ಕನ್ನಡಪ್ರಭ ವಾರ್ತೆ ಬೆಂಗಳೂರು
ಅಲ್ಲದೆ ಪರಿಸ್ಥಿತಿ ನಿಭಾಯಿಸಲು ಪ್ರದೂಷ್ ಕೇಳಿದ್ದಕ್ಕೆ 30 ಲಕ್ಷ ರು. ಹಣ ಹಾಗೂ ವಿನಯ್‌ಗೆ 10 ಲಕ್ಷ ರು. ಹಣವನ್ನು ಮನೆಯಿಂದಲೇ ಕೊಟ್ಟಿದ್ದೇನೆ. ಈ ಹಣ ನನಗೆ ನಿರ್ಮಾಪಕರು ಕೊಟ್ಟಿದ್ದರು ಎಂದು ದರ್ಶನ್ ತಿಳಿಸಿದ್ದಾರೆ.
‘ನಿನಗೆ ಬರುವ 20 ಸಾವಿರ ರು. ಸಂಬಳದಲ್ಲಿ ಇವಳನ್ನು (ಪವಿತ್ರಾಗೌಡ) ಮೆಂಟೇನ್ ಮಾಡಲು ಸಾಧ್ಯನಾ? ಇದೆಲ್ಲ ನಿನಗೆ ಬೇಕಾ? ಇತರೆ ನಟಿಯರಿಗೂ ಮೆಸೇಜ್ ಮಾಡಿದ್ದೀಯಲ್ಲ’ ಎಂದು ಬೈದು ಚಿತ್ರದುರ್ಗದ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾಗಿಯೂ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.ಕೊಲೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ದರ್ಶನ್‌ರವರ 8 ಪುಟಗಳ ತಪ್ಪೊಪ್ಪಿಗೆ ಹೇಳಿಕೆ ದಾಖಲಾಗಿದ್ದು, ಈ ಹೇಳಿಕೆ ಸೋಮವಾರ ಬಹಿರಂಗವಾಗಿ, ಚರ್ಚೆಗೆ ಕಾರಣವಾಗಿದೆ. ಅಲ್ಲದೆ, ನಾನು ಹಲ್ಲೆ ನಡೆಸಿ ಶೆಡ್‌ನಿಂದ ತೆರಳಿದೆ. ಮರುದಿನ ಮೈಸೂರಿಗೆ ಹೋದ ಮೇಲೆ ರೇಣುಕಾಸ್ವಾಮಿಗೆ ಪವನ್, ಧನರಾಜ್ ಹಾಗೂ ನಂದೀಶ ಕರೆಂಟ್ ಶಾಕ್ ಕೊಟ್ಟಿದ್ದಲ್ಲದೆ ನೆಲಕ್ಕೆ ಕುಕ್ಕಿ ಹಲ್ಲೆ ಮಾಡಿದ ಸಂಗತಿ ಗೊತ್ತಾಯಿತು ಎಂದೂ ಅವರು ಹೇಳಿದ್ದಾರೆ.
ತಪ್ಪೊಪ್ಪಿಗೆ ಹೇಳಿಕೆ ವಿವರ ಹೀಗಿದೆ:
-ಎರಡು ಮನೆಗಳಲ್ಲಿ 8 ವರ್ಷಗಳಿಂದ ಪವನ್ ಕೆಲಸ ಮಾಡುತ್ತಿದ್ದ. ನಂದೀಶ್ ನನ್ನ ಅಭಿಮಾನಿಯಾಗಿದ್ದು, 15 ವರ್ಷಗಳಿಂದ ಲಕ್ಷ್ಮಣ್ ಕಾರು ಚಾಲಕರಾಗಿದ್ದಾರೆ. ಮೂರ್ನಾಲ್ಕು ವರ್ಷಗಳಿಂದ ಪಟ್ಟಣಗೆರೆ ವಿನಯ್ ಸ್ನೇಹಿತರಾಗಿದ್ದು, ಆಗಾಗ್ಗೆ ನಮ್ಮ ಮನೆಗೆ ಬಂದು ಹೋಗುತ್ತಿದ್ದರು. ಮೈಸೂರಿನಲ್ಲಿರುವ ನನ್ನ ಫಾರ್ಮ್ ಹೌಸ್ ಅನ್ನು ನಾಗರಾಜ್ ನೋಡಿಕೊಳ್ಳುತ್ತಿದ್ದ. ದೀಪಕ್ ಎಂಬಾತ ವಿನಯ್‌ಗೆ ಸ್ನೇಹಿತನಾಗಿದ್ದು, ಆತ ಸಹ ನನ್ನ ಅಭಿಮಾನಿಯಾಗಿದ್ದ. ಇನ್ನು ನನಗೆ 16 ವರ್ಷಗಳಿಂದ ಪ್ರದೂಷ್ ಪರಿಚಯವಿದೆ. ರಾಘವೇಂದ್ರ ನನ್ನ ಅಭಿಮಾನಿಗಳ ಸಂಘದ ಚಿತ್ರದುರ್ಗದ ಅಧ್ಯಕ್ಷನಾಗಿದ್ದ.
- ಮಧ್ಯಾಹ್ನ ಸುಮಾರು 3 ಗಂಟೆಗೆ ಪವನ್ ನನ್ನ ಬಳಿ ಬಂದು ತನ್ನ ಮೊಬೈಲ್ ತೋರಿಸಿ ಯಾವನೋ ಒಬ್ಬ ‘Gautham s’ ಹೆಸರಿನ ಇನ್ಸ್ಟಾ ಖಾತೆಯಿಂದ ಪವಿತ್ರಕ್ಕನಿಗೆ ಸುಮಾರು ದಿನಗಳಿಂದ ಖಾಸಗಿ ಅಂಗಾಂಗಗಳ ಚಿತ್ರ ಕಳುಹಿಸುತ್ತಿದ್ದ. ನಿನ್ನ ರೇಟೆಷ್ಟು, ನಾನು ರೂಂ ಮಾಡುತ್ತೇನೆ. ನೀನು ಬಾ. ನಾನು ದರ್ಶನ್‌ಗಿಂತ ಚೆನ್ನಾಗಿದ್ದೇನೆ ಇತ್ಯಾದಿಯಾಗಿ ಮೆಸೇಜ್‌ಗಳನ್ನು ಮಾಡಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತನನ್ನು ರಾಘವೇಂದ್ರ ಮತ್ತು ಆತನ ಸ್ನೇಹಿತರು ಕಿಡ್ನಾಪ್ ಮಾಡಿಕೊಂಡು ಬಂದು ಪಾರ್ಕಿಂಗ್ ಶೆಡ್‌ನಲ್ಲಿಟ್ಟಿದ್ದಾರೆ ಎಂದು ತಿಳಿಸಿದ.
- ನಾನು ಆತನಿಗೆ ಮೆಸೇಜ್ ಕಳುಹಿಸಿರುವುದು ನೀನೇನಾ ಎಂದು ಕೇಳಿದೆ. ಅದಕ್ಕೆ ಹೌದು ನಾನೇ ಎಂದ. ಇದು ನಿನಗೆ ಬೇಕಾ? ನಿನ್ನ ಸಂಬಳ ಎಷ್ಟು ಎಂದೆ. 20 ಸಾವಿರ ರು. ಎಂದು ಹೇಳಿದ, ನಿನಗೆ ತಿಂಗಳಿಗೆ 20 ಸಾವಿರ ಸಂಬಳ. ನನ್ನ ಮಗನೇ ನೀನು ಇವಳನ್ನು ಮೆಂಟೇನ್ ಮಾಡಲು ಸಾಧ್ಯನಾ? ಈ ರೀತಿ ಕೆಟ್ಟದಾಗಿ ಮೆಸೇಜ್ ಮಾಡಿದ್ದೀಯಲ್ಲ ಎಂದಿದ್ದಕ್ಕೆ ಆತ ಏನೂ ಮಾತನಾಡಲಿಲ್ಲ. ಆಗ ನಾನು ಆತನಿಗೆ ಕೈಯಿಂದ ಹೊಡೆದು, ಕಾಲಿನಿಂದ ತಲೆ, ಎದೆಗೆ ಒದ್ದೆ. ಅಲ್ಲೇ ಮರದ ಕೊಂಬೆ ಕಿತ್ತು ಹೊಡೆದೆ. ಕೈನಿಂದ ಗುದ್ದಿದೆ. ಕಾರಿನಲ್ಲಿ ಕುಳಿತಿದ್ದ ಪವಿತ್ರಾಳನ್ನು ಕರೆಸಿದೆ. ನೋಡು ನೀನು ಮೆಸೇಜ್ ಮಾಡುತ್ತಿದ್ದಿದ್ದು ಇವಳಿಗೇ ಎಂದು ತೋರಿಸಿದೆ. ಆಗ ಚಪ್ಪಲಿಯಿಂದ ಪವಿತ್ರಾ ಹೊಡೆದಳು. ಆಕೆಯ ಕಾಲಿಗೆ ಬಿದ್ದು ಕ್ಷಮೆ ಕೋರುವಂತೆ ಹೇಳಿದೆ. ಆತ ಕಾಲಿಗೆ ಬಿದ್ದಾಗ ಪವಿತ್ರಾ ಹಿಂದೆ ಸರಿದಳು. ನಂತರ ಆಕೆಯನ್ನು ಮನೆಗೆ ಕಳುಹಿಸಿದೆ. ಅಷ್ಟರಲ್ಲಿ ಅಲ್ಲಿಗೆ ಬಂದ ನನ್ನ ಕಾರು ಚಾಲಕ ಲಕ್ಷ್ಮಣ್ ಸಹ ರೇಣುಕಾಸ್ವಾಮಿಗೆ ಹೊಡೆದನು. ಆತನನ್ನು ಜೋರಾಗಿ ಎತ್ತಿ ಒಂದು ಬಾರಿ ನನ್ನ ಮುಂದೆಯೇ ನಂದೀಶ್ ಕುಕ್ಕಿದ. ನಾನು ಪವನ್‌ಗೆ ಇವನು ಇನ್ನೂ ಯಾರ್ಯಾರಿಗೆ ಈ ರೀತಿ ಕೆಟ್ಟ ಮೆಸೇಜ್‌ಗಳನ್ನು ಕಳುಹಿಸಿದ್ದಾನೆಂದು ನೋಡುವಂತೆ ಹೇಳಿದೆ. ಆಗ ಆತನ ಮೊಬೈಲ್ ತೆಗೆದುಕೊಂಡು ಇನ್ನೂ ಅನೇಕ ಚಲನಚಿತ್ರ ನಟಿಯರಿಗೂ ಸಹ ಪೋಟೋ ಕಳುಹಿಸಿ ಮೆಸೇಜ್ ಮಾಡಿರುವ ಬಗ್ಗೆ ಪವನ್ ತೋರಿಸಿದ. ಆಗ ನಾನು ಅವನಿಗೆ ಬೈದು ಕಾಲಿನಿಂದ ಒಂದೆರಡು ಬಾರಿ ಒದ್ದೆ.
- ನನಗೆ ಕರೆ ಮಾಡಿ ನೀವೇನೂ ಟೆನ್ಷನ್ ತಗೋಬೇಡಿ. ಕೆಲಸಕ್ಕೆ ಹೋಗಿ ಎಂದು ನಾಗರಾಜ ಹಾಗೂ ಪ್ರದೂಷ್ ಹೇಳಿದರು. ಅಂತೆಯೇ ನಾನು ಮೈಸೂರಿಗೆ ಹೋದೆ. ಇದಾದ ಸೋಮವಾರ ರಾತ್ರಿ ಸುಮಾರು 9 ಗಂಟೆಗೆ ನಾನು ಮೈಸೂರಿನಲ್ಲಿ ಹೋಟೆಲ್‌ನಲ್ಲಿದ್ದಾಗ ಪ್ರದೂಷ್, ನಾಗರಾಜು ಹಾಗೂ ವಿನಯ್ ಭೇಟಿಯಾದರು. ಆಗ ನನಗೆ ರೇಣುಕಾಸ್ವಾಮಿಗೆ ಧನರಾಜ್ ಕರೆಂಟ್ ಶಾಕ್ ನೀಡಿದ್ದು ಹಾಗೂ ಪವನ್ ಹಲ್ಲೆ ಮಾಡಿದ್ದು, ನಂದೀಶನು ರೇಣುಕಾಸ್ವಾಮಿಯನ್ನು ಎತ್ತಿ ಕುಕ್ಕಿದ ಬಗ್ಗೆ ತಿಳಿಸಿದರು. ನಾವೇ ಯಾರಿಗಾದರೂ ಹಣ ನೀಡಿ, ಫಿಕ್ಸ್ ಮಾಡುತ್ತೇವೆ ಎಂದು ಹೇಳಿದರು. ಮರುದಿನ ಹೋಟೆಲ್‌ಗೆ ಬಂದು ಪೊಲೀಸರು ನನ್ನನ್ನು ಕರೆದುಕೊಂಡು ಬಂದರು.