ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಐತಿಹಾಸಿಕ ಮೂಲೆ ಮಂಟಪ ಧ್ವಂಸ ಮಾಡಿದ ಕಿಡಿಗೇಡಿಗಳನ್ನು ತಿಂಗಳಾದರೂ ಬಂಧಿಸದಿರುವ ಕ್ರಮ ಖಂಡಿಸಿ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ವಿರುದ್ಧ ನೂರಾರು ನಾಗರಿಕರು ಪಟ್ಟಣದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.ತಾಲೂಕಿನ ಕಿರಂಗೂರು ಗ್ರಾಮದ ಮೂಲೆ ಮಂಟಪದ ಬಳಿ ಸೇರಿದ ಪ್ರತಿಭಟನಾಕಾರರು ಎತ್ತಿನಗಾಡಿ, ಟ್ರ್ಯಾಕ್ಟರ್ ಸೇರಿದಂತೆ ಜಾನುವಾರುಗಳನ್ನು ಶ್ರೀರಂಗಪಟ್ಟಣ-ಜೇವರ್ಗಿ ಹೆದ್ದಾರಿಗೆ ಅಡ್ಡಗಟ್ಟಿ ನಿಲ್ಲಿಸಿ ಕೆಲಕಾಲ ಹೆದ್ದಾರಿ ತಡೆದು ತಾಲೂಕು ಅಡಳಿತ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಕಿರಂಗೂರು ಮತ್ತು ದರಸಗುಪ್ಪೆ ಗ್ರಾಮಗಳ ನಡುವಿನ ಹೆದ್ದಾರಿ ಪಕ್ಕದಲ್ಲಿದ್ದ ಮಹಾರಾಜರ ಕಾಲದ ಮಂಟಪವನ್ನು ಕಳೆದ ಒಂದು ತಿಂಗಳ ಹಿಂದೆ ಕಿಡಿಗೇಡಿಗಳು ನಾಶ ಮಾಡಿದ್ದರು. ಇದರ ವಿರುದ್ಧ ಧ್ವನಿ ಎತ್ತಿ ನೂರಾರು ವರ್ಷಗಳ ಇತಿಹಾಸವಿರುವ ಮಂಟಪವನ್ನು ನಾಶ ಮಾಡಿರುವ ಆರೋಪಿಗಳನ್ನು ಪತ್ತೆ ಮಾಡಿ ಶಿಕ್ಷೆ ನೀಡುವಂತೆ ಪ್ರತಿಭಟನೆ ಸಹ ನಡೆಸಲಾಗಿತ್ತು.ಸ್ಥಳಕ್ಕೆ ತಹಸೀಲ್ದಾರ್ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳ ಆಗಮಿಸಿ 15 ದಿನಗಳ ಒಳಗೆ ಆರೋಪಿಗಳನ್ನು ಬಂಧಿಸಿ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಪುನರ್ ಮಂಟಪ ನಿರ್ಮಾಣ ಮಾಡುವುದಾಗಿ ಹೇಳಿದ್ದರು. ಆದರೆ, ಒಂದು ತಿಂಗಳು ಕಳೆದರೂ ಯಾವುದೇ ಕ್ರಮವಹಿಸಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ತಹಸೀಲ್ದಾರ್ ಚೇತನಾಯಾದವ್ ಸ್ಥಳಕ್ಕಾಗಮಿಸಿ ನೆಲಸಮಗೊಳಿಸಿರುವ ಮೂಲೆ ಮಂಟಪವನ್ನು ಸರ್ಕಾರದ ಅನುದಾನ ಬಳಕೆ ಮಾಡಿಕೊಂಡು ನಿರ್ಮಿಸಲು ಸಾಧ್ಯವಿಲ್ಲ. ಹಾಗಾಗಿ ದಾನಿಗಳ ನೆರವು ಪಡೆದು ಶೀಘ್ರ ಮಂಟಪವನ್ನು ಪುನರ್ ನಿರ್ಮಾಣ ಮಾಡ ಸಹಕರಿಸಲಾಗುವುದು. ಕಾಲಾವಕಾಶ ನೀಡುವಂತೆ ಪ್ರತಿಭಟನಾಕಾರಲ್ಲಿ ಮನವಿ ಮಾಡಿದರು. ನಂತರ ಪ್ರತಿಭಟಕಾರರು ಪ್ರತಿಭಟನೆ ಹಿಂಪಡೆದು ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಪ್ರತಿಭಟನೆಯಲ್ಲಿ ಕರ್ನಾಟಕ ಕದಂಬಪಡೆ ಜಿಲ್ಲಾಧ್ಯಕ್ಷ ರುಕ್ಮಾಂಗಧ, ಗಂಜಾಂ ಅಭಿ, ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಶಂಕರ್‌ಬಾಬು, ಜಗದೀಶ್ ಕಿರಂಗೂರು, ದರಸಗುಪ್ಪೆ ಗ್ರಾ.ಪಂ ಮಾಜಿ ಸದಸ್ಯ ಯೋಗೇಶ್, ಶಿವು ಸೇರಿದಂತೆ ಕಿರಂಗೂರು, ದರಸಗುಪ್ಪೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.