ಹುಬ್ಬಳ್ಳಿ: ನಮಗೆ ವ್ಯಾಪಾರ ಮತ್ತು ವ್ಯಾಪಾರಸ್ಥರಿಗಿಂತ ಮಕ್ಕಳ ಶಿಕ್ಷಣ ಮತ್ತು ಅವರ ಆರೋಗ್ಯ ಅತ್ಯಮೂಲ್ಯ. ಶಾಲೆಗೆ ಹೊಂದಿಕೊಂಡು ನಿರ್ಮಿಸಿರುವ ಸಾರ್ವಜನಿಕ ಮೂತ್ರಾಲಯ ಕೂಡಲೇ ತೆರವುಗೊಳಿಸಿ ಮಕ್ಕಳ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತರನ್ನು ಸ್ಥಳಕ್ಕೆ ಕರೆಯಿಸಿ ಇಲ್ಲಿ ಚಿಕ್ಕಮಕ್ಕಳು ಪ್ರತಿದಿನ ವಿದ್ಯಾಭ್ಯಾಸ ಮಾಡುತ್ತಾರೆ. ಕೊಠಡಿಗೆ ಹೊಂದಿಕೊಂಡೇ ಸಾರ್ವಜನಿಕ ಮೂತ್ರಾಲಯ ನಿರ್ಮಾಣ ಮಾಡಲಾಗಿದೆ. ನಮಗೆ 10 ನಿಮಿಷ ನಿಲ್ಲಲು ಆಗದಂತೆ ದುರ್ವಾಸನೆ ಬೀರುತ್ತಿದೆ. ರಸ್ತೆ ಮೇಲೆ ಅನಧಿಕೃವಾಗಿ ಮೂತ್ರಾಲಯ ನಿರ್ಮಾಣ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇಷ್ಟೆಲ್ಲ ನಡೆದರೂ ಪಾಲಿಕೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತರೆ ಹೇಗೆ? ಯಾರ ಒತ್ತಡಕ್ಕೂ ಮಣಿಯದೇ ತೆರವುಗೊಳಿಸುವಂತೆ ಸೂಚನೆ ನೀಡಿದರು. ತೆರವುಗೊಳಿಸದಿದ್ದರೆ ಸಂಬಂಧಪಟ್ಟವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪಗೌಡ, ಮುಖ್ಯ ಶಿಕ್ಷಕಿ ಶೋಭಾ, ವಿಜಯಕುಮಾರ ಕುಂದನಹಳ್ಳಿ, ಮಹಾಂತೇಶ ಗಿರಿಮಠ, ಶಿವನಗೌಡ ಹೊಸಮನಿ, ಶರಣು ಪಾಟೀಲ, ಮದನ್ ಬಚನ್, ಫಯಾಜ್ ಕಲಘಟಗಿ ಸೇರಿದಂತೆ ಅನೇಕರಿದ್ದರು.