ಪದೇ, ಪದೇ ಅಪರಾಧ ಕೃತ್ಯ: 5 ಜನ ಜಿಲ್ಲೆಯಿಂದ ಗಡಿಪಾರು!

KannadaprabhaNewsNetwork |  
Published : May 15, 2026, 02:00 AM IST
ಗದಗ ಎಸ್ಪಿ ರೋಹನ್ ಜಗದೀಶ.  | Kannada Prabha

ಸಾರಾಂಶ

ಕೊಲೆ, ಕೊಲೆ ಯತ್ನ, ಹಲ್ಲೆ, ಗಾಂಜಾ ಮಾರಾಟ ಸೇರಿದಂತೆ ಗಂಭೀರ ಪ್ರಕರಣಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕರಲ್ಲಿ ಭೀತಿಯ ವಾತಾವರಣ ನಿರ್ಮಿಸಿದ್ದವರ ವಿರುದ್ಧ ಈ ಕಠಿಣ ಕ್ರಮ ಜಾರಿಯಾಗಿದೆ.

ವಿಶೇಷ ವರದಿ

ಗದಗ: ಜಿಲ್ಲೆಯಲ್ಲಿನ ನಿರಂತರ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಜಿಲ್ಲಾ ಪೊಲೀಸ್ ಇಲಾಖೆ ಗಂಭೀರ ಕ್ರಮ ಕೈಗೊಂಡಿದ್ದು, ಅಪರಾಧ ಹಿನ್ನೆಲೆಯುಳ್ಳ 5 ಜನರನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಮಹತ್ವದ ಆದೇಶ ಹೊರಡಿಸಿದೆ.

ಕೊಲೆ, ಕೊಲೆ ಯತ್ನ, ಹಲ್ಲೆ, ಗಾಂಜಾ ಮಾರಾಟ ಸೇರಿದಂತೆ ಗಂಭೀರ ಪ್ರಕರಣಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕರಲ್ಲಿ ಭೀತಿಯ ವಾತಾವರಣ ನಿರ್ಮಿಸಿದ್ದವರ ವಿರುದ್ಧ ಈ ಕಠಿಣ ಕ್ರಮ ಜಾರಿಯಾಗಿದೆ.

ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರಂತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವದರ ಬಗ್ಗೆ ಬಂದ ಮಾಹಿತಿಯ ಆಧಾರದ ಮೇಲೆ, ಅಧಿಕಾರಿಗಳು ಸೂಕ್ಷ್ಮ ಪರಿಶೀಲನೆ ನಡೆಸಿ, ಸಮಾಜದ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟುಮಾಡುತ್ತಿದ್ದ ಆರೋಪಿಗಳನ್ನು ಗುರುತಿಸಿದ್ದಾರೆ. ತಮ್ಮ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿದ್ದರೂ, ತಮ್ಮ ನಡೆ-ನುಡಿಯಲ್ಲಿ ಯಾವುದೇ ಬದಲಾವಣೆ ತರುವ ಲಕ್ಷಣ ಕಾಣಿಸದ ಹಿನ್ನೆಲೆಯಲ್ಲಿ ಗಡಿಪಾರು ಮಾಡಲಾಗಿದೆ.

ಗಡಿಪಾರುಗೊಂಡವರಲ್ಲಿ ದವನಪ್ಪ ಪ್ರಮುಖನಾಗಿದ್ದು, ಈತನ ವಿರುದ್ಧ ಗಲಭೆ, ಹಲ್ಲೆ, ಗಂಭೀರ ಗಾಯಗೊಳಿಸುವುದು, ಮನೆಗೆ ನುಗ್ಗಿ ದಾಳಿ ನಡೆಸುವುದು, ಜೀವ ಬೆದರಿಕೆ ಸೇರಿದಂತೆ ಹಲವು ಭಾರತೀಯ ದಂಡ ಸಂಹಿತೆ ಕಲಂಗಳು ಹಾಗೂ ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ. 2017ರಿಂದ 2025ರ ವರೆಗೆ ಹಲವು ಬಾರಿ ಕಾನೂನು ಉಲ್ಲಂಘನೆ ಮಾಡಿರುವ ಈತ, ಸಮಾಜದ ಶಾಂತಿಗೆ ನಿರಂತರ ಧಕ್ಕೆ ತಂದಿದ್ದಾನೆ.

ದಾವಲಸಾಬ್ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಗಾಂಜಾ ಸಂಬಂಧಿತ ಪ್ರಕರಣಗಳು ದಾಖಲಾಗಿದ್ದು, ಅಕ್ರಮ ಮಾದಕ ವಸ್ತು ವ್ಯವಹಾರದಲ್ಲಿ ತೊಡಗಿದ್ದ ಆರೋಪ ಇದೆ. ಈತನ ವಿರುದ್ಧ 2021ರಿಂದ 2024ರ ವರೆಗೆ ಅನೇಕ ಪ್ರಕರಣಗಳು ದಾಖಲಾಗಿರುವುದು ಪೊಲೀಸ್ ದಾಖಲೆಗಳಲ್ಲಿ ಉಲ್ಲೇಖವಾಗಿದೆ. ಮುಸ್ತಾಕ್ ಎಂಬಾತನ ವಿರುದ್ಧ ಗದಗ ನಗರ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಹಲ್ಲೆ, ದೌರ್ಜನ್ಯ, ಕಾನೂನು ಉಲ್ಲಂಘನೆ ಹಾಗೂ ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಪ್ರಕರಣಗಳು ಸೇರಿವೆ. 2024ರಿಂದ 2026ರ ವರೆಗೆ ಈತನ ಅಪರಾಧ ಚಟುವಟಿಕೆಗಳು ಹೆಚ್ಚಾಗಿವೆ. ಅಭಿಷೇಕ್ ಮತ್ತು ಸಾಹಿಲ್ ವಿರುದ್ಧವೂ ಶಾಂತಿಭಂಗ, ದೌರ್ಜನ್ಯ, ಹಾಗೂ ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ಉಂಟುಮಾಡುವ ಪ್ರಕರಣಗಳು ದಾಖಲಾಗಿದ್ದು, ಇವರು ಸಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಕೂಡಾ ಸಾಬೀತಾಗಿದೆ. ಶಾಂತಿ ಸ್ಥಾಪನೆಯ ಉದ್ದೇಶ

ಪೊಲೀಸ್ ಇಲಾಖೆ ಮಾಹಿತಿಯ ಪ್ರಕಾರ, ಇಂತಹ ಅಪರಾಧಿಗಳನ್ನು ಜಿಲ್ಲೆಯಿಂದ ದೂರವಿಟ್ಟು ಸಮಾಜದಲ್ಲಿ ಶಾಂತಿ ಸ್ಥಾಪಿಸುವುದು ಮುಖ್ಯ ಉದ್ದೇಶವಾಗಿದ್ದು, ಮುಂದಿನ ದಿನಗಳಲ್ಲಿಯೂ ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿರುವುದು ಸ್ವಾಗತಾರ್ಹ. ಗಡಿಪಾರು ಕೇವಲ ಕ್ರಮವಲ್ಲ. ಇದು ಸಮಾಜದಲ್ಲಿ ಭದ್ರತೆ, ವಿಶ್ವಾಸ ಮತ್ತು ಕಾನೂನು ಪ್ರಾಬಲ್ಯವನ್ನು ತಿಳಿಸುವುದು ಇಲಾಖೆಯ ಮಹಾದಾಸೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ನಿರ್ದಾಕ್ಷಿಣ್ಯ ಕ್ರಮ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಭಂಗಪಡಿಸುವ ಯಾವುದೇ ವ್ಯಕ್ತಿಯನ್ನು ಸಹಿಸಲಾಗುವುದಿಲ್ಲ. ಅಪರಾಧ ಹಿನ್ನೆಲೆಯುಳ್ಳವರ ಮೇಲೆ ಈಗಾಗಲೇ ಗಡಿಪಾರು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಮುಂದೆಯೂ ಸಾರ್ವಜನಿಕರ ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ. ಕಾನೂನು ಮೀರಿ ನಡೆದುಕೊಳ್ಳುವವರು ಜಿಲ್ಲೆಯಲ್ಲಿ ತಂಗಲು ಅವಕಾಶ ಇಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿಕೊಳ್ಳಬೇಕು ಎಂದು ಎಸ್ಪಿ ರೋಹನ್ ಜಗದೀಶ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾನತೆಯ ಹೆಸರಿನಲ್ಲಿ ಮಹಿಳೆಯರ ಶೋಷಣೆ
ಸಿಐಟಿಯು ಕಾರ್ಯಕರ್ತರಿಂದ ಪ್ರತಿಭಟನೆ