ಜೀವನದಲ್ಲಿ ಹೊಂದಾಣಿಕೆಯ ಜೀವನ ಮುಖ್ಯ: ಸುತ್ತೂರು ಶ್ರೀ

KannadaprabhaNewsNetwork |  
Published : May 29, 2025, 02:29 AM IST
42 | Kannada Prabha

ಸಾರಾಂಶ

ಜೀವನದಲ್ಲಿ ಕೇವಲ ತಪ್ಪುಗಳನ್ನು ಗುರುತಿಸುತ್ತಾ ಹೋದರೆ ಅದು ಮನಸ್ತಾಪಕ್ಕೆ ಕಾರಣವಾಗುತ್ತದೆ. ಒಳ್ಳೆಯ ಅಂಶಗಳನ್ನು ಗುರುತಿಸುತ್ತಾ ಪ್ರೋತ್ಸಾಹಿಸಿದರೆ ಬದುಕು ಸ್ವರ್ಗದಂತಿರುತ್ತದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಬೇಕಾದರೆ ಸಮಚಿತ್ತದಿಂದ ಇರಬೇಕು. ಪ್ರಕೃತಿಯಲ್ಲಿ ಹಾಗೂ ಎಲ್ಲರಲ್ಲೂ ಭಗವಂತನನ್ನು ಕಾಣಬೇಕು. ಜೀವನದಲ್ಲಿ ಅತಿ ಆಸೆಯೇ ದುಃಖಕ್ಕೆ ಕಾರಣವಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಜೀವನದಲ್ಲಿ ಹೊಂದಾಣಿಕೆ ಅತೀ ಮುಖ್ಯ ಎಂದು ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಬಿಳಿಗಿರಿರಂಗನ ಬೆಟ್ಟದಲ್ಲಿ ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶ್ರೀ ಶಿವರಾತ್ರೀಶ್ವರ ಧಾರ್ಮಿಕದತ್ತಿ ಹಾಗೂ ಜೆಎಸ್‌ಎಸ್ ಮಹಾವಿದ್ಯಾಪೀಠದ ವತಿಯಿಂದ ಸಾರ್ವಜನಿಕರಿಗಾಗಿ ಆಯೋಜಿಸಿದ್ದ ಜೀವನೋತ್ಸಾಹ ಶಿಬಿರದ ಸಮಾರೋಪದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ಜೀವನದಲ್ಲಿ ಕೇವಲ ತಪ್ಪುಗಳನ್ನು ಗುರುತಿಸುತ್ತಾ ಹೋದರೆ ಅದು ಮನಸ್ತಾಪಕ್ಕೆ ಕಾರಣವಾಗುತ್ತದೆ. ಒಳ್ಳೆಯ ಅಂಶಗಳನ್ನು ಗುರುತಿಸುತ್ತಾ ಪ್ರೋತ್ಸಾಹಿಸಿದರೆ ಬದುಕು ಸ್ವರ್ಗದಂತಿರುತ್ತದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಬೇಕಾದರೆ ಸಮಚಿತ್ತದಿಂದ ಇರಬೇಕು. ಪ್ರಕೃತಿಯಲ್ಲಿ ಹಾಗೂ ಎಲ್ಲರಲ್ಲೂ ಭಗವಂತನನ್ನು ಕಾಣಬೇಕು. ಜೀವನದಲ್ಲಿ ಅತಿ ಆಸೆಯೇ ದುಃಖಕ್ಕೆ ಕಾರಣವಾಗುತ್ತದೆ. ಕಾಯಕದೊಂದಿಗೆ ಭಗವಂತನ ಸ್ಮರಣೆ ಮಾಡುತ್ತಾ ನೆಮ್ಮದಿಯಿಂದ ಜೀವನ ಸಾಗಿಸಬೇಕು. 50 ವರ್ಷಗಳ ಹಿಂದೆ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳು, ಮಠಾಧಿಪತಿಗಳಿಗಾಗಿಯೇ ಶಿಬಿರ ಪ್ರಾರಂಭಿಸಿದರು. ಶಿಬಿರಗಳು ಮನಸ್ಸಿನ ತೊಳಲಾಟ ನಿಯಂತ್ರಿಸಿ ನೆಮ್ಮದಿ ನೀಡುತ್ತವೆ ಎಂದರು.

ದಕ್ಷಿಣ ವಲಯ ಡಿಐಜಿ ಡಾ.ಎಂ.ಬಿ. ಬೋರಲಿಂಗಯ್ಯ ಮಾತನಾಡಿ, ಸುತ್ತೂರು ಶ್ರೀಮಠವು ಮಾನವಕಲ್ಯಾಣಕ್ಕಾಗಿ ಮಾಡುತ್ತಿರುವ ಸಾಮಾಜಿಕ ಮತ್ತು ಧಾರ್ಮಿಕ ಸೇವೆ ಅನುಪಮವಾದುದು. ಶಿಬಿರಗಳು ಬದುಕಿಗೆ ನವ ಚೈತನ್ಯ ನೀಡುತ್ತವೆ. ಅಸ್ತವ್ಯಸ್ತಗೊಂಡಿರುವ ಆಹಾರ ಪದ್ಧತಿ ಮತ್ತು ಪರಿಸರವನ್ನು ಪುನರುಜ್ಜೀವನಗೊಳಿಸಬೇಕಿದೆ. ಜೀವನದಲ್ಲಿ ಕಷ್ಟ-ನಷ್ಟ ಮತ್ತು ಕಲಹವನ್ನು ಧೈರ್ಯದಿಂದ ಎದುರಿಸಬೇಕು. ಶಿಬಿರಾರ್ಥಿಗಳು ತಾವು ಇಲ್ಲಿ ಪಡೆದ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹೀರಾಲಾಲ್‌, ಮನುಷ್ಯನ ದುರಾಸೆಗಳಿಂದ ಜೀವನ ನಾಶವಾಗುತ್ತಿದೆ. ದುರಾಸೆಯನ್ನು ಬಿಟ್ಟು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕು. ಇಂದು ಪರಿಸರದ ಉಳಿವು ಅತಿ ಅವಶ್ಯಕವಾಗಿದೆ. ಹಬ್ಬ ಹರಿದಿನಗಳಲ್ಲಿ ಇತರ ಆಚರಣೆಗಳ ಜೊತೆಗೆ ಗಿಡ ನೆಟ್ಟು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.

ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಮಾತನಾಡಿ, ಹಾಸ್ಯ ಎನ್ನುವುದು ಮಾನವನ ಜೀವನದ ಒಂದು ಅಮೂಲ್ಯವಾದ ಭಾವನೆ. ಅದಕ್ಕೆ ಮನುಷ್ಯನ ನೋವು, ದುಗುಡಗಳನ್ನು ಮರೆಸುವ ಶಕ್ತಿ ಇದೆ. ಆಧುನಿಕ ಜೀವನದಲ್ಲಿ ಮನುಷ್ಯರು ಮಾನಸಿಕ ಒತ್ತಡದಲ್ಲಿ ಬದುಕುತ್ತಿದ್ದಾರೆ. ಇಂತಹ ಒತ್ತಡಕ್ಕೆ ಹಾಸ್ಯವೇ ಪರಮೌಷಧಿ. ಬಾಹ್ಯ ಸಮೃದ್ಧಿಗಿಂತ ಆಂತರಿಕ ಸಮೃದ್ಧಿ ಬಹಳ ಮುಖ್ಯ. ಹಾಸ್ಯವು ಸ್ನೇಹವನ್ನು ಹೆಚ್ಚಿಸುತ್ತದೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಸುವುದರೊಂದಿಗೆ ಜೀವನವನ್ನು ಸುಂದರವಾಗಿಸುತ್ತದೆ ಎಂದರು.

ಶಿಬಿರಾರ್ಥಿಗಳಾದ ಡಾ.ಎಂ.ಸಿ.ಶಂಕರಪ್ಪ, ಭವಾನಿ ನಟರಾಜ, ಜಯಶ್ರೀ ಗೊಳಸಂಗಿ, ಶಕುಂತಲ ರೆಡ್ಡಿ, ರಾಜೇಶ್ವರಿ ಸ್ವಾಮಿ, ಬಿ.ಕೆ. ಗೊಟ್ಯಾಳ, ಎಂ.ಬಿ. ಸದಾಶಿವಯ್ಯ ಅವರು ಅನಿಸಿಕೆಗಳನ್ನು ಹಂಚಿಕೊಂಡರು.

ಎಎಸ್ಪಿ ಎಂ.ಎನ್. ಶ್ರೀಧರ್, ಡಿವೈಎಸ್ಪಿ ಎಂ. ಧರ್ಮೇಂದ್ರ, ಸರ್ಕಲ್‌ ಇನ್‌ಸ್ಪೆಕ್ಟರ್‌ಆರ್. ಶ್ರೀಕಾಂತ್, ವಿದ್ಯಾಪೀಠದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.

ಎಸ್. ಪುಟ್ಟರಾಜಪ್ಪ ಸ್ವಾಗತಿಸಿದರು. ಜಿ. ಮಲ್ಲೇಶ್ ವರದಿ ಮಂಡಿಸಿದರು. ಎಂ.ಎಸ್. ಶರಣ್ ವಂದಿಸಿದರು. ಶಶಿಕಲಾ ರುದ್ರಪ್ರಸಾದ್‌ ಮತ್ತು ತಂಡದವರು ಪ್ರಾರ್ಥಿಸಿದರು. ಎಚ್.ಎಂ. ನಾಗಭೂಷಣ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''