ಗಾಂಧಿ ಪುತ್ಥಳಿ ತೆರವು: ಜೆಡಿಎಸ್ ತೀವ್ರ ವಿರೋಧ

KannadaprabhaNewsNetwork |  
Published : Sep 12, 2025, 01:00 AM IST
ಮಾಗಡಿ ಪಟ್ಟಣದ ಎನ್ಇಎಸ್ ಸರ್ಕಲ್ ಇದ್ದ ಗಾಂಧಿ ಪುತ್ಥಳಿ ತರೆವಿಗೆ ಜೆಡಿಎಸ್ ನಿಂದ ಪ್ರತಿಭಟನೆ ನಡೆಸಲಾಯಿತು.ವಿರೋಧ ನಡುವೆ ಗಾಂಧಿ ಪುತ್ಥಳಿ ತೆರವು  ಮಾಡುತ್ತಿರುವುದು.  | Kannada Prabha

ಸಾರಾಂಶ

ಮಾಗಡಿ: ಪಟ್ಟಣದ ಎನ್ಇಎಸ್ ಸರ್ಕಲ್ ಅಭಿವೃದ್ಧಿ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಗಾಂಧಿ ಪುತ್ಥಳಿ ತೆರವುಗೊಳಿಸಿದ್ದನ್ನು ಖಂಡಿಸಿ ಜೆಡಿಎಸ್ ಮುಖಂಡರು ಪ್ರತಿಭಟನೆ ನಡೆಸಿದರು.

ಮಾಗಡಿ: ಪಟ್ಟಣದ ಎನ್ಇಎಸ್ ಸರ್ಕಲ್ ಅಭಿವೃದ್ಧಿ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಗಾಂಧಿ ಪುತ್ಥಳಿ ತೆರವುಗೊಳಿಸಿದ್ದನ್ನು ಖಂಡಿಸಿ ಜೆಡಿಎಸ್ ಮುಖಂಡರು ಪ್ರತಿಭಟನೆ ನಡೆಸಿದರು.

2018ರಲ್ಲಿ ಮಾಜಿ ಶಾಸಕ ಎ.ಮಂಜುನಾಥ್ ಸ್ವಂತ ವೆಚ್ಚದಲ್ಲಿ ಪುತ್ಥಳಿ ನಿರ್ಮಿಸಿದ್ದರು. ಹಾಲಿ ಶಾಸಕ ಎಚ್.ಸಿ.ಬಾಲಕೃಷ್ಣ ಇದೀಗ ಒಂದೂವರೆ ಕೋಟಿ ವೆಚ್ಚದಲ್ಲಿ ಎನ್ಇಎಸ್ ವೃತ್ತದ ಅಭಿವೃದ್ಧಿ ಹಿನ್ನೆಲೆಯಲ್ಲಿ ಗಾಂಧಿ ಪುತ್ಥಳಿ ತೆರವು ಮಾಡುತ್ತಿದ್ದೇವೆ ಎಂದು ಹೇಳಿ, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಗುರುವಾರ ಎನ್ಇಎಸ್ ವೃತ್ತಕ್ಕೆ ತೆರಳುವ ವೇಳೆ ಜೆಡಿಎಸ್ ಪುರಸಭಾ ಸದಸ್ಯರು ಹಾಗೂ ಕಾರ್ಯಕರ್ತರು ವಿರೋಧಿಸಿದರು. ಮುಂದಿನ ತಿಂಗಳು ಗಾಂಧಿ ಜಯಂತಿ ಇರುವುದರಿಂದ ಯಾವುದೇ ಕಾರಣಕ್ಕೂ ಪುತ್ಥಳಿ ತೆರವು ಮಾಡಬಾರದು, ಸಾರ್ವಜನಿಕರ ಅಭಿಪ್ರಾಯ ಪಡೆದು ಪುತ್ಥಳಿ ತೆರವುಗೊಳಿಸಬೇಕು. ವೃತ್ತ ಅಭಿವೃದ್ಧಿ ಆದ ನಂತರ ಮತ್ತೆ ಇದೇ ಪುತ್ಥಳಿಯನ್ನೇ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಪುರಸಭೆ ಸದಸ್ಯ ಎಂ.ಎನ್.ಮಂಜು ಮಾತನಾಡಿ, ಮಾಜಿ ಶಾಸಕ ಎ.ಮಂಜುನಾಥ್ ಅವಧಿಯಲ್ಲಿ ಪ್ರತಿ ವರ್ಷವೂ ಗಾಂಧಿ ಜಯಂತಿ ಇಲ್ಲೇ ಆಚರಿಸುತ್ತಿದ್ದೆವು. ಈಗ ಶಾಸಕ ಬಾಲಕೃಷ್ಣ ತಾಲೂಕು ಕಚೇರಿಯನ್ನು ಎನ್ಇಎಸ್‌ ವೃತ್ತದ ಸಮೀಪವೇ ನಿರ್ಮಿಸುತ್ತಿರುವುದರಿಂದ ಇಲ್ಲಿ ಓಡಾಡುವ ಕಾಲೇಜು ವಿದ್ಯಾರ್ಥಿಗಳಿಗೆ ಜನಗಳಿಗೆ ಈ ಪುತ್ಥಳಿ ಕೆಳಗೆ ಎ.ಮಂಜುನಾಥ್ ಶಾಸಕರು ಎಂದು ಬರೆದಿರುವುದು ಅವರಿಗೆ ಸಹಿಸಲು ಆಗುತ್ತಿಲ್ಲ. ಈ ಕಾರಣಕ್ಕಾಗಿಯೇ ರಾಜಕಾರಣ ಮಾಡುತ್ತಿರುವ ಶಾಸಕ ಬಾಲಕೃಷ್ಣ ವೃತ್ತದ ಅಭಿವೃದ್ಧಿ ಹೆಸರಿನಲ್ಲಿ ಈ ಪುತ್ಥಳಿ ತೆರವುಗೊಳಿಸಿ ಅವರ ಹೆಸರು ಬರಲೆಂದು ಆರು ಅಡಿ ಎತ್ತರದ ದೊಡ್ಡ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ಮುಂದಾಗಿರುವುದು ಸರಿಯಲ್ಲ ಎಂದು ಆರೋಪಿಸಿದರು.

ಶಾಸಕ ಎಚ್.ಸಿ.ಬಾಲಕೃಷ್ಣ ₹35 ಲಕ್ಷ ತಮ್ಮ ಸ್ವಂತ ವೆಚ್ಚದಲ್ಲಿ ಆರು ಅಡಿ ಎತ್ತರದ ಗಾಂಧಿ ಪ್ರತಿಮೆ ನಿರ್ಮಾಣ ಮಾಡಲು ಈಗಾಗಲೇ ಅಯೋಧ್ಯೆ ಶ್ರೀರಾಮ ಪ್ರತಿಮೆ ನಿರ್ಮಾಣ ಮಾಡಿದ ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರಿಂದ ನಿರ್ಮಿಸುತ್ತಿದ್ದು, ಇದನ್ನು ಜೆಡಿಎಸ್‌ ವಿರೋಧಿಸುತ್ತದೆ. ಅಲ್ಲದೆ, ಈಗ ತೆರವು ಮಾಡಿದ ಗಾಂಧಿ ಪುತ್ಥಳಿಯನ್ನು ಸೂಕ್ತ ಜಾಗದಲ್ಲಿ ಪ್ರತಿಷ್ಠಾಪಿಸುತ್ತೇವೆ ಎಂದು ಪುರಸಭಾ ಅಧ್ಯಕ್ಷೆ ರಮ್ಯಾ ನರಸಿಂಹಮೂರ್ತಿ ತಿಳಿಸಿದ್ದಾರೆ ಎಂದರು.

ಏಕಾಏಕಿ ಪುತ್ಥಳಿ ತೆರವು ಮಾಡಲು ಪುರಸಭೆ ಅಧಿಕಾರಿಗಳು ಮುಂದಾಗಿದ್ದು, ಒಂದು ವರ್ಷ ಕಳೆದರೂ ಕೂಡ ರಸ್ತೆ ಅಭಿವೃದ್ಧಿ ಪೂರ್ಣ ಮಾಡಿಲ್ಲ. ಎನ್ಇಎಸ್ ಬಡಾವಣೆಯಲ್ಲಿ ಸಾಕಷ್ಟು ಸಮಸ್ಯೆಗಳಿದೆ. ಅದನ್ನು ಬಿಟ್ಟು ದ್ವೇಷದ ಹಿನ್ನೆಲೆಯಲ್ಲಿ ಪುತ್ಥಳಿ ತೆರವಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಮುಖಂಡರು ಅಧಿಕಾರಿಗಳು ಮತ್ತು ಪೊಲೀಸರ ವಿರುದ್ಧ ಪ್ರತಿಭಟನೆಗೆ ಮುಂದಾದರು. ಕಾಂಗ್ರೆಸ್ ಸದಸ್ಯರು ಹಾಗೂ ಮುಖಂಡರು ಜೆಡಿಎಸ್ ನವರು ಅಭಿವೃದ್ಧಿಗೆ ವಿರೋಧಿಸುತ್ತಿದ್ದಾರೆ ಎಂದು ಅಭಿವೃದ್ಧಿ ನೀಲನಕ್ಷೆ ಹಾಗೂ ಕಾಮಗಾರಿ ಪತ್ರಗಳನ್ನು ತೋರಿಸಲು ಮುಂದಾದಾಗ ಅಧಿಕಾರಿಗಳು ಮತ್ತು ಮುಖಂಡರ ನಡುವೆ ಮಾತಿನ ಸಮರ ಜೋರಾಗಿಯೇ ಸಾಗಿತು.

ಪೊಲೀಸ್ ಇನ್ಸ್‌ಪೆಕ್ಟರ್ ಗಿರಿರಾಜ್ ಪ್ರತಿಭಟನೆಯಲ್ಲಿ ತೊಡಗಿದ್ದ ಜೆಡಿಎಸ್ ಮುಖಂಡರ ಮನವೊಲಿಸಲು ಪ್ರಯತ್ನಿಸಿದರು. ಇದಕ್ಕೆ ವಿರೋಧ ಬಂದ ಹಿನ್ನೆಲೆಯಲ್ಲಿ ತಕ್ಷಣವೇ ಸಿಬ್ಬಂದಿಗೆ ಸೂಚಿಸಿ ಪ್ರತಿಭಟನಾ ನಿರತ ಜೆಡಿಎಸ್ ಮುಖಂಡರನ್ನು ಕೂಡಲೇ ಬಂಧಿಸಿ ತಕ್ಷಣವೇ ಪೊಲೀಸ್ ಠಾಣೆಗೆ ಕರೆದೊಯ್ದರು.

ಕಾಂಗ್ರೆಸ್ ಮುಖಂಡರಿಂದ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕ್ರೈನ್ ಹಾಗೂ ಜೆಸಿಬಿ ಯಂತ್ರದ ಸಹಾಯದಿಂದ ಗಾಂಧಿ ಪುತ್ಥಳಿ ತೆರವು ಮಾಡಿ ಆಟೋದಲ್ಲಿ ಪುರಸಭೆಗೆ ಕೊಂಡೊಯ್ಯಲಾಯಿತು.

ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರಾದ ಎಂ.ಎನ್.ಮಂಜು, ಕೆ.ವಿ.ಬಾಲು, ಮುಖಂಡರಾದ ಕೋಟಪ್ಪ, ರಂಗಣಿ, ವಿಜಯಕುಮಾರ್, ಪಂಚೆ ರಾಮಣ್ಣ, ಶಿವಕುಮಾರ್, ಕುಮಾರ್, ಕರಡಿ ನಾಗರಾಜು, ಬಾಲಕೃಷ್ಣ, ಶಹಬಾಸ್, ಶಿವರಾಮು, ರಮೇಶ್ ಇತರರು ಭಾಗವಹಿಸಿದ್ದರು.

(ಫೋಟೋ ಕ್ಯಾಫ್ಷನ್‌)

ಮಾಗಡಿ ಪಟ್ಟಣದ ಎನ್ಇಎಸ್ ವೃತ್ತದಲ್ಲಿದ್ದ ಗಾಂಧಿ ಪುತ್ಥಳಿ ತೆರವು ಖಂಡಿಸಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

(ಫೋಟೋ ಕ್ಯಾಫ್ಷನ್‌)

ಮಾಗಡಿಯ ಎನ್ಇಎಸ್ ವೃತ್ತದಲ್ಲಿದ್ದ ಗಾಂಧಿ ಪುತ್ಥಳಿಯನ್ನು ತೆರವುಗೊಳಿಸುತ್ತಿರುವುದು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ