ಸೋರುತ್ತಿರುವ ಸ್ಲ್ಯಾಬ್‌ ಮೇಲೆ ತಗಡು ಅಳವಡಿಸಿ ದುರಸ್ತಿ!

KannadaprabhaNewsNetwork |  
Published : May 29, 2025, 02:29 AM IST
ಜಲಾವೃತಗೊಂಡಿರುವ ಶಾಲೆ. | Kannada Prabha

ಸಾರಾಂಶ

ಜಿಲ್ಲೆಯಲ್ಲಿ 847 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿವೆ. ಅವುಗಳ ಪೈಕಿ 232 ಶಾಲೆಗಳಲ್ಲಿ ದುರಸ್ತಿ ಮಾಡಬೇಕಿದೆ. ಶೌಚಾಲಯ, ಬಾಗಿಲು, ಕಿಟಕಿಗಳು ಮತ್ತು ವಿದ್ಯುತ್ ಕೆಲಸ ಸೇರಿದಂತೆ ಮೂಲಸೌಕರ್ಯಗಳಲ್ಲಿ ಸಣ್ಣಪುಟ್ಟ ದುರಸ್ತಿಗಳ ಅಗತ್ಯವಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಮಕ್ಕಳ ಬೇಸಿಗೆ ರಜೆ ಮುಗಿಯಲು ಒಂದು ದಿನ ಅಷ್ಟೇ ಬಾಕಿಯುಳಿದಿದೆ. ಸೋರುತ್ತಿರುವ ಶಾಲಾ ಕೊಠಡಿಗಳನ್ನು ತಡೆಯುವುದು ಪ್ರತಿವರ್ಷ ದೊಡ್ಡ ಸವಾಲೇ ಆಗಿರುತ್ತದೆ. ಈ ಸಲ ಸೋರದಂತೆ ತಡೆಯಲು ಸ್ಲ್ಯಾಬ್‌ ಮೇಲೆಯೇ ತಗಡು ಅಳವಡಿಸುವಿಕೆ ನಡೆಸುತ್ತಿದೆ. ಈ ಮೂಲಕ ವಿನೂತನವಾಗಿ ರಿಪೇರಿ ಕೆಲಸ ಮಾಡುತ್ತಿದೆ ಜಿಲ್ಲಾಡಳಿತ. ಈ ರೀತಿ ದುರಸ್ತಿ ಕಾರ್ಯ ಇದೇ ಮೊದಲು ನಡೆಸಲಾಗುತ್ತಿದೆ.

ಏನಿದು?: ಮಳೆಗಾಲದಲ್ಲಿ ಶಾಲಾ ಕೊಠಡಿಗಳು ಸೋರುವುದು ಮಾಮೂಲಿ. ಪ್ರತಿವರ್ಷ ಒಂದಿಷ್ಟು ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ನಡೆಯುವುದು ಸರ್ವೇ ಸಾಮಾನ್ಯ. ಕಿಟಕಿ ಮುರಿದಿರುತ್ತವೆ. ಕಿಟಕಿ ಗ್ಲಾಸ್‌ ಒಡೆದಿರುತ್ತವೆ. ಶಾಲೆಗಳ ಸ್ಲ್ಯಾಬ್‌ ಕಿತ್ತುಹೋಗಿ ಸೋರುತ್ತಿರುತ್ತವೆ. ಇಂಥ ಸಮಯದಲ್ಲಿ ಮಕ್ಕಳಿಗೆ ಪಾಠ ಕಲಿಯುವುದು ಕಷ್ಟ ಎನಿಸಿದರೆ, ಪಾಠ ಹೇಳುವುದು ಶಿಕ್ಷಕರಿಗೆ ದುಸ್ತರವೆನಿಸುತ್ತದೆ.

ಎಷ್ಟು ಕೊಠಡಿಗಳ ದುರಸ್ತಿ: ಜಿಲ್ಲೆಯಲ್ಲಿ 847 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿವೆ. ಅವುಗಳ ಪೈಕಿ 232 ಶಾಲೆಗಳಲ್ಲಿ ದುರಸ್ತಿ ಮಾಡಬೇಕಿದೆ. ಶೌಚಾಲಯ, ಬಾಗಿಲು, ಕಿಟಕಿಗಳು ಮತ್ತು ವಿದ್ಯುತ್ ಕೆಲಸ ಸೇರಿದಂತೆ ಮೂಲಸೌಕರ್ಯಗಳಲ್ಲಿ ಸಣ್ಣಪುಟ್ಟ ದುರಸ್ತಿಗಳ ಅಗತ್ಯವಿದೆ. ಕೆಲ ಶಾಲಾ ಕೊಠಡಿಗಳ ಸ್ಲ್ಯಾಬ್‌ಗಳ ಕೆಲಸವೂ ಬಾಕಿಯಿದೆ. ಈ 232 ಶಾಲೆಗಳ 780 ಕೊಠಡಿಗಳ ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ಈಗಾಗಲೇ 286 ಕೊಠಡಿಗಳ ದುರಸ್ತಿ ಕಾರ್ಯ ಮುಕ್ತಾಯದ ಹಂತಕ್ಕೆ ತಲುಪಿದೆ. ಇನ್ನು 494 ಕೊಠಡಿಗಳ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ. ಈ ಕೊಠಡಿಗಳ ಪೈಕಿ ತುರ್ತು ಹಾಗೂ ಸಣ್ಣ ಪುಟ್ಟ ಕಾಮಗಾರಿ ಹಾಗೂ ಮೇಜರ್‌ ಕಾಮಗಾರಿ ಎಂದು ಎರಡು ಬಗೆ ಮಾಡಲಾಗಿದೆ. ಖುದ್ದು ಡಿಡಿಪಿಐ ಸೇರಿದಂತೆ ಬಿಇಒಗಳು ಸಹ ಎಲ್ಲೆಲ್ಲಿ ಸ್ಲ್ಯಾಬ್‌ ಹಾಳಾಗಿವೆ. ಯಾವ ಶಾಲೆಯ ಕೊಠಡಿಗಳಲ್ಲಿ ಸಣ್ಣ ಪುಟ್ಟ ಕೆಲಸಗಳಿವೆ ಎಂಬುದನ್ನು ಪ್ರವಾಸ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.

ವಿನೂತನ ಪ್ರಯೋಗ: ಮೇಜರ್‌ ದುರಸ್ತಿಯಲ್ಲಿ ಸ್ಲ್ಯಾಬ್ ದುರಸ್ತಿಯೂ ಸೇರಿದೆ. ಸ್ಲ್ಯಾಬ್‌ಗಳ ದುರಸ್ತಿ ಎಷ್ಟೇ ಮಾಡಿದರೂ ಸೋರಿಕೆ ಮಾಮೂಲಿ ಎಂಬಂತೆ ಇದ್ದೇ ಇರುತ್ತದೆ. ಇದೀಗ ಜಿಲ್ಲಾಡಳಿತ ವಿನೂತನ ಪ್ರಯತ್ನಕ್ಕೆ ಕೈಹಾಕಿದೆ. ಸ್ಲ್ಯಾಬ್‌ ಹಾಳಾದ ಶಾಲಾ ಕೊಠಡಿಗಳ ಸ್ಲ್ಯಾಬ್‌ ಮೇಲೆಯೇ ತಗಡುಗಳನ್ನು ಹಾಕಲಾಗುತ್ತಿದೆ. ಇದರಿಂದ ತಗಡು ದಾಟಿ ಮಳೆ ನೀರು ಸ್ಲ್ಯಾಬ್‌ ಮೇಲೆ ಬೀಳುವುದೇ ಇಲ್ಲ. ಕೊಠಡಿ ಸೋರುವುದೂ ಇಲ್ಲ. ಹೀಗೆ ಸ್ಲ್ಯಾಬ್‌ ಹಾಳಾದ ಶಾಲೆಗಳಲ್ಲಿ ದುರಸ್ತಿ ಕಾರ್ಯ ನಡೆದಿದೆ.

ಎಷ್ಟು ಅನುದಾನ?: ಜಿಲ್ಲಾ ಪಂಚಾಯಿತಿ, ಎಂಜಿನಿಯರಿಂಗ್‌ ವಿಭಾಗ ಕೆಲವೊಂದಿಷ್ಟು ಶಾಲೆಗಳ ದುರಸ್ತಿ ಕಾರ್ಯ ಮಾಡುತ್ತಿದ್ದರೆ, ಲೋಕೋಪಯೋಗಿ ಇಲಾಖೆಯೂ ಕೆಲವೊಂದು ಶಾಲೆಗಳ ಕೊಠಡಿಗಳ ದುರಸ್ತಿ ಕಾರ್ಯ ಮಾಡುತ್ತಿದೆ. ಶಾಲಾ ಕೊಠಡಿಗಳ ದುರಸ್ತಿಗಾಗಿ ₹7.57 ಕೋಟಿ ಬಿಡುಗಡೆಯಾಗಿದೆ. ಆ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ಶಾಲೆ ಪ್ರಾರಂಭೋತ್ಸವದೊಳಗೆ ಎಲ್ಲ ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ಪೂರ್ಣವಾಗದಿದ್ದರೂ ಮಳೆಗಾಲದಲ್ಲಿ ಮಕ್ಕಳ ಅಧ್ಯಯನಕ್ಕೆ ಯಾವುದೇ ಬಗೆಯ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂಬ ಇಚ್ಛೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತದ್ದು. ಆ ನಿಟ್ಟಿನಲ್ಲಿ ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ಜತೆಗೆ ಇದೇ ಮೊದಲ ಬಾರಿಗೆ ಸ್ಲ್ಯಾಬ್‌ ಮೇಲೆ ತಗಡು ಅಳವಡಿಸುವ ಮೂಲಕ ವಿನೂತನ ರೀತಿಯಲ್ಲಿ ರಿಪೇರಿ ಮಾಡಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!

ಜಿಲ್ಲೆಯಲ್ಲಿ ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ನಡೆದಿದೆ. 85 ಶಾಲೆಗಳ 286 ಕೊಠಡಿಗಳ ದುರಸ್ತಿ ಕಾರ್ಯ ಮುಕ್ತಾಯದ ಹಂತಕ್ಕೆ ಬಂದಿದೆ. ಇನ್ನು 147 ಶಾಲೆಗಳ 494 ಕೊಠಡಿಗಳ ದುರಸ್ತಿ ಕಾರ್ಯ ನಡೆದಿದೆ. ಸೋರುತ್ತಿರುವ ಸ್ಲ್ಯಾಬ್‌ಗಳ ಮೇಲೆಯೇ ತಗಡು ಅಳವಡಿಸುವಿಕೆಯೂ ನಡೆದಿದೆ. ಈ ರೀತಿ ದುರಸ್ತಿ ಇದೇ ಮೊದಲು ಎಂದು ಡಿಡಿಪಿಐ ಎಸ್‌.ಎಸ್‌. ಕೆಳದಿಮಠ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''