ಹುಬ್ಬಳ್ಳಿ: ಶಿವರಾತ್ರಿ ಹಿನ್ನೆಲೆಯಲ್ಲಿ ಬುಧವಾರದಂದು ನಗರಾದ್ಯಂತ ಶಿವನಾಮ ಸ್ಮರಣೆ ಮೇಳೈಸಿತ್ತು. ಭಕ್ತರು ಶ್ರದ್ಧಾ- ಭಕ್ತಿಯಿಂದ ಮಹಾ ಶಿವರಾತ್ರಿ ಆಚರಣೆ ಮಾಡಿದರು. ಎಲ್ಲ ದೇವಸ್ಥಾನಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು. ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದರು.
ಬಹುತೇಕ ದೇವಸ್ಥಾನಗಳು, ಮಠದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕ ನಡೆದರೆ, ಮಹಿಳಾ ಮತ್ತು ಪುರುಷ ಭಜನಾ ಮಂಡಳಿಯಿಂದ ಸಂಜೆ ಶಿವನಾಮ ಸ್ಮರಣೆ, ವಿಶೇಷ ಭಜನಾ ಕಾರ್ಯಕ್ರಮ ಹಾಗೂ ರಾತ್ರಿಯಿಡಿ ಜಾಗರಣೆ ನಡೆಯಿತು. ಶಿವರಾತ್ರಿ ನಿಮಿತ್ತ ಉಪವಾಸ ಮಾಡುವ ಮೂಲಕ ಶಿವನಿಗೆ ಭಕ್ತಿ ಸಮರ್ಪಿಸಿದರು.ವಿಶೇಷ ಅಲಂಕಾರ
ನಗರದ ಗೋಕುಲ ರಸ್ತೆಯ ಶಿವಪುರ ಕಾಲನಿಯ ಬೃಹದಾಕಾರದ ಶಿವನ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಯುವಕ- ಯುವತಿಯರು ಶಿವನ ಮೂರ್ತಿಯ ದರ್ಶನ ಪಡೆದರು.ಸರದಿಯಲ್ಲಿ ನಿಂತು ದರ್ಶನ
ಉಣಕಲ್ ಕ್ರಾಸ್‌ನಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ, ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಹಳೇ ಹುಬ್ಬಳ್ಳಿ ವೀರಭದ್ರೇಶ್ವರ ದೇವಸ್ಥಾನ, ಸ್ಟೇಷನ್ ರಸ್ತೆಯ ಈಶ್ವರ ದೇವಸ್ಥಾನ, ಹಳೆಯ ಕೋರ್ಟ್ ವೃತ್ತದ ಸಾಯಿ ಮಂದಿರ, ಕೇಶ್ವಾಪುರದ ಪಾರಸ್ವಾಡಿ ಕಾಶಿ ವಿಶ್ವನಾಥ ದೇವಸ್ಥಾನ, ಗೋಕುಲ ರಸ್ತೆಯಲ್ಲಿರುವ ರಾಜಧಾನಿ ಕಾಲನಿಯ ಗಣೇಶ ಮತ್ತು ಈಶ್ವರ ದೇವಸ್ಥಾನ ಸೇರಿದಂತೆ ವಿವಿಧೆಡೆ ವಿಶೇಷ ಅಲಂಕಾರ ಪೂಜೆ, ರುದ್ರಾಭಿಷೇಕ ಹಾಗೂ ಮಹಾ ಮಂಗಳಾರತಿ ನಡೆಯಿತು.ಸದ್ಭಾವನಾ ಯಾತ್ರೆ
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ಸದ್ಭಾವನಾ ಶಾಂತಿಯಾತ್ರೆ ಸಂಭ್ರಮದಿಂದ ನೆರವೇರಿತು. ಬಂಕಾಪುರ ಚೌಕ್ ಬಳಿಯ ಆಶ್ರಮದಿಂದ ಆರಂಭವಾದ ಸದ್ಭಾವನಾ ಯಾತ್ರೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಶಿವಲಿಂಗಗಳಿಂದ ಅಲಂಕೃತಗೊಂಡ ವಾಹನ, ಶಿವ ಸಂದೇಶ ಸಾರುವ ಘೋಷಣೆಗಳು, ಸ್ತಬ್ದಚಿತ್ರಗಳು ವಿಶೇಷ ಗಮನ ಸೆಳೆದವು.ಸಿದ್ಧಾರೂಢರ ಮಠದಲ್ಲೂ ಸಂಭ್ರಮಭಕ್ತರ ಪ್ರಮುಖ ಶ್ರದ್ಧಾಕೇಂದ್ರವಾಗಿರುವ ಇಲ್ಲಿನ ಸಿದ್ಧಾರೂಢರ ಮಠದಲ್ಲೂ ಬುಧವಾರ ಶಿವರಾತ್ರಿ ಸಂಭ್ರಮ ಮನೆ ಮಾಡಿತು. ಬುಧವಾರ ಬೆಳಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಆರೂಢರ ಗದ್ದುಗೆಗಳ ದರ್ಶನ ಪಡೆದರು. ಶ್ರೀಮಠದ ಆವರಣದಲ್ಲಿ ರಾತ್ರಿಯಿಡೀ ಜಾಗರಣೆ ನಡೆಯಿತು. ಸಾವಿರಾರು ಭಕ್ತರು ರಾತ್ರಿಯಿಡೀ ಶಿವನಾಮ ಸ್ಮರಣೆ, ಭಜನೆಯಲ್ಲಿ ಪಾಲ್ಗೊಳ್ಳುವ ಮೂಲಕ ಭಕ್ತಿ ಸಮರ್ಪಿಸಿದರು.ಕಾಶಿ ವಿಶ್ವನಾಥನ ಮಾದರಿ ಶಿವಲಿಂಗ
ಇಲ್ಲಿನ ದೇಶಪಾಂಡೆ ನಗರದ ಜಿಮಖಾನಾ ಮೈದಾನದಲ್ಲಿ ಕ್ಷಮತಾ ಸೇವಾ ಸಂಸ್ಥೆ ನೇತೃತ್ವದಲ್ಲಿ ಬುಧವಾರ ಕಾಶಿ ವಿಶ್ವನಾಥ ಮಂದಿರದ ಮಾದರಿಯಲ್ಲಿ ಶ್ರೀ ವಿಶ್ವನಾಥನ ಶಿವಲಿಂಗದ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿತ್ತು.ಸಾವಿರಾರು ಭಕ್ತರು ಆಗಮಿಸಿ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಬೆಳಗ್ಗೆ ಮಹಾಪೂಜೆ, ರುದ್ರಾಭಿಷೇಕ ಹಾಗೂ ಮುಂಡಗೋಡ ಹಿರೇಮಠದ ಪಂ. ರುದ್ರಮುನಿ ಶ್ರೀಗಳ ಸಾನ್ನಿಧ್ಯದಲ್ಲಿ ವಿವಿಧ ಪೂಜಾ ಕಾರ್ಯಗಳು ನಡೆದವು. ಭಕ್ತರಿಗೆ ಪಂಚಮುಖಿ ರುದ್ರಾಕ್ಷಿ ವಿತರಣೆ ಹಾಗೂ ಅಹೋರಾತ್ರಿ ಪ್ರಸಾದ ವಿತರಣೆಯ ವ್ಯವಸ್ಥೆ ಮಾಡಲಾಯಿತು.
ಸಂಜೆ ಸುಜಾತಾ ಗುರವ್ ಅವರಿಂದ ಮರಾಠಿ ಅಭಂಗ ವಚನಗೀತೆ , ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಹುಬ್ಬಳ್ಳಿಯ ಮಯೂರ ನೃತ್ಯ ಅಕಾಡೆಮಿ ಅವರಿಂದ ಶಿವತಾಂಡವ ನೃತ್ಯ ಕಾರ್ಯಕ್ರಮ, ಬ್ಯಾಂಡ್ ಕಲ್ಕಿ ತಂಡದಿಂದ ಶಿವಾರಾಧನೆ, ಖ್ಯಾತ ಹಿನ್ನೆಲೆ ಗಾಯಕ ಚೇತನ ನಾಯಕ ಹಾಗೂ ಸಿಂಚನಾ ದೀಕ್ಷಿತ್ ಹಾಗೂ ತಂಡದಿಂದ ಶಿವನಾಮ ಸಂಗೀತ ರಸ ಸಂಜೆ ನಡೆಯಿತು. ಬೆಳಗ್ಗೆ ನಡೆದ ಪೂಜಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪಾಲ್ಗೊಂಡು ಪೂಜೆ ಸಲ್ಲಿಸಿದರು. ಈ ವೇಳೆ ಶಾಸಕ ಮಹೇಶ ಟೆಂಗಿನಕಾಯಿ, ಪಾಲಿಕೆ ಮೇಯರ್ ರಾಮಪ್ಪ ಬಡಿಗೇರ, ಪಾಲಿಕೆ ಸದಸ್ಯ ವೀರಣ್ಣ ಸವಡಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.