ಮಂಡ್ಯ ನಗರಸಭೆಯಿಂದ ಫುಟ್‌ಪಾತ್‌ ಒತ್ತುವರಿ ತೆರವು

KannadaprabhaNewsNetwork |  
Published : Jul 19, 2026, 02:30 AM IST
18ಕೆಎಂಎನ್‌ಡಿ-10, 11ಮಂಡ್ಯ ನಗರದೊಳಗಿನ ಹೆದ್ದಾರಿ ಅಕ್ಕ-ಪಕ್ಕದ ಫುಟ್‌ಪಾತ್‌ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಗರಸಭೆ ಅಧಿಕಾರಿಗಳು ನಡೆಸಿದರು. | Kannada Prabha

ಸಾರಾಂಶ

ಮಂಡ್ಯ ನಗರಸಭೆ ವತಿಯಿಂದ ಶನಿವಾರ ಬೆಳಗ್ಗೆಯಿಂದಲೇ ಫುಟ್‌ಪಾತ್‌ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವ ಮೂಲಕ ಅಧಿಕಾರಿಗಳು ಸಂಚಲನ ಸೃಷ್ಟಿಸಿದರು. ಫುಟ್‌ಪಾತ್‌ ಪಾದಚಾರಿಗಳಿಗೆ ಮೀಸಲಾಗಿರಬೇಕೆಂಬ ಸುಪ್ರೀಂ ಕೋರ್ಟ್‌ ಆದೇಶದನ್ವಯ ಒತ್ತುವರಿ ತೆರವು ಕಾರ್ಯಾಚರಣೆಗೆ ಅಧಿಕಾರಿಗಳು ಮುಂದಾಗಿದ್ದು, ಸೋಮವಾರ ಒತ್ತುವರಿ ತೆರವು ಮುಂದುವರೆಯಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರಸಭೆ ವತಿಯಿಂದ ಶನಿವಾರ ಬೆಳಗ್ಗೆಯಿಂದಲೇ ಫುಟ್‌ಪಾತ್‌ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವ ಮೂಲಕ ಅಧಿಕಾರಿಗಳು ಸಂಚಲನ ಸೃಷ್ಟಿಸಿದರು. ಫುಟ್‌ಪಾತ್‌ ಪಾದಚಾರಿಗಳಿಗೆ ಮೀಸಲಾಗಿರಬೇಕೆಂಬ ಸುಪ್ರೀಂ ಕೋರ್ಟ್‌ ಆದೇಶದನ್ವಯ ಒತ್ತುವರಿ ತೆರವು ಕಾರ್ಯಾಚರಣೆಗೆ ಅಧಿಕಾರಿಗಳು ಮುಂದಾಗಿದ್ದು, ಸೋಮವಾರ ಒತ್ತುವರಿ ತೆರವು ಮುಂದುವರೆಯಲಿದೆ.

ಶನಿವಾರ ನಗರದ ಅಗ್ನಿಶಾಮಕ ಠಾಣೆಯಿಂದ ಎಸ್‌.ಡಿ.ಜಯರಾಂ ವೃತ್ತ (ನಂದಾ ವೃತ್ತ)ದವರೆಗೆ ಫುಟ್‌ಪಾತ್‌ ಮೇಲಿನ ಅಂಗಡಿಗಳು, ಅಕ್ರಮವಾಗಿ ನಿರ್ಮಿಸಿದ್ದ ಕಾಂಪೌಂಡ್‌, ಕಬ್ಬಿಣದ ನಾಮಫಲಕಗಳು, ಅಂಗಡಿಯ ಮುಂಚೂಣಿಗಳನ್ನು ಕ್ರೇನ್‌ ಮತ್ತು ಜೆಸಿಬಿ ಸಹಾಯದಿಂದ ತೆರವುಗೊಳಿಸಿದರು.

ನಗರಸಭೆ ಆಯುಕ್ತೆ ಯು.ಪಿ.ಪಂಪಾಶ್ರೀ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಈ ಭಾಗದಲ್ಲಿದ್ದ ಸುಮಾರು 10 ಅಂಗಡಿಗಳು, ತಳ್ಳುವ ಗಾಡಿಯ ವ್ಯಾಪಾರಿಗಳನ್ನು ತೆರವುಗೊಳಿಸಿದರು. ಸುಪ್ರೀಂಕೋರ್ಟ್‌ ಆದೇಶದಂತೆ ಬೆಂಗಳೂರು ಸೇರಿದಂತೆ ಇತೆರೆಡೆಗಳಲ್ಲೂ ಫುಟ್‌ಪಾತ್‌ ಒತ್ತುವರಿ ತೆರವು ನಡೆಸಲಾಗುತ್ತಿದೆ. ಅದೇ ರೀತಿ ಮಂಡ್ಯ ನಗರದಲ್ಲೂ ಪಾದಚಾರಿಗಳಿಗೆ ಅನಾನುಕೂಲವಾಗದಂತೆ ಅವರು ಓಡಾಡುವ ರಸ್ತೆಯನ್ನು ಮುಕ್ತವಾಗಿರಿಸಲಾಗುತ್ತದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದರು.

ಫುಟ್‌ಪಾತ್‌ ಒತ್ತುವರಿ ವೇಳೆ ಕೆಲವರು ಅಧಿಕಾರಿಗಳ ನಡೆ ವಿರುದ್ಧ ಅಸಮಾಧಾನ, ಬೇಸರ ವ್ಯಕ್ತಪಡಿಸಿದರಾದರೂ ನ್ಯಾಯಾಲಯದ ಆದೇಶ ಎಂದು ಹೇಳಿದ ಮೇಲೆ ಸುಮ್ಮನಾದರು. ಇಡೀ ದಿನದ ಕಾರ್ಯಾಚರಣೆ ವೇಳೆ ಎಲ್ಲಿಯೂ ಘರ್ಷಣೆಗಳಾಗಲೀ, ಮಾತಿನ ಚಕಮಕಿಗಳಾಗಲೀ, ತೀವ್ರ ವಿರೋಧಗಳಾಗಲೀ ವ್ಯಕ್ತವಾಗಲಿಲ್ಲ. ಸಿಐಟಿಯು ಸಂಘಟನೆಯ ನೇತೃತ್ದಲ್ಲಿ ಬೀದಿ ಬದಿ ವ್ಯಾಪಾರಿಗಳು ಕೆಲ ಕಾಲ ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿದರು.

ನಮಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವವರೆಗೆ ತೆರವುಗೊಳಿಸದಂತೆ ವ್ಯಾಪಾರಿಗಳು ಅಧಿಕಾರಿಗಳನ್ನು ಒತ್ತಾಯಿಸಿದರು. ಶಾಸಕ ಪಿ.ರವಿಕುಮಾರ್‌ ಹಾಗೂ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗುವುದು ಎಂದು ಸಂಘಟನೆಯ ಮುಖಂಡರು ತಿಳಿಸಿದ್ದಾರೆ.

ಸೋಮವಾರ ಸವಾಲು

ಸೋಮವಾರ ಮತ್ತೆ ಫುಟ್‌ಪಾತ್‌ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳಿಗೆ ಸವಾಲು ಇರುವುದು ಇಲ್ಲೇ.ಎಸ್‌.ಡಿ.ಜಯರಾಂ ವೃತ್ತದಿಂದ ಮುಂದಕ್ಕೆ ಫುಟ್‌ಪಾತ್‌ ತೆರವು ಕಾರ್ಯಾಚರಣೆ ಅಷ್ಟು ಸುಲಭವಾಗಿಲ್ಲ. ಈ ಭಾಗದ ಹೆದ್ದಾರಿಯ ಎಡಬದಿಗಿರುವ ಫುಟ್‌ಪಾತ್‌ ಸಂಪೂರ್ಣ ಒತ್ತುವರಿಯಾಗಿದೆ. ಅಲ್ಲಿರುವವರನ್ನು ಹೇಗೆ ತೆರವುಗೊಳಿಸುತ್ತಾರೆ ಎನ್ನುವುದು ಇದೀಗ ಕುತೂಹಲದ ಸಂಗತಿಯಾಗಿದೆ.

ಸುಪ್ರೀಂಕೋರ್ಟ್‌ ಆದೇಶ ಕಟ್ಟುನಿಟ್ಟಾಗಿ ಪಾಲಿಸುವುದಾದರೆ ಇಲ್ಲಿರುವ ಫುಟ್‌ಪಾತ್‌ ಒತ್ತುವರಿದಾರರನ್ನು ತೆರವುಗೊಳಿಸಲೇಬೇಕಿದೆ. ಪೊಲೀಸ್‌ ರಕ್ಷಣೆಯಲ್ಲಿ ಫುಟ್‌ಪಾತ್‌ ಒತ್ತುವರಿಯನ್ನು ತೆರವುಗೊಳಿಸಲಾಗುತ್ತಿದೆ.

ಪರಿಸರ ಅಭಿಯಂತರ ರುದ್ರೇಗೌಡ, ಕಿರಿಯ ಅಭಿಯಂತರರಾದ ಮಹೇಶ್‌, ಮುಖೇಶ್‌, ಗೌತಮ್‌, ಹಿರಿಯ ಆರೋಗ್ಯ ನಿರೀಕ್ಷಕರಾದ ಅಶ್ವಥ್‌, ಮಂಜೇಶ್‌, ಶ್ರೀನಿವಾಸ್‌, ಕಂದಾಯ ನಿರೀಕ್ಷಕ ಸಂಜಯ್‌ ಇತರರಿದ್ದರು.ಸುಪ್ರೀಂಕೋರ್ಟ್‌ ಆದೇಶದಂತೆ ಫುಟ್‌ಪಾತ್‌ ಒತ್ತುವರಿ ಮಾಡಲಾಗುತ್ತಿದೆ. ಶನಿವಾರ ಅಗ್ನಿಶಾಮಕ ದಳದ ಕಚೇರಿಯಿಂದ ನಂದಾ ವೃತ್ತದವರೆಗೆ ಫುಟ್‌ಪಾತ್‌ ತೆರವುಗೊಳಿಸಲಾಗಿದೆ. ಸೋಮವಾರ ಅಲ್ಲಿಂದ ಮುಂದಕ್ಕೆ ತೆರವುಗೊಳಿಸಲಾಗುವುದು. ಫುಟ್‌ಪಾತ್‌ ಪಾದಚಾರಿಗಳ ಓಡಾಟಕ್ಕೆ ಮೀಸಲಿರಿಸಬೇಕು. ಒತ್ತುವರಿಗೆ ಅಡ್ಡಿಪಡಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ.

- ಯು.ಪಿ.ಪಂಪಾಶ್ರೀ, ಆಯುಕ್ತರು, ನಗರಸಭೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭತ್ತದ ಬಿತ್ತನೆಯಿಂದ ಹಿಡಿದು ಕಟಾವಿನವರೆಗೂ ಯಂತ್ರದ ಮೂಲಕ ಕೃಷಿ ಅನುಷ್ಠಾನ: ರವಿ
ಜೆಜೆಎಂ ಯೋಜನೆ: ಯಾವುದೇ ಮನೆಗೂ ಸಮರ್ಪಕ ನೀರು ಬಂದಿಲ್ಲ