕನ್ನಡಪ್ರಭ ವಾರ್ತೆ ಕಾರವಾರ

ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಅವರ ಧ್ವಜವನ್ನು ಕೆಳಗಿಳಿಸಿ, ಮೊದಲ ಬಾರಿಗೆ ಸ್ವಾತಂತ್ರ್ಯ ಘೋಷಿಸಿದ ಸೋಂದಾ ಅರಸ ಸದಾಶಿವರಾಯರ ವಿಜಯದ ಸವಿನೆನಪಿಗಾಗಿ, ಕಾರವಾರ ತಾಲೂಕಿನ ಕಡವಾಡದ ನಂದವಾಳದಲ್ಲಿ ಗುರುವಾರ ‘ವಿಜಯ ದಿವಸ’ವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಡವಾಡ ಕಲ್ಲೆಮಕ್ಕಿಯ ರಘು ಗಣೇಶ ನಾಯ್ಕ ಅವರ ಆವರಣದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಶ್ರೀ ಗಣಪತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಆಗಮಿಸಿದ್ದ ನಿವೃತ್ತ ಉಪನ್ಯಾಸಕ ಡಾ. ಎಸ್.ವಿ.ನಾಯ್ಕ ಭಾರತಮಾತೆ ಹಾಗೂ ಸದಾಶಿವರಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಸೋಂದಾ ಸದಾಶಿವರಾಯರು ಕೇವಲ ಕ್ರಾಂತಿಕಾರಿ ಅರಸರಷ್ಟೇ ಅಲ್ಲ, ಚತುರ್ಭಾಷಾ ವಿಶಾರದರಾಗಿ ಸಾಹಿತ್ಯ ಕೃಷಿಯನ್ನೂ ಮಾಡಿದವರು. 1705ರಲ್ಲೇ ಬ್ರಿಟೀಷರ ವಿರುದ್ಧ ಗುಡುಗಿ, ಅವರನ್ನು ಓಡಿಸಿ ಅವರ ಧ್ವಜವನ್ನು ಇಳಿಸಿದ ಮಹಾನ್ ಸಾಹಸಿ ಅವರು ಎಂದು ಅರಸರ ಶೌರ್ಯವನ್ನು ಕೊಂಡಾಡಿದರು.ಬಿಜೆಪಿ ಮುಖಂಡ ರಾಜೇಂದ್ರ ನಾಯ್ಕ್ ಮಾತನಾಡಿ, ಇತಿಹಾಸದ ಈ ಅದ್ಭುತ ಕ್ಷಣವನ್ನು ಸ್ಮರಿಸುವ ನಿಟ್ಟಿನಲ್ಲಿ ಕಳೆದ 10 ವರ್ಷಗಳಿಂದ ನಿರಂತರವಾಗಿ ವಿಜಯ ದಿವಸವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇಂತಹ ಕಾರ್ಯಕ್ರಮಗಳು ದೇಶಪ್ರೇಮವನ್ನು ಜಾಗೃತಗೊಳಿಸುತ್ತವೆ ಎಂದರು. ಇದೇ ಸಂದರ್ಭ ದೇಶ ಕಾಯುವ ಕಾಯಕದಿಂದ ನಿವೃತ್ತರಾದ ಸೈನಿಕರನ್ನು ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗೌರವಿಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ನಾಗೇಶ್ ಕುರಡೇಕರ್ ಸ್ವಾಗತಿಸಿದರೆ, ಸುಭಾಷ್ ಗುನಗಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಶಿರವಾಡ ಗ್ರಾಪಂ ಮಾಜಿ ಅಧ್ಯಕ್ಷೆ ಅಶ್ವಿನಿ ನಾಯ್ಕ್, ಕಡವಾಡ ಪಂಚಾಯಿತಿ ಮಾಜಿ ಅಧ್ಯಕ್ಷ ಆನಂದ ನಾಯ್ಕ, ಸಂಜಯ ನಾಯ್ಕ್ ಹಾಗೂ ಸುಧಾಕರ್ ನಾಯ್ಕ್ ಉಪಸ್ಥಿತರಿದ್ದರು. ಉದಯ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯ ಗಾಯನದೊಂದಿಗೆ ವಿಜಯ ದಿವಸದ ಸಂಭ್ರಮ ಮುಕ್ತಾಯಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರ್ಮದ ದಾರಿಯಲ್ಲಿ ನಡೆದರೆ ಮಾತ್ರ ಸುಖಿ ಜೀವನ: ದೊಡ್ಡನಗೌಡ ಪಾಟೀಲ
ಪೊಲೀಸರು, ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ