ಕನ್ನಡಪ್ರಭವಾರ್ತೆ, ಚಿತ್ರದುರ್ಗ
ರೇಣುಕಾಚಾರ್ಯರು ಬೋಧಿಸಿದ ವೀರಶೈವ ತತ್ವಗಳು ಇಂದಿಗೂ ಪ್ರಚಲಿತವಾಗಿವೆ. ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಸಮಾನತೆಯನ್ನು ಬೋಧಿಸಿದ ರೇಣುಕಾಚಾರ್ಯರರು ಮಾನವ ಕುಲಕ್ಕೆ ಮಹೋನ್ನತ ಕೊಡುಗೆ ನೀಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಬಣ್ಣಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರ ಸಭೆ ಸಹಯೋಗದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಮಾನವ ಕುಲಕ್ಕೆ ಧರ್ಮ ಎನ್ನುವುದು ಮುಖ್ಯವಾದದು. ಎಲ್ಲರೂ ಧರ್ಮದಿಂದ ನಡೆದುಕೊಂಡಾಗಲೇ ಮಾನವರಾಗಿ ಜನಿಸಿದ್ದಕ್ಕೆ ಸಾರ್ಥಕವಾಗುತ್ತದೆ ಎಂದರು.
ಧಾರ್ಮಿಕ ಸ್ವಾತಂತ್ರ್ಯ, ಮಹಿಳಾ ಸಮಾನತೆ, ಸರ್ವರಿಗೂ ಸಮಪಾಲು ಸಮಬಾಳು ಎಂಬ ಪರಿಕಲ್ಪನೆಗಳಿಗೆ ರೇಣುಕಾಚಾರ್ಯರ ಬೋಧನೆಗಳು ಮೂಲ ಸೆಲೆ ಯಾಗಿವೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯೋಣ, ಎಲ್ಲರನ್ನೂ ಸಮಾನರಾಗಿ ಕಾಣೋಣ. ಮಹಾತ್ಮರನ್ನು ಯಾವುದೇ ಜಾತಿ ಸಂಕೋಲೆಗೆ ಸಿಲುಕಿಸಬಾರದು. ಅವರ ವ್ಯಕ್ತಿತ್ವ ಸೀಮಿತಗೊಳಿಸದೆ, ವಿಶ್ವರೂಪವಾಗಿ ನೋಡಬೇಕು. ಸಾರ್ವತ್ರಿಕ ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಹಿನ್ನಲೆಯಲ್ಲಿ ಜಯಂತಿಯನ್ನು ಸರಳವಾಗಿ ಆಚರಿಸಲಾಗಿದೆ ಎಂದು ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.ನಿವೃತ್ತ ಪ್ರಾಂಶುಪಾಲ ಷಡಾಕ್ಷರಯ್ಯ ಮಾತನಾಡಿ, ಸುಮಾರು 5 ಸಾವಿರ ವರ್ಷಗಳ ಹಿಂದೆಯೇ ರೇಣುಕಾಚಾರ್ಯರು ಗಂಡು ಹೆಣ್ಣು ಸಮಾನರು ಎಂದು ತಿಳಿಸಿದರು. ಅವರ ಬೊಧನೆಯ ಸಾರವನ್ನು ಶಿವಯೋಗಿ ಶಿವಾಚಾರ್ಯರು ಶ್ರೀ ಸಿದ್ದಾಂತ ಶಿಖಾಮಣಿ ಕೃತಿಯಲ್ಲಿ ಸಂಪಾದಿಸಿದ್ದಾರೆ. ಕಾಯಕವೇ ಕೈಲಾಸ ಎಂಬ ತತ್ವ ಈ ಕೃತಿಯಲ್ಲಿ ಅಡಕವಾಗಿದೆ. ಮತ, ಜಾತಿ ಬೇಧ ಭಾವಗಳಿಂದ ಮುಕ್ತವಾಗಿ ಮಾನವರೆಲ್ಲಾ ಒಂದೇ ಎನ್ನುವುದನ್ನು ರೇಣುಕಾಚಾರ್ಯರು ತೋರಿಸಿಕೊಟ್ಟರು. ದೇಶದ ಹಲವು ದೇವಾಲಯಗಳಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಐತಿಹ್ಯಗಳು ದೊರಕಿವೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕಂತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ ಮಲ್ಲಿಕಾರ್ಜುನ್ ಸ್ವಾಗತಿಸಿದರು. ರಂಗ ನಿರ್ದೇಶಕ ಕೆ.ಪಿಎಂ ಗಣೇಶಯ್ಯನ ನಾಡಗೀತೆ ಹಾಡುವುದರೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ವೀರಶೈವ ಸಮಾಜ ಅಧ್ಯಕ್ಷ ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ವೀರೇಂದ್ರಕುಮಾರ್, ಸಮಾಜದ ಮುಖಂಡರುಗಳಾದ ಎಸ್ಎಂಎಲ್ ತಿಪ್ಪಣ್ಣ, ಸುರೇಶ್ ಕೆಬಿ, ಕೆಟಿ ವಿಶ್ವನಾಥಯ್ಯ, ಕೆ.ಬಿ ಶಿವನಗೌಡರ, ವೀರೇಶ್, ಕೆ.ಸಿ ರುದ್ರೇಶ್, ಕುಮಾರಸ್ವಾಮಿ, ಚಿನ್ಮಯಾನಂದ, ಬಿ.ಎಂ ಶಂಕರ್ ಉಪಸ್ಥಿತರಿದ್ದರು.