ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಪಟ್ಟಣದ ವ್ಯಾಪ್ತಿಯ ಅಂಬೇಡ್ಕರ್ ನಗರದಲ್ಲಿ ನೂರಾರು ವರ್ಷದಿಂದ ವಾಸವಾಗಿದ್ದರೂ ಇನ್ನೂ ಹಕ್ಕುಪತ್ರ ನೀಡಿಲ್ಲ. ಸಂಬಂಧಪಟ್ಟವರು ಹಕ್ಕ ಪತ್ರ ನೀಡಬೇಕು ಎಂದು ಡಿಎಸ್‌ಎಸ್ ಮುಖಂಡರಾದ ಡಿ.ರಾಮು, ರಾಜೇಶ, ಮಂಜುನಾಥ್ ಒತ್ತಾಯಿಸಿದರು.ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಡಾ.ನೂರುಲ್ ಹುದಾ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಪಂಗಡ, ಪರಿಶಿಷ್ಟ ವರ್ಗಗಳ ಕುಂದುಕೊರತೆಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.
ಈ ಸಂದರ್ಭದಲ್ಲಿ ನರೇಗಾದ ಸಹಾಯಕ ನಿರ್ದೇಶಕ ಮನೀಷ್ ಮಾತನಾಡಿ, ಗ್ರಾಮ ಠಾಣಾ ಜಾಗಕ್ಕೆ ಯಾವುದೇ ಕಾರಣಕ್ಕೂ ಹಕ್ಕುಪತ್ರ ಕೊಡಲು ಬರುವುದಿಲ್ಲ. ಈ ಸ್ವತ್ತು ದಾಖಲಿಸಿಕೊಡಲು ಕೇಳಬಹುದು ಎಂದರು.ಜಿಲ್ಲಾ ಪರಿಶಿಷ್ಟಜಾತಿ, ವರ್ಗಗಳ ದೌರ್ಜನ್ಯ ಸಮಿತಿ ಸದಸ್ಯ ಎಂ.ಮಹೇಶ್ ಮಾತನಾಡಿ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಾಹಿತಿ ಪಡೆದು ನಿರ್ದೇಶನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು. ತಹಶೀಲ್ದಾರ್ ಮಾತನಾಡಿ, ಜಿಲ್ಲಾಧಿಕಾರಿಗಳಿಂದ ನಿರ್ದೇಶನ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮೆಣಸೂರು ಗ್ರಾಮ ಪಂಚಾಯಿತಿ ಸದಸ್ಯ ಅಣ್ಣಪ್ಪ ಮಾತನಾಡಿ, ತಾಲೂಕಿನ ರಾವೂರು ಗ್ರಾಮದಲ್ಲಿರುವ ಪರಿಶಿಷ್ಟಜಾತಿಗೆ ಸೇರಿದ ಶಿಳ್ಳೆಕ್ಯಾತ ಜನಾಂಗಕ್ಕೆ ಸ್ಮಶಾನವಿಲ್ಲದೆ ಭದ್ರಾ ಹಿನ್ನೀರಿನಲ್ಲಿ ತೆಪ್ಪದಲ್ಲಿ ತೆರಳಿ ನಡುಗಡ್ಡೆಯಲ್ಲಿ ಶವಸಂಸ್ಕಾರ ಮಾಡುವ ಸ್ಥಿತಿಯಿದೆ. ಹಿಂದೆ ಸ್ಮಶಾನಕ್ಕೆ ಮಂಜೂರಾದ ಜಾಗವನ್ನು ಈಗ ಪ್ರವಾಸೋದ್ಯಮ ನಿಗಮದವರಿಗೆ ನೀಡಲಾಗಿದೆ. ಪ್ರಸ್ತುತ ತಹಶೀಲ್ದಾರ್ ಅವರು 20 ಗುಂಟೆ ಜಾಗ ಗುರುತಿಸಿದ್ದಾರೆ. ಆದರೆ, ಇದಕ್ಕೂ ಕೆಲವರು ತಕಾರರು ತೆಗೆದಿದ್ದಾರೆ. ನಾವು ಕೃಷಿ ಉದ್ದೇಶ ಅಥವಾ ಇನ್ಯಾವುದೇ ಉದ್ದೇಶಕ್ಕೆ ಜಾಗ ಕೇಳುತ್ತಿಲ್ಲ. ಮೃತಪಟ್ಟವರ ಶವಸಂಸ್ಕಾರಕ್ಕೆ ಕೇಳುತ್ತಿರುವುದು. ಯಾವುದೇ ಒತ್ತಡಕ್ಕೆ ಮಣಿಯದೆ ಆ ಜಾಗವನ್ನು ಸ್ಮಶಾನಕ್ಕೆ ಮಂಜೂರು ಮಾಡಿಕೊಡಬೇಕು ಎಂದು ಮನವಿ ಮಾಡಿದರು.ತಹಸೀಲ್ದಾರ್ ನೂರುಲ್ ಹುದಾ ಮಾತನಾಡಿ, ರಾವೂರು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಆಲಿಸಲಾಗಿದೆ. 20 ಗುಂಟೆ ಜಾಗವನ್ನು ಪರಿಶಿಷ್ಟಪಂಗಡಕ್ಕೆ ಸೇರಿದ ಸ್ಮಶಾನಕ್ಕಾಗಿ ಎಂದು ಮೀಸಲಿರಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಿ ಮಂಜೂರಾತಿ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನರಿಗೆ ಬಹಳ ಹಿಂದಿನಿಂದಲೂ ದೌರ್ಜನ್ಯಗಳಾಗುತ್ತಿವೆ. ಸಭೆಯಲ್ಲಿ ಭಾಗವಹಿಸುವ ಮುಖಂಡರು ಪರಸ್ಪರ ಗೌರವಿಸುವುದನ್ನು ಕಲಿಯಬೇಕು. ಸಭೆಯ ಘನತೆಯನ್ನು ಎತ್ತಿಹಿಡಿಯಬೇಕು. ತಾಳ್ಮೆಯಿಂದ ವರ್ತಿಸಬೇಕು. ಯಾವ ವಿಷಯ ಪ್ರಸ್ತಾಪವಾಗಬೇಕು. ಯಾವುದು ಮುಖ್ಯ ವಿಷಯ ಎಂಬುದನ್ನು ಅರಿತುಕೊಳ್ಳಬೇಕು ಎಂದರು.ತಾಲೂಕಿನ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಬಹುತೇಕ ಅಂಬೇಡ್ಕರ್ ಭವನಗಳು ಸುಸಜ್ಜಿತವಾಗಿ ನಿರ್ಮಾಣವಾಗಿಲ್ಲ. ಕೆಲವು ಸಮುದಾಯ ಭವನಗಳ ಕಾಮಗಾರಿ ಅಪೂರ್ಣಗೊಂಡಿದೆ ಎಂದು ಪರಿಶಿಷ್ಟಜಾತಿ, ಪರಿಶಿಷ್ಟಪಂಗಡದ ಮುಖಂಡರು ಆರೋಪಿಸಿದರು. ಕರ್ಕೇಶ್ವರ ಗ್ರಾಮದಲ್ಲಿ ಹತ್ತು ವರ್ಷಗಳ ಹಿಂದೆ ಅಂಬೇಡ್ಕರ್ ಭವನ ನಿರ್ಮಾಣವಾಗಿದ್ದು ಕಾಮಗಾರಿ ಕಳಪೆಯಿಂದ ಕೂಡಿದ್ದು ಈವರೆಗೂ ಕಾಮಗಾರಿ ಪೂರ್ಣವಾಗಿಲ್ಲ ಎಂಬ ವಿಚಾರ ಪ್ರಸ್ತಾಪವಾಯಿತು. ಈ ನಡುವೆ ಮಾತನಾಡಿದ ಕೊಪ್ಪ ಎಪಿಎಂಸಿ ನಿರ್ದೇಶಕ ಎಚ್.ಎಂ.ಶಿವಣ್ಣ ಕರ್ಕೇಶ್ವರ ಗ್ರಾಮದ ಅಂಬೇಡ್ಕರ್ ಭವನವನ್ನು ತಳಪಾಯ ಹಾಕದೆ ನಿರ್ಮಿಸಲಾಗಿದೆ.ಈ ಬಗ್ಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿಲ್ಲ ಎಂದರು. ಬಹುತೇಕ ಅಂಬೇಡ್ಕರ್ ಭವನಗಳು ಸುಸಜ್ಜಿತವಾಗಿರದೆ ಸ್ವಸಹಾಯ ಸಂಘದ ಸಭೆಯ ನಡೆಸಲು, ಗಣಪತಿ ಕೂರಿಸಲು ಸೀಮಿತವಾಗಿದೆ ಎಂದು ವಾಲ್ಮೀಕಿ ಸಂಘದ ನಾಗರಾಜ್ ದೂರಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎ.ಕೆ.ಪಾಟೀಲ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ನರೇಗಾದ ಸಹಾಯಕ ನಿರ್ದೇಶಕ ಮನಿಷ್, ಎಡಿಎಲ್ ಆರ್ ಶ್ರೀಧರ್, ಸಮಾಜ ಕಲ್ಯಾಣ ಇಲಾಖೆಯ ನಿರಂಜನ್ ಇದ್ದರು.