ಕಾವೇರಿ ನದಿ ತೀರದ ಎರಡೂ ಬದಿ ಅಕ್ರಮ ಕಟ್ಟಡ ತೆರವುಗೊಳಿಸಿ: ನ್ಯಾ.ಬಿ.ವೀರಪ್ಪ

KannadaprabhaNewsNetwork |  
Published : May 28, 2025, 12:13 AM IST
27ಕೆಎಂಎನ್ ಡಿ20 | Kannada Prabha

ಸಾರಾಂಶ

ಕೆಲವರು ಕಾವೇರಿ ನದಿ ತೀರ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ರೆಸಾರ್ಟ್ ಸೇರಿದಂತೆ ಮೋಜು ಮಸ್ತಿ ತಾಣಗಳನ್ನಾಗಿ ನಿರ್ಮಿಸಿಕೊಂಡಿರುವ ಬಗ್ಗೆ ದೂರುಗಳು ಬಂದಿವೆ. ನದಿ ಒತ್ತುವರಿ ಮಾಡಿಕೊಂಡು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವವರ ವಿರುದ್ಧ ತ್ವರಿತವಾಗಿ ನೋಟಿಸ್ ಜಾರಿ ಮಾಡಿ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕಾವೇರಿ ನದಿ ತೀರ ಪ್ರದೇಶದ ಎರಡೂ ಬದಿಯ ಬಫರ್ ಝೋನ್ ಶೀಘ್ರ ಗುರುತಿಸಿ ಅಕ್ರಮ ಕಟ್ಟಡಗಳಿಗೆ ತ್ವರಿತವಾಗಿ ನೋಟಿಸ್ ಜಾರಿ ತೆರವುಗೊಳಿಸುವಂತೆ ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತ ಬಿ.ವೀರಪ್ಪ ಜಿಲ್ಲಾಧಿಕಾರಿ ಡಾ.ಕುಮಾರ ಸೇರಿದಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸ್ಥಳದಲ್ಲೆ ಸೂಚನೆ ನೀಡಿದರು.

ಪಟ್ಟಣದ ಹೊರ ವಲಯದ ಚಂದ್ರವನ ಆಶ್ರಮದ ಬಳಿಯ ಬಂಗಾರದೊಡ್ಡಿ ನಾಲೆ ಹಾಗೂ ಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿಯ ಕಾವೇರಿ ನದಿ ತೀರ ಪ್ರದೇಶವನ್ನು ವೀಕ್ಷಿಸಿದ ಅವರು, ಕಾವೇರಿ ನದಿಯನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿಕೊಂಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ ನದಿ ತೀರ ಪ್ರದೇಶದ ಬಫರ್ ಝೋನ್ ಗುರುತಿಸಲು ಮುಂದಾಗುವಂತೆ ತಿಳಿಸಿದರು.

ಕೆಲವರು ಕಾವೇರಿ ನದಿ ತೀರ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ರೆಸಾರ್ಟ್ ಸೇರಿದಂತೆ ಮೋಜು ಮಸ್ತಿ ತಾಣಗಳನ್ನಾಗಿ ನಿರ್ಮಿಸಿಕೊಂಡಿರುವ ಬಗ್ಗೆ ದೂರುಗಳು ಬಂದಿವೆ. ನದಿ ಒತ್ತುವರಿ ಮಾಡಿಕೊಂಡು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವವರ ವಿರುದ್ಧ ತ್ವರಿತವಾಗಿ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದರು.

ತಾಲೂಕಿನ ಬಲಮುರಿ ಕ್ಷೇತ್ರದಲ್ಲಿ ಡಿಜೆ ಮೋಜು ಮಸ್ತಿಯ ತಾಣವಾಗುತ್ತಿರುವುದರ ಜೊತೆಗೆ ಇಲ್ಲಿಗೆ ಅಪ್ರಾಪ್ತರು ದುಶ್ಚಟಗಳಿಗೆ ಬಲಿಯಾಗಿ ಸಾವನ್ನಪ್ಪುತ್ತಿರುವ ಕಂಟಕವಾಗುತ್ತಿರುವುದಾಗಿ ಸ್ಥಳೀಯರು ದೂರಿದರು. ಜೊತೆಗೆ ಇಲ್ಲಿನ ರೆಸಾರ್ಟ್‌ಗಳಲ್ಲಿ ಮದ್ಯಪಾನದ ಜೊತೆಗೆ ಯುವಕ, ಯುವತಿಯರು ಅರೆ ಬೆತ್ತಲೆಯಾಗಿ ಕುಣಿಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಮೌನವಹಿಸಿರುವುದಾಗಿ ದೂರಿದರು. ಸ್ಥಳದಲ್ಲಿದ್ದ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ಕೂಡಲೆ ಕ್ರಮ ವಹಿಸುವಂತೆ ಸೂಚನೆ ನೀಡಿದರು.

ಬ್ರಾಹ್ಮಣ ಮಹಾಸಭಾ ನೂತನ ಅಧ್ಯಕ್ಷರಾಗಿ ಅರ್ಚಕ ಸತ್ಯನಾರಾಯಣ ಆಯ್ಕೆ

ಪಾಂಡವಪುರ:

ತಾಲೂಕು ಬ್ರಾಹ್ಮಣ ಮಹಾಸಭಾದ ನೂತನ ಅಧ್ಯಕ್ಷರಾಗಿ ಮಹಾಕಾಳೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಸತ್ಯನಾರಾಯಣ ಅವಿರೋಧವಾಗಿ ಆಯ್ಕೆಯಾದರು.

ಹಿಂದಿನ ಅಧ್ಯಕ್ಷ ಮಂಜುನಾಥ್ (ಕೆಇಬಿ) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತೆರವಾದ ಸ್ಥಾನಕ್ಕೆ ಪಟ್ಟಣದ ಶಾಂತಿನಗರದ ಬ್ರಾಹ್ಮಣ ಮಹಾಸಭಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಸತ್ಯನಾರಾಯಣ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರನ್ನು ಬ್ರಾಹ್ಮಣ ಮಹಾಸಭಾದ ಗೌರವಾಧ್ಯಕ್ಷ ಸತ್ಯಮೂರ್ತಿ, ಅರ್ಚಕರಾದ ಬಿ.ಎಸ್.ನಾಗರಾಜು, ಕೆರೆತೊಣ್ಣೂರು ಕುಮಾರ್, ನಿವೃತ್ತ ಶಿಕ್ಷಕ ಪ್ರಸನ್ನಕುಮಾರ್, ಬ್ರಾಹ್ಮಣ ಸಮಾಜದ ಮುಖಂಡರಾದ ಗೋಪಾಲಕೃಷ್ಣ, ಸುದೀಪ್, ಪ್ರಶಾಂತಕುಮಾರ್, ರವಿಕುಮಾರ್, ಗಂಗಾಧರ್ ಇತರರು ಅಭಿನಂದಿಸಿದರು.

ನೂತನ ಅಧ್ಯಕ್ಷ ಸತ್ಯನಾರಾಯಣ ಮಾತನಾಡಿ, ಬ್ರಾಹ್ಮಣ ಸಮಾಜದವರು ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಅವರ ಸಹಕಾರದಿಂದ ಬ್ರಾಹ್ಮಣ ಸಮಾಜದ ಏಳ್ಗೆಗಾಗಿ ಕೆಲಸ ಮಾಡುವ ಜತೆಗೆ ಸಮಾಜದ ಒಳಿತಿಗೆ ಹತ್ತು ಹಲವಾರು ಕಾರ್ಯಕ್ರಮ ರೂಪಿಸುವ ಮೂಲಕ ತಾಲೂಕು ಬ್ರಾಹ್ಮಣ ಮಹಾಸಭಾವನ್ನು ರಾಜ್ಯದಲ್ಲಿ ಗುರುತಿಸುವಂತೆ ಮಾಡುತ್ತೇನೆ. ನನ್ನನ್ನು ಆಯ್ಕೆ ಮಾಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌