ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ಶನಿವಾರ ನಗರದ ಗಾಂಧಿ ಭವನದಲ್ಲಿ ನಡೆದ ರೈತರ ಜೀವನಾಡಿ ಕೆಆರ್‌ಎಸ್ ಜಲಾಶಯ ರಕ್ಷಿಸಿ ಮಂಡ್ಯ ಜಿಲ್ಲೆಯ ರೈತರ ಬದುಕನ್ನು ಉಳಿಸಿ ಎಂಬ ಘೋಷವಾಕ್ಯದೊಂದಿಗೆ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ರೈತ ಮುಖಂಡರು, ಪ್ರಗತಿಪರ ಚಿಂತಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಈ ಯೋಜನೆ ಕೃಷಿ ಕ್ಷೇತ್ರಕ್ಕೆ ಮಾರಕವಾಗಿ ಪರಿಣಮಿಸಲಿದ್ದು, ಇದನ್ನು ಕೈಬಿಡುವಂತೆ ಒತ್ತಾಯಿಸಿದರು.
ಆರನೇ ಹಂತದ ಕುಡಿಯುವ ನೀರಿನ ಯೋಜನೆಯಿಂದ ಕೃಷಿ ಕ್ಷೇತ್ರದ ಮೇಲಾಗುವ ಪರಿಣಾಮಗಳು, ರೈತರು ಎದುರಿಸಬೇಕಾದ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಬೆಂಗಳೂರು ನಗರಕ್ಕೆ ಹೆಚ್ಚುವರಿ ನೀರನ್ನು ಪೂರೈಸಲು ಮುಂದಾಗಿರುವ ಸರ್ಕಾರ ಸುಮಾರು ೬,೯೩೯ ಕೋಟಿ ರು. ವೆಚ್ಚದ ಬೃಹತ್ ಯೋಜನೆಗೆ ಅನುಮೋದನೆ ನೀಡಿದೆ. ಇದರಿಂದಾಗಿ ಕಾವೇರಿ ಜಲಾನಯನ ವ್ಯಾಪ್ತಿಯ ಕೃಷಿ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಜಿಲ್ಲೆಯ ಮಳವಳ್ಳಿ, ಮದ್ದೂರು ಕೊನೆ ಭಾಗದ ರೈತರಿಗೆ ಮುಂದಿನ ದಿನಗಳಲ್ಲಿ ನೀರು ಸಿಗದಿರುವ ಪರಿಸ್ಥಿತಿ ಎದುರಾಗಲಿದೆ. ಈಗಲೇ ಕೊನೆ ಭಾಗದ ರೈತರಿಗೆ ನೀರೊದಗಿಸಲು ಸಾಧ್ಯವಾಗದ ಪರಿಸ್ಥಿತಿ ನೆಲೆಸಿದೆ. ಈ ಯೋಜನೆಯಿಂದ ಮತ್ತಷ್ಟು ಸಮಸ್ಯೆ ಎದುರಾಗುವುದು ನಿಶ್ಚಿತವಾಗಲಿದೆ ಎಂದು ದೃಢವಾಗಿ ಹೇಳಿದರು.
ಈ ಯೋಜನೆಯಿಂದಾಗಿ ಕೃಷಿಯನ್ನೇ ನಂಬಿರುವ ರೈತರ ಬದುಕು ನಾಶ ಮಾಡಲು ಸರ್ಕಾರ ಹುನ್ನಾರ ನಡೆಸುತ್ತಿದೆ. ರೈತರಿಗೆ ವಿಷ ಕೊಡುವ ಕೆಲಸ ಮಾಡಲು ಸರ್ಕಾರ ಹೊರಟಿದೆ. ಬೆಂಗಳೂರಿನ ಜನರ ಕುಡಿಯುವ ನೀರಿಗೆ ಕೆಆರ್‌ಎಸ್ ಜಲಾಶಯವನ್ನು ಆಶ್ರಯಿಸು ಬದಲು ಪರ್ಯಾಯ ಮಾರ್ಗ ಹುಡುಕಿಕೊಳ್ಳುವಂತೆ ಒತ್ತಾಯಿಸಿದರು.
ಬೆಂಗಳೂರಿನಲ್ಲೇ ಮಳೆ ನೀರನ್ನು ಸಂಗ್ರಹ ಮಾಡಿಕೊಳ್ಳಲಿ. ಅದು ಬಿಟ್ಟು ಕೆಆರ್‌ಎಸ್‌ಗೆ ಕೈ ಹಾಕಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೆ.ಆರ್.ಎಸ್.ನಿಂದ ಬೆಂಗಳೂರು ೬ನೇ ಹಂತ ಹಾಗೂ ಮೈಸೂರಿನ ಹಳೇ ಹುಂಡುವಾಡಿಗೆ ನೀರು ತೆಗೆದುಕೊಂಡು ಹೋಗುವ ಯೋಜನೆ ರೂಪಿಸಿರುವ ಸರ್ಕಾರದ ನಿಲುವನ್ನು ಸಭೆ ವಿರೋಸುತ್ತದೆ.
ಮಂಡ್ಯ ಜಿಲ್ಲೆಯಲ್ಲಿ ಚುನಾಯಿತ ಹಾಲಿ ಮತ್ತು ಮಾಜಿ ಜನಪ್ರತಿನಿಗಳು ೬ನೇ ಹಂತದ ನೀರು ತೆಗೆದುಕೊಂಡು ಹೋಗುವ ಯೋಜನೆಯನ್ನು ಕೈಬಿಡಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಸರ್ಕಾರ ಈ ಕೂಡಲೇ ಈ ಒತ್ತಾಯಗಳಿಗೆ ಸ್ಪಂಸದಿದ್ದರೆ ಕೆ.ಆರ್.ಎಸ್. ಕಟ್ಟೇರಿ ಬಳಿ ತೀವ್ರತರದ ಹೋರಾಟವನ್ನು ರೂಪಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.