ರವಿ ಮೇಗಳಮನಿಕನ್ನಡಪ್ರಭ ವಾರ್ತೆ ಹಿರೇಕೆರೂರುಪಟ್ಟಣದ ಪೊಲೀಸ್ ಠಾಣೆ ಪಕ್ಕದ ದುರ್ಗಾದೇವಿ ದೇವಸ್ಥಾನಕ್ಕೆ ತೆರಳುವ ಮಾರ್ಗದ ಸೇತುವೆಯ ಒಂದು ಬದಿಯ ತಡೆಗೋಡೆ ಒಡೆದಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.ಪಟ್ಟಣದ ಇತಿಹಾಸ ಪ್ರಸಿದ್ಧಿ ಪಡೆದ ದುರ್ಗಾದೇವಿ ಕೆರೆ ತಾಲೂಕಿನಲ್ಲಿ ಇದು ಅತಿ (ಹಿರೇಕೆರೆ) ದೊಡ್ಡದಾಗಿದ್ದು, ಇದರಿಂದ ಹಿರೇಕೆರೂರ ಎಂಬ ನಾಮ ಈ ಊರಿಗೆ ಬಂದಿದೆ. ಈ ಕೆರೆಗೆ ಮಳೆಗಾಲದಲ್ಲಿ ಸುತ್ತಮುತ್ತಲಿನ ಶಿಕಾರಿಪುರ ತಾಲೂಕಿನ ತಡಸನಹಳ್ಳಿ, ಕಡೇನಂದಿಹಳ್ಳಿ, ತಾಲೂಕಿನ ಹೊಸೂರು, ಹೊಲಬಿಕೊಂಡ, ಕಾಲ್ವಿಹಳ್ಳಿ ಹೀಗೆ ಹಲವಾರು ಕೆರೆಗಳು ಭರ್ತಿಯಾಗಿ ಕೋಡಿ ಹರಿದು ಸುಣ್ಣದ ಕಾಲುವೆ ಮೂಲಕ ನೀರು ಹರಿದು ಬಂದರೆ ಮಾತ್ರ ದುರ್ಗಾದೇವಿ ಕೆರೆ ತುಂಬುತ್ತದೆ. ಒಮ್ಮೆ ತುಂಬಿದರೆ ೨ರಿಂದ 3 ವರ್ಷದವರೆಗೆ ಕೆರೆ ಬತ್ತುವುದಿಲ್ಲ. ಸುತ್ತಮುತ್ತಲಿನ ೨೮ಕ್ಕೂ ಹಚ್ಚಿನ ಹಳ್ಳಿಗಳಲ್ಲಿ ಅಂತರ್ಜಲ ವೃದ್ಧಿಯಾಗಿ ಕೊಳವೆಬಾವಿ, ಬಾವಿಗಳು ತುಂಬಿ ತುಳುಕುತ್ತವೆ. ಸಾವಿರಾರು ಎಕರೆ ಜಮೀನುಗಳಿಗೆ ನೀರು ಉಣಿಸುತ್ತದೆ.
ಇಂತಹ ಕೆರೆಗೆ ನೀರು ಹರಿದು ಹೋಗುವ ಸುಣ್ಣದ ಕಾಲುವೆಯಲ್ಲಿ ಪ್ರತಿವರ್ಷ ಗಿಡಗಂಟಿಗಳು ಬೆಳೆಯುತ್ತವೆ ಅಲ್ಲದೆ ಪಟ್ಟಣದ ತ್ಯಾಜ್ಯ ಸೇರ್ಪಡೆಯಾಗುತ್ತದೆ. ಮಳೆಗಾಲದಲ್ಲಿ ಕಾಲುವೆಯಲ್ಲಿ ನೀರು ಹರಿದು ಹೋಗಲು ತೊಂದರೆಯಾಗುತ್ತದೆ. ಇದರಿಂದ ಪದೇ ಪದೇ ಈ ಸೇತುವೆಯನ್ನು ಒಡೆದು ಹಾಕುತ್ತಿದ್ದು, ಇದಕ್ಕೆ ಪರ್ಯಾಯ ಮಾರ್ಗ ಹುಡುಕುತ್ತಿಲ್ಲ. ೨೦೧೪-೧೫ರಲ್ಲಿ ೨.೮೦ ಕೋಟಿ ರು. ಅನುದಾನದಲ್ಲಿ ೧.೬ ಕಿಮೀ ಉದ್ದದವರೆಗಿನ ಕಾಲುವೆಯನ್ನು ಕಾಂಕ್ರೀಟ್‌ಕರಣಗೊಳಿಸಲಾಗಿದ್ದು, ಆ ಸಮಯದಲ್ಲಿ ದುರ್ಗಾದೇವಿ ದೇವಸ್ಥಾನ, ತಾಲೂಕು ಕ್ರೀಡಾಂಗಣ, ಸರ್ಕಾರಿ ಪ್ರೌಢಶಾಲೆ, ಪಿಯುಸಿ ಕಾಲೇಜು ಹಾಗೂ ಸೋಮನಹಳ್ಳಿ ಮೂಲಕ ನೂಲಗೇರಿ ಸೇರಿದಂತೆ ಗ್ರಾಮಗಳಿಗೆ ಹೋಗಲು ಮತ್ತು ಭಕ್ತಾಧಿಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಮಿನಿವಿಧಾನಸೌದಧ ಪಕ್ಕದಲ್ಲಿ ಕಾಲುವೆಗೆ ಅಡ್ಡದಾಗಿ ಸೇತುವೆ ನಿರ್ಮಿಸಲಾಗಿದೆ.ಇದು ನಿರ್ಮಾಣ ಆದಾಗಿನಿಂದಲೂ ಕಾಲುವೆಯಲ್ಲಿ ತ್ಯಾಜ್ಯ, ಗಿಡಗಂಟಿಗಳು ಹರಿದು ಬಂದು ಈ ಸೇತುವೆಯಲ್ಲಿ ನೀರು ಹರಿಯದಂತೆ ಅಡ್ಡದಾಗಿ ನಿಲ್ಲುವುದರಿಂದ, ಇದನ್ನು ಇಲ್ಲಿಯವರೆಗೆ ಮೂರು ಬಾರಿ ಒಡೆದು ಹಾಕಿ ಮತ್ತೆ ರಿಪೇರಿಗೊಳಿಸುತ್ತಾ ಬಂದಿದ್ದಾರೆ. ಈಗ ಹಾಗೆ ಬಿಡಲಾಗಿದೆ. ಇದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ, ಇದು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರುತ್ತದೆ ಎಂದು ಸಣ್ಣ ನೀರಾವರಿ ಇಲಾಖೆಯವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ನೀವೇ ಒಡೆದು ಹಾಕಿದ್ದೀರಿ ಸರಿಪಡಿಸಿಕೊಳ್ಳಿರಿ ಎಂದು ಸಬೂಬು ಹೇಳುತ್ತಿದ್ದಾರೆ. ಇತ್ತ ಪಪಂ, ಈ ಕಾಲುವೆ ನಮಗೆ ಸಂಬಂಧಿಸಿದ್ದಲ್ಲ ನಾವೇಕೆ ಸರಿಪಡಿಸಬೇಕು ಎಂದು ಹಠ ಮಾಡುತ್ತಿದ್ದಾರೆ. ಈ ಸೇತುವೆಯ ಬಳಿ ತಿರುವು ಇದ್ದು, ಅಕ್ಕಪಕ್ಕದಲ್ಲಿ ಸರ್ಕಾರಿ ಸೇರಿದಂತೆ ಖಾಸಗಿ ಶಾಲಾ, ಕಾಲೇಜುಗಳು, ದೇವಸ್ಥಾನ, ಹಳ್ಳಿಗಳಿಗೆ ತೆರಳಲು ಇಲ್ಲಿ ನಿತ್ಯ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಓಡಾಡುತ್ತಾರೆ. ನೂರಾರು ವಾಹನಗಳು ಸಂಚರಿಸುತ್ತವೆ. ಸೇತುವೆ ಮಾರ್ಗ ಅತಿ ಚಿಕ್ಕದಾಗಿದ್ದು, ತೀವ್ರ ತಿರುವಿನಿಂದ ಕೂಡಿದೆ. ಸ್ವಲ್ಪ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಆದ್ದರಿಂದ ಒಡೆದ ಸೇತುವೆ ಸರಿಪಡಿಸಬೇಕೆಂಬುದು ಸಾರ್ವಜನಿಕರ, ವಿದ್ಯಾರ್ಥಿಗಳ ಒತ್ತಾಸೆಯಾಗಿದೆ.ಕಾಲುವೆಯಲ್ಲಿ ಎಲ್ಲ ಕೆರೆಗಳ ತ್ಯಾಜ್ಯ, ಗಿಡಗಂಟಿಗಳು ಹರಿದು ಬಂದು ನೀರು ಹರಿಯಲು ತೊಂದರೆಯಾಗಿದ್ದರಿಂದ ಜೆಸಿಬಿ ಯಂತ್ರದಿಂದ ಕಸ, ಗಿಡಗಂಟಿಗಳನ್ನು ತೆಗೆದು ಹಾಕುವ ಮೂಲಕ ನೀರು ಸರಾಗವಾಗಿ ಹರಿಯುವಂತೆ ಮಳೆಗಾಲ ಬರುವ ಮುನ್ನವೆ ಕಾಲುವೆಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ಈಗಾಗಲೇ ಸಣ್ಣನೀರಾವರಿ ಇಲಾಖೆಯವರು ಪ್ರಾರಂಭಿಸಿದ್ದಾರೆ.ಅತಿವೃಷ್ಟಿಯಾದಾಗ ಒಮ್ಮೆ ಇಲ್ಲಿ ಪದೇ, ಪದೇ ಕಸ, ಗಿಡಗಂಟಿಗಳು ಸಂಗ್ರಹಗೊಂಡು ನೀರು ಅಕ್ಕಪಕ್ಕದ ಮನೆಗಳಿಗೆ ನುಗ್ಗುವ ಭೀತಿ ಎದುರಾಗುತ್ತದೆ. ಆ ಸಮಯದಲ್ಲಿ ನೀರು ಸರಾಗವಾಗಿ ಸಾಗಲು ಅನಿವಾರ್ಯವಾಗಿ ಒಂದು ಬದಿಯ ತಡೆಗೋಡೆಯನ್ನು ಒಡೆಯಬೇಕಾಗುತ್ತದೆ. ಕೂಡಲೆ ಸಣ್ಣನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಇದನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು ಹಿರೇಕೆರೂರು ಪಪಂ ಮುಖ್ಯಾಧಿಕಾರಿ ಟಿ.ಎಮ್. ಯಶೋದಾ ಹೇಳಿದರು.