ರೇಣುಗೆ ಮಂತ್ರಿ ಮಾಡಿದ ನೋವಿದೆ: ಹರೀಶ ಕಿಡಿ

KannadaprabhaNewsNetwork |  
Published : Oct 26, 2026, 01:30 AM IST
ಹರೀಶ | Kannada Prabha

ಸಾರಾಂಶ

Renu is hurt over being made a minister: Harish lashes out

-ವಿಜಯೇಂದ್ರಗೆ ಗೆಲ್ಲಿಸಿದ್ದೇ ತಾವೆಂಬ ಅರ್ಥದ ಸಿಎಂ ಡಿಕೆಶಿ ಹೇಳಿಕೆ ಆಕ್ಷೇಪ । ರಾಜಕಾರಣ ಯಾವ ಮಟ್ಟಿಗೆ ಹೋಗಿದೆಯೆಂಬ ಪ್ರಶ್ನೆ ಕಾಡುತ್ತಿದೆ

--

ಕನ್ನಡಪ್ರಭ ವಾರ್ತೆ ದಾವಣಗೆರೆ

ರೇಣುಕಾಚಾರ್ಯ ಮಂತ್ರಿ ಆಗುವುದಕ್ಕೆ ಮುಖ್ಯ ಕಾರಣ ನಾನು. ಇಂತಹ ದುಷ್ಟನ ಮಂತ್ರಿ ಮಾಡಿದೆನಲ್ಲಾ ಅಂತಾ ನನಗೆ ನೋವಿದೆ ಎಂದು ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶ ಹರಿಹಾಯ್ದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಂದಾಣಿಕೆ ರಾಜಕೀಯ ಬಗ್ಗೆ ಸಾರ್ವಜನಿಕವಾಗಿ ಗಮನಕ್ಕೆ ತಂದು, ಹೋರಾಟ ಮಾಡುತ್ತೇನೆ. ಬಿಜೆಪಿ ರಾಜ್ಯ ಉಸ್ತುವಾರಿ ಹರೀಶ ದ್ವಿವೇದಿ ಗಮನಕ್ಕೂ ತರುತ್ತೇನೆ ಎಂದರು.

ಸದನದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ವಿಜಯೇಂದ್ರಗೆ ಹೇಳಿದ ಮಾತು ಮರೆಯಬಾರದು. ಏ ವಿಜಯೇಂದ್ರ ನಾನು ನಾಗರಾಜಗೌಡಗೆ ಅಭ್ಯರ್ಥಿ ಮಾಡಿದ್ದರೆ ನೀನು ಗೆಲ್ಲುತ್ತಿರಲಿಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಅದು ನನ್ನ ಭಿಕ್ಷೆ ಅಂತಾ ಸದನದಲ್ಲೇ ಅಂದಿದ್ದರು. ಸದನದಲ್ಲಿ ಸ್ವತಃ ಸಿಎಂ ಡಿ.ಕೆ.ಶಿವಕುಮಾರ ಹೀಗೆ ಹೇಳುತ್ತಾರೆಂದರೆ ರಾಜಕಾರಣ ಯಾವ ಮಟ್ಟಿಗೆ ಹೋಗಿದೆ ಎಂದು ಅವರು ಪ್ರಶ್ನಿಸಿದರು.

ತಮ್ಮ ಮಗನನ್ನು ಗೆಲ್ಲಿಸಲು ಅಲ್ಲಿ ಶಕ್ತಿ ಇಲ್ಲದ ಅಭ್ಯರ್ಥಿಗೆ ನಿಲ್ಲಿಸುವುದು. ಕಳೆದ ಸಲ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಬಿಜೆಪಿಯ ಒಂದು ತಂಡ ವೈಯಕ್ತಿಕ ಲಾಭಕ್ಕಾಗಿ ಕಾಂಗ್ರೆಸ್ ಪರ ದುಡಿದಿದ್ದರು. ಚನ್ನಗಿರಿಯವರು ಲೋಕಾಯುಕ್ತ ತನಿಖೆಯಿಂದ ಹೊರ ಬಕಬೇಕೆಂದು ಕಾಂಗ್ರೆಸ್ ಪರ ದುಡಿದರು. ಹೊನ್ನಾಳಿಯವರು ಬಹಳಷ್ಟು ಶಾಸಕರಿಗೆ ಮೋಸ ಮಾಡಿದ್ದರು. ಹೊನ್ನಾಳಿ ಮಹಾಶಯ ಯಡಿಯೂರಪ್ಪ ಮಾಡಿದ ಹಗರಣ ತಮ್ಮ ಬಳಿ ಇದೆಯೆನ್ನುತ್ತಿದ್ದ. ನೂತನ ಶಾಸಕರ ಮನಸ್ಸಿನಲ್ಲಿ ವಿಷ ಬೀಜ ಬಿತ್ತಿ, ಮಂತ್ರಿಯಾದ ಎಂದು ಮಾಡಾಳ ವಿರುಪಾಕ್ಷಪ್ಪ, ರೇಣುಕಾಚಾರ್ಯ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ಬಿಜೆಪಿಯಲ್ಲಿ ನಡೆಯುತ್ತಿದೆ ಎನ್ನಲಾದ ಹೊಂದಾಣಿಕೆ ರಾಜಕೀಯ ಹಾಗೂ ವೈಯಕ್ತಿಕ ಹಿತಾಸಕ್ತಿಗಳ ಕುರಿತು ಪಕ್ಷದ ವರಿಷ್ಟರ ಗಮನ ಸೆಳೆಯುತ್ತೇನೆ. ಕಾರ್ಯಕರ್ತರ ಹಿತಾಸಕ್ತಿ ಕಾಪಾಡಲು ಈ ವಿಚಾರದಲ್ಲಿ ಹೋರಾಟ ಮುಂದುವರಿಸುವುದಾಗಿ ಹೇಳಿದರು.

ಬಾಕ್ಸ್‌...ಎನ್‌ಡಿಎ ಅಭ್ಯರ್ಥಿ ಎಸ್ಸೆಸ್ಸೆಂ ಕಾಲಿಗೆ ಬೀಳೋ ಅಗತ್ಯವೇನಿತ್ತು?

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿಪ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ಎಂ.ಸುರೇಶ್ ಜಿಲ್ಲಾ ಉಸ್ತುವಾರಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಕಾಲಿಗೆ ಬೀಳುವ ಅಗತ್ಯ ಏನಿತ್ತು? ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಬಳಿ ಮುಂದೆಯೂ ಸಹಕಾರ ನೀಡುವುದಾಗಿ ಸುರೇಶ ಹೇಳಿದ ಬಗ್ಗೆ ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ ಸ್ವಪಕ್ಷದ ಅಭ್ಯರ್ಥಿ ವಿರುದ್ಧವೇ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪ ಚುನಾವಣೆ ವೇಳೆ ಮತ ಕೇಂದ್ರಕ್ಕೆ ಮತ ಚಲಾಯಿಸಲು ಬಂದಿದ್ದ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಕಾಲಿಗೆ ಸಾರ್ವಜನಿಕವಾಗಿ ಬೀಳುವ ಅವಶ್ಯಕತೆಯಾದರೂ ಏನಿತ್ತು ಎಂದು ಎನ್‌ಡಿಎಂ ಅಭ್ಯರ್ಥಿ ಕೆ.ಎಂ.ಸುರೇಶರನ್ನು ಪ್ರಶ್ನಿಸಿದ್ದಾರೆ.

ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲುವುದರಲ್ಲಿ ಯಾವುದೇ ಅನುಮಾನವೂ ಇಲ್ಲ. ಆದರೆ, ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಂದು ಆರೋಪಿಸಿ ತಾವು ಹೋರಾಟ ನಡೆಸುತ್ತಿರುವ ಎಸ್ಸೆಸ್ ಮಲ್ಲಿಕಾರ್ಜುನ್ ಕಾಲಿಗೆ ಸಾರ್ವಜನಿಕವಾಗಿ ಬೀಳುವ ಅಗತ್ಯವೇನಿತ್ತು? ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರಿಗೆ ಮುಂದೆಯೂ ಸಹಕಾರ ನೀಡುವುದಾಗಿ ಹೇಳಿದ್ದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.

ಅದೇ ಹೈಸ್ಕೂಲ್ ಮೈದಾನದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯರನ್ನು ನೋಡಿದಾಕ್ಷಣ ಸಚಿವ ಎಸ್ಸೆಸ್ ಮಲ್ಲಿಕಾರ್ಜುನರಿಗೆ ಅದೇನು ಆನಂದವಾಯಿತ್ರಿ? ಗಲ್ಲ ಮುಟ್ಟುತ್ತಾರೆ. ಎಸ್ಸೆಸ್ಸೆಂಗೆ ಅಷ್ಟೊಂದು ಸಂತೋಷವಾಗಿದ್ದೇಕೆ? ಎಸ್ಸೆಸ್ ಮಲ್ಲಿಕಾರ್ಜುನ ಎ ಟೀಮಾ, ಬಿ ಟೀಮಾ ಅಂತಾ ಕೇಳಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಏನು ಲಗಾನ್ ಟೀಂ ಇದೆಯಲ್ಲ, ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿದ್ದೇ ತಾನೆಂದು ಹೇಳುವ ಮಹಾಶಯ ಮತ್ತು ತಂಡ ಕಾಂಗ್ರೆಸ್ಸಿನ ಬಿ ಟೀಂ ಆಗಿತ್ತು ಎಂದು ಅವರು ಕಿಡಿಕಾರಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಒಂದೇ ತಂಡವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಶಾಮನೂರು ಮನೆತನದವರು ಚುನಾವಣೆಗೆ ಸ್ಪರ್ಧಿಸಿದಾಗ ಕೆಲವರು ಆ ಮನೆತನದವರಿಗೆ ಬೆಂಬಲ ನೀಡುತ್ತಾರೆ. ಇತರೆ ಅಭ್ಯರ್ಥಿಗಳು ಕಣಕ್ಕಿಳಿದಾಗ ಪರಸ್ಪರ ಬೆಂಬಲಿಸುವ ರಾಜಕೀಯ ನಡೆಯುತ್ತದೆ. ಇಂತಹ ಬೆಳವಣಿಗೆಗಳಿಂದಾಗಿ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಿಗೆ ತೀವ್ರ ನೋವಾಗುತ್ತದೆ ಎಂದು ಅವರು ದೂರಿದರು.

ಕಾಂಗ್ರೆಸ್ಸಿನವರು ಪಾಕಿಸ್ತಾನದವರಾ ಎಂಬುದಾಗಿ ಎನ್‌ಡಿಎ ಅಭ್ಯರ್ಥಿ ಸುರೇಶ ಕೇಳುತ್ತಾರೆ. ಕಾಕ್ರೋಚ್ ಪಾರ್ಟಿಯವರೂ ಭಾರದವರೆ. ಆದರೆ, ಅಂತಹವರಿದೆ ಹಣ ಬರುತ್ತಿರುವುದು ವಿದೇಶದಿಂದ. ಗೌರವಯುತ ವಿಧಾನ ಪರಿಷತ್ ಗೆ ಇಂತಹ ಕಾಕ್ರೋಚ್‌ಗಳಿಗೆ ನಮ್ಮ ಪಕ್ಷದವರು ಟಿಕೆಟ್ ಹೇಗೆ ನೀಡುತ್ತಾರೋ? ಇಂತಹವರನ್ನು ಮೇಲ್ಮನೆಗೆ ಕಳಿಸಬೇಕಾಗಿರುವುದು ನೋವಿನ ಸಂಗತಿ. ಅಭ್ಯರ್ಥಿ ಗೆಲುವಿಗಾಗಿ ಕೆಲಸ ಮಾಡಿದ, ದುಡಿದಂತಹ ಬಿಜೆಪಿ ಕಾರ್ಯಕರ್ತರ ಮನಸ್ಸಿಗೆ ಇಂತಹ ಮಾತುಗಳಿಂದ ತೀವ್ರ ನೋವಾಗುತ್ತದೆ ಎಂದು ಅವರು ಬೇಸರ ಹೊರ ಹಾಕಿದರು.

ಬಿಜೆಪಿಯಲ್ಲಿನ ಮ್ಯಾಚಿ ಫಿಕ್ಸಿಂಗ್ ರಾಜಕೀಯಕ್ಕೆ ಅಂತ್ಯ ಹಾಡುವಂತೆ ನ.31ರಂದು ರಾಜ್ಯ ಉಸ್ತುವಾರಿ ಹರೀಶ ದ್ವಿವೇದಿಗೆ ಮನವರಿಕೆ ಮಾಡುತ್ತೇವೆ. ಪಕ್ಷದೊಳಗಿನ ಭಿನ್ನಮತ ಮತ್ತು ಕಾರ್ಯಕರ್ತರ ಅಸಮಾಧಾನವನ್ನೂ ಪರಿಗಣಿಸುವಂತೆ ಆಗ್ರಹಿಸುತ್ತೇವೆ ಎಂದು ಬಿ.ಪಿ.ಹರೀಶ ಹೇಳಿದರು. (ಫೋಟೋ ಇಲ್ಲ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐಟಿ, ಬಿಟಿ ಕಂಪನಿಗಳಿಂದ ಕನ್ನಡ ಭಾಷೆಯ ಅರ್ಜಿ ತಿರಸ್ಕಾರಕ್ಕೆ ಕಿಡಿ
ಶಿಕ್ಷಣ ಕಾಶಿ ಜತೆ ದಾವಣಗೆರೆ ಈಗ ಸಾಹಿತ್ಯ ನಗರಿ!