ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಭದ್ರಾ ಜಲಾಶಯದ ತಳಮಟ್ಟದ ಗೇಟ್‌ನಲ್ಲಿ ಉಂಟಾಗಿದ್ದ ತಾಂತ್ರಿಕ ದೋಷ ಸರಿಪಡಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಅಚ್ಚುಕಟ್ಟು ಪ್ರದೇಶದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.ಭದ್ರಾ ಜಲಾಶಯದ ಪವರ್ ಹೌಸ್ ಪಕ್ಕದಲ್ಲಿ ಇದ್ದ ರಿವರ್ ಗೇಟ್‌ಗಳಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು. ಸುಮಾರು 5 ಇಂಚಿನಷ್ಟು ತೆರೆದುಕೊಂಡಿದ್ದವು. ಇದರಿಂದ ಸುಮಾರು 1500 ರಿಂದ 2 ಸಾವಿರ ಕ್ಯೂಸೆಕ್ಸ್ ನೀರು ಹೊಳೆಗೆ ಹರಿದು ಹೋಗುತ್ತಿತ್ತು. ವಿಷಯ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಗೇಟ್ ಬಂದ್ ಮಾಡುವ ಪ್ರಕ್ರಿಯೆ ಆರಂಭಿಸಲಾಗಿತ್ತು. ನಿರಂತರ ಶ್ರಮದಿಂದ ಗೇಟ್ ಬಂದ್ ಮಾಡಲಾಗಿದ್ದು, ನೀರು ಪೋಲು ತಡೆಯಲಾಗಿದೆ.
ಮಧ್ಯ ಕರ್ನಾಟಕದ ಜೀವನಾಡಿಯಾದ ಭದ್ರಾ ಡ್ಯಾಮ್‌ನಿಂದ ಅಪಾರ ಪ್ರಮಾಣದಲ್ಲಿ ನೀರು ನದಿಗೆ ಸೋರಿಕೆಯಾಗುತ್ತಿತ್ತು. ಇದರಿಂದ ಆತಂಕಗೊಂಡ ಅಚ್ಚುಕಟ್ಟು ಪ್ರದೇಶದ ರೈತರು ಎರಡು ದಿನದ ಹಿಂದೆ ಕಾಡ್ ಅಧ್ಯಕ್ಷರ ಸಮ್ಮುಖದಲ್ಲಿ ನೀರಾವರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.ಈ ಬಾರಿ ಕಳೆದ ವರ್ಷಕ್ಕಿಂತಲೂ ಕನಿಷ್ಟ ನೀರು ಸಂಗ್ರಹ ಇರುವ ಸಂದರ್ಭದಲ್ಲಿ ರೈತರು ಪ್ರಶ್ನಿಸಿದ್ದರು. ಇದಕ್ಕೆ ಉತ್ತರ ನೀಡಲಾಗದೆ ಡ್ಯಾಂನ ಅಧಿಕಾರಿಗಳು ಮಳೆಗಾಲದಲ್ಲಿ ಗೇಟ್‌ಗಳ ರಿಪೇರಿ ಕಾರ್ಯಕ್ಕೆ ಮುಂದಾಗಿದ್ದರು. ಸ್ಲೀವ್ಸ್ ಗೇಟ್ ರಿಪೇರಿ ಮಾಡುವಾಗ ಗೇಟ್ ಅನ್ನು ಮೇಲಕ್ಕೆ ಎತ್ತಿದ ಸಂದರ್ಭದಲ್ಲಿ ಮತ್ತೆ ಪುನಃ ಅದನ್ನು ಸ್ಥಳಕ್ಕೆ ಸೇರಿಸಲು ಸಾಧ್ಯವಾಗದೆ ಅಧಿಕಾರಿಗಳು ಕೈ ಚೆಲ್ಲಿದರು. ಹೀಗಾಗಿ ಜಲಾಶಯದಿಂದ ಹಿಂದಿನಲ್ಲಿ ಸಂಗ್ರಹವಾಗುತ್ತಿದ್ದ ನೀರು ಸಂಪೂರ್ಣವಾಗಿ ಸ್ಲೀವ್ಸ್ ಗೇಟ್‌ನಿಂದ ನದಿಗೆ ಸೋರಿಕೆಯಾಗುತ್ತಿತ್ತು. ಇದರಿಂದ ಅಧಿಕಾರಿಗಳು ಸ್ಲೀವ್ಸ್ ಗೇಟ್ ರಿಪೇರಿಗೆ ಮುಂದಾದರೂ ಕೂಡ ತಾಂತ್ರಿಕ ತಜ್ಞರ ಸಲಹೆ ಮತ್ತು ಕೊರತೆ ಎದ್ದು ಕಾಣುತ್ತಿತ್ತು.
ಹಾಸನದಲ್ಲಿ ಅಧಿಕಾರಿಗಳು ತಕ್ಷಣ ನೀರನ್ನು ನಿಲ್ಲಿಸುವ ಭರವಸೆ ನೀಡಿದ್ದರು. ಕೂಡ ಶೇ.50ರಷ್ಟು ನೀರು ಡ್ಯಾಂನಿಂದ ನದಿಗೆ ಪೋಲಾಗುತ್ತಿತ್ತು. ಆದರೆ, ಕಳೆದ 48 ಗಂಟೆಗಳ ನಿರಂತರ ಕಾರ್ಯಾಚರಣೆಯಿಂದ ನೀರು ಈಗ ಸಂಪೂರ್ಣ ಸ್ಥಗಿತಗೊಂಡಿದೆ. ಗುತ್ತಿಗೆದಾರ ವೇದಮೂರ್ತಿ ಹಾಗೂ ಅವರ ಅನುಭವಿ ತಾಂತ್ರಿಕ ತಂಡದಿಂದ ಕಳೆದ 48 ಗಂಟೆಗಳ ಕಾಲ ಸ್ಲೀವ್ಸ್ ಗೇಟ್ ರಿಪೇರಿ ಕಾರ್ಯವನ್ನು ದುರಸ್ತಿಗುಳಿಸುವಂತಹ ಕೆಲಸ ನಡೆದಿದೆ. ಹಗಲು ರಾತ್ರಿ ಈ ನಿರಂತರ ಶ್ರಮದಿಂದ ಈಗ ಸ್ಲೀವ್ಸ್ ಗೇಟ್‌ನಿಂದ ನೀರು ಹೊರಗೆ ತಪ್ಪಿದಂತಾಗಿದೆ. ನೀರು ಸೋರಿಕೆ ಆಗುತ್ತಿರುವುದಕ್ಕೆ ಸರ್ಕಾರ ಕೂಡ ಅಧಿಕಾರಿಗಳ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.ಇನ್ನು ಎರಡು ದಿನದಲ್ಲಿ ತಡೆಗಟ್ಟದೆ ಹೋದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ತಲೆದಂಡವಾಗಬೇಕಿತ್ತು. ಆದರೆ, ಗುತ್ತಿಗೆದಾರ ಹಾಗೂ ದಿನಗೂಲಿ ನೌಕರರ ಅನುಭವಿ ತಂಡ ಕಾರ್ಯಾಚರಣೆಯಿಂದ ನೀರು ಸೋರಿಕೆ ತಪ್ಪಿದೆ.
ಅಚ್ಚುಕಟ್ಟು ರೈತರ ಆತಂಕ ದೂರ:ಮಳೆಗಾಲಕ್ಕೂ ಮುನ್ನ ಜಲಾಶಯಗಳ ಗೇಟ್‌ಗಳ ನಿರ್ವಹಣೆ, ತಾಂತ್ರಿಕ ದೋಷಗಳ ಪರಿಶೀಲನೆ ನಡೆಸಲಾಗುತ್ತದೆ. ಆದರೆ ಭದ್ರಾ ಜಲಾಶಯದಲ್ಲಿ ಅಧಿಕಾರಿಗಳು ಮಳೆ ಶುರುವಾಗಿ, ಒಳ ಹರಿವು ಆರಂಭವಾದ ಮೇಲೆ ನಿರ್ಹವಣೆ ಆರಂಭಿಸಿದ್ದರು. ಈ ವೇಳೆ ರಿವರ್ ಗೇಟ್‌ನಲ್ಲಿ (ಸ್ಲೂಯಿಸ್ ಗೇಟ್) ತಾಂತ್ರಿಕ ಸಮಸ್ಯೆ ಉಂಟಾಗಿ ಮುಚ್ಚಲಾಗದ ಸ್ಥಿತಿಗೆ ತಲುಪಿತ್ತು. ಇದರಿಂದ ಜಲಾಶಯದಲ್ಲಿ ಸಂಗ್ರಹವಾಗಿದ್ದ ನೀರು ಅನಾಯಾಸವಾಗಿ ಹೊಳೆಗೆ ಹರಿದು ಹೋಗುತ್ತಿತ್ತು.
ವಿಚಾರ ತಿಳಿಯುತ್ತಲೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಕೆ.ಪಿ.ಅಂಶುಕುಮಾರ್ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಚ್ಚುಕಟ್ಟು ಭಾಗದ ರೈತರು ಕೂಡ ಡ್ಯಾಂಗೆ ಬಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.ಕಾಯಂಗೊಳಿಸಲು ದಿನಗೂಲಿ ನೌಕರರ ಮನವಿ:
ದಿನಗೂಲಿ ನೌಕರರು ಈ ಒಂದು ಸಂದರ್ಭದಲ್ಲಿ ನಮ್ಮ ಅನುಭವ ನೋಡಿ ನಮ್ಮನ್ನು ಕಾಯಂ ಗೊಳಿಸಬೇಕು ಎಂದು ಮನವಿ ಕೂಡ ಮಾಡಿದ್ದಾರೆ. ಹಲವು ವರ್ಷಗಳಿಂದ ಡ್ಯಾಮ್‌ನಲ್ಲಿಯೇ ಕೆಲಸ ಮಾಡುತ್ತಿದ್ದರು ನಮ್ಮನ್ನು ಕಾಯಂ ಗೊಳಿಸದೆ ದಿನಗೂಲಿ ನೌಕರರನ್ನಾಗಿ ನೋಡಲಾಗುತ್ತಿದೆ. ನಮ್ಮ ಅನುಭವವನ್ನು ಒರೆಗೆ ಹಚ್ಚಿ ಬಂದ್ ಮಾಡಿದ್ದೇವೆ. ಈಗಲಾದರೂ ನಮ್ಮ ಅನುಭವ ನೋಡಿ ಕಾಯಂ ಗೊಳಿಸಬೇಕೆಂದು ದಿನಗೂಲಿ ನೌಕರರು ಬೇಡಿಕೆ ಮುಂದಿಟ್ಟಿದ್ದಾರೆ..