ಬದುಕಿಗೆ ರೇಣುಕಾಚಾರ್ಯರು ಕೊಟ್ಟ ಕೊಡುಗೆ ಅಪಾರ: ಡಾ.ವೀರಸೋಮೇಶ್ವರ ಶ್ರೀ

KannadaprabhaNewsNetwork |  
Published : Mar 13, 2025, 12:45 AM IST
೧೨ಬಿಹೆಚ್‌ಆರ್ ೨: ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಅಂಗವಾಗಿ ನಡೆದ ಶಿವಾದ್ವೈ ಸಮಾವೇಶ ಸಮಾರಂಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ರಾಯಚೂರು ಜಿಲ್ಲೆ ಕವಿತಾಳದ ಡಾ. ಕವಿತಾ ಮಿಶ್ರಾ ಅವರಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. | Kannada Prabha

ಸಾರಾಂಶ

ಭಾವೈಕ್ಯತೆ ಮತ್ತು ಆಧ್ಯಾತ್ಮ ಭಾರತದ ಉಸಿರು. ಸಾತ್ವಿಕ ತಾತ್ವಿಕ ಹಿತ ಚಿಂತನಗಳನ್ನು ಬೆಳೆಸುವುದರ ಮೂಲಕ ಭಾವೈಕ್ಯತೆಯ ಸೇತುವೆಯನ್ನು ಕಟ್ಟಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಶಾಂತಿ ನೆಮ್ಮದಿಯ ಬದುಕಿಗೆ ರೇಣುಕಾಚಾರ್ಯರು ಕೊಟ್ಟ ಕೊಡುಗೆ ಅಪಾರವಾದುದು ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.

ಕವಿತಾ ಮಿಶ್ರಾಗೆ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಭಾವೈಕ್ಯತೆ ಮತ್ತು ಆಧ್ಯಾತ್ಮ ಭಾರತದ ಉಸಿರು. ಸಾತ್ವಿಕ ತಾತ್ವಿಕ ಹಿತ ಚಿಂತನಗಳನ್ನು ಬೆಳೆಸುವುದರ ಮೂಲಕ ಭಾವೈಕ್ಯತೆಯ ಸೇತುವೆಯನ್ನು ಕಟ್ಟಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಶಾಂತಿ ನೆಮ್ಮದಿಯ ಬದುಕಿಗೆ ರೇಣುಕಾಚಾರ್ಯರು ಕೊಟ್ಟ ಕೊಡುಗೆ ಅಪಾರವಾದುದು ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.

ಇಲ್ಲಿಯ ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಅಂಗವಾಗಿ ಗುರುವಾರ ನಡೆದ ಶಿವಾದ್ವೈತ ಸಮಾವೇಶ ಮತ್ತು ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಾಹಿತ್ಯ ಸಂಸ್ಕೃತಿ ಈ ನಾಡಿನ ಅಮೂಲ್ಯ ಸಂಪತ್ತು. ಸಂಪತ್ತು ಬೆಳೆದಂತೆ ಸಂಸ್ಕೃತಿ ಸಭ್ಯತೆ ಬೆಳೆದುಕೊಂಡು ಬರಬೇಕು. ಸಮಾಜದ ಓರೆ ಕೋರೆಗಳನ್ನು ತಿದ್ದಿ ತೀಡುವುದೇ ಮಹಾತ್ಮರ ಜೀವನದ ಗುರಿಯಾಗಿದೆ. ಮೌಲ್ಯಾಧರಿತ ಬದುಕಿಗೆ ಶ್ರೀ ರೇಣುಕಾಚಾರ್ಯರು ಕೊಟ್ಟ ದಶ ಧರ್ಮ ಸೂತ್ರಗಳು ಆಶಾಕಿರಣವಾಗಿವೆ ಎಂದರು.

ವಿ.ಆರ್.ಎಲ್.ಸಮೂಹ ಸಂಸ್ಥೆ ಚೇರ್ಮನ್ ಡಾ.ವಿಜಯ ಸಂಕೇಶ್ವರ ಮಾತನಾಡಿ, ದೇಶ ಮತ್ತು ಧರ್ಮ ಮನುಷ್ಯನ ಎರಡು ಕಣ್ಣು. ಮನುಷ್ಯರಲ್ಲಿ ವೈಚಾರಿಕ ಮನೋಭಾವನೆಗಳು ಬೆಳೆದು ಬರಲಿ ಆದರೆ ನಾಸ್ತಿಕ ಮನೋಭಾವ ಬೆಳೆಯಬಾರದು. ಹುಟ್ಟು ಸಾವು ಯಾರನ್ನೂ ಬಿಟ್ಟಿಲ್ಲ. ಇವುಗಳ ಮಧ್ಯದ ಬದುಕು ಸಮೃದ್ಧಗೊಳ್ಳಲು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ವಿಚಾರಧಾರೆಗಳು ಸರ್ವ ಕಾಲಕ್ಕೂ ಸರ್ವರಿಗೂ ಅನ್ವಯಿಸುತ್ತವೆ ಎಂದರು.

ಡಾ.ಕವಿತಾ ಮಿಶ್ರಾ ಮಾತನಾಡಿ, ಕ್ರಿಯಾಶೀಲ ಬದುಕು ಜೀವನದ ಶ್ರೇಯಸ್ಸಿಗೆ ಮೂಲ. ಜೀವನ ಮೌಲ್ಯಗಳನ್ನು ಸಂಪಾದಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವುದೇ ನಮ್ಮೆಲ್ಲರ ಗುರಿಯಾಗಬೇಕು ಎಂದರು.

ಕೃಷಿ ಪ್ರಾರಂಭದಲ್ಲಿ ಕಷ್ಟ ಎನಿಸಿದರೂ ನಿರಂತರ ಶ್ರಮ ಸಾಧನೆಯಿಂದ ಉಜ್ವಲ ಭವಿಷ್ಯ ರೂಪಿತಗೊಳ್ಳುತ್ತದೆ ಎಂಬುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ ಎಂದರು.

ವೀರಶೈವ ರೇಣುಕ ರೇವಣಸಿದ್ಧ ಸತ್ಯ ದರ್ಶನ ಕೃತಿ ಬಿಡುಗಡೆ ಮಾಡಿದ ಆಧ್ಯಾತ್ಮ ತತ್ವ ಚಿಂತಕ ಸಂಶೋಧಕ ಡಾ. ಎ.ಸಿ.ವಾಲಿ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು ಶತಮಾನ ಪುರುಷರಲ್ಲ. ಯುಗಪುರುಷರು. ಜಾತಿ ಜನಾಂಗಗಳ ಗಡಿ ಮೀರಿ ಮಾನವೀಯ ಉದಾತ್ತ ಮೌಲ್ಯಗಳನ್ನು ಪ್ರತಿಪಾದಿಸಿದ ಪರಮಾಚಾರ್ಯರು ಎಂದರು.

ಮುಕ್ತಿಮಂದಿರ ಕ್ಷೇತ್ರ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು.

ಪ್ರತಿಷ್ಠಿತ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿಯನ್ನು ರಾಯಚೂರು ಜಿಲ್ಲೆ ಕವಿತಾಳ ಗ್ರಾಮದ ಸಾವಯವ ಕೃಷಿ ತಜ್ಞೆ ಡಾ. ಕವಿತಾ ಮಿಶ್ರಾ ಅವರಿಗೆ ಪ್ರದಾನ ಮಾಡಲಾಯಿತು. ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು ಪ್ರಶಸ್ತಿ ವಾಚನ ಮಾಡಿದರು.

ಪಡಸಾವಳಿ-ಉದ್ಗಿರಿ ಕ್ಷೇತ್ರದ ಶಂಭುಲಿಂಗ ಶಿವಾಚಾರ್ಯರು, ಸ್ಟೇಷನ್ ಬಬಲಾದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳಿಗೆ ರಂಭಾಪುರಿ ಜಗದ್ಗುರು ಗುರುರಕ್ಷೆ ನೀಡಿ ಆಶೀರ್ವದಿಸಿದರು.

ರೇಣುಕಾಚಾರ್ಯ ಗುರುಕುಲದ ಸಾಧಕರು ವೇದಘೋಷ ಮಾಡಿ, ಎಂ.ಸಂಗಮೇಶ ಉತ್ತಂಗಿ ಪ್ರಾರ್ಥಿಸಿ, ಜಿ.ಜಿ. ರಕ್ಷಿತಾ ಶಿವಮೊಗ್ಗ ಭರತ ನಾಟ್ಯ ಪ್ರದರ್ಶಿಸಿದರು. ಪತ್ರಕರ್ತ ಪ್ರಶಾಂತ ರಿಪ್ಪನ್‌ಪೇಟೆ ಸ್ವಾಗತಿಸಿ, ಶಿವಮೊಗ್ಗದ ಶಾಂತಾ ಆನಂದ ಪ್ರಾರ್ಥಿಸಿದರು.

ಸಚಿವ ಡಾ.ಎಂ.ಬಿ.ಪಾಟೀಲ್ ಪುತ್ರ ಬಸನಗೌಡ ಪಾಟೀಲ, ರೋಣ ಶಾಸಕ ಜಿ.ಎಸ್.ಪಾಟೀಲ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಕೊಡ್ಲಿಪೇಟೆ ರಾಜೇಶ್ವರಿ ನಾಗರಾಜ್, ಶಿವಮೊಗ್ಗದ ಎಸ್.ಎಸ್.ಜ್ಯೋತಿಪ್ರಕಾಶ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌