ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಕನ್ನಡದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಕನ್ನಡ ಗೊತ್ತಿಲ್ಲದವರು ಶಿಕ್ಷಣ ಮಂತ್ರಿ. ಇಂಥವರು ಸಿದ್ದರಾಮಯ್ಯ ಸರ್ಕಾರಕ್ಕೆ ಕಪ್ಪುಚುಕ್ಕೆ ಆಗಿದ್ದಾರೆ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಬೇಸರ ವ್ಯಕ್ತಪಡಿಸಿದರು.ನವನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಾಗಲಕೋಟೆ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಸಚಿವರನ್ನು ಬದಲಾಯಿಸಲು ನೀವು ಹೇಳಬೇಕೆಂದು ವೇದಿಕೆ ಮೇಲಿದ್ದ ಸ್ಥಳೀಯ ಶಾಸಕ ಎಚ್.ವೈ. ಮೇಟಿಗೆ ಮನವಿ ಮಾಡಿದರು.
ತನ್ನ ತಲೆಗೂದಲು ಬಗ್ಗೆ ಕೇಳಿದರೆ ಮೋದಿಯ ಗಡ್ಡದ ಬಗ್ಗೆ ಮಧು ಬಂಗಾರಪ್ಪ ಮಾತಾಡ್ತಾರೆ. ತಲೆಗೂದಲು, ಗಡ್ಡದ ವ್ಯತ್ಯಾಸ ಅರಿಯುವಷ್ಟು ಸಾಮಾನ್ಯ ಪ್ರಜ್ಞೆ ಅವರಿಗಿಲ್ಲ ಎಂದು ಹರಿಹಾಯ್ದರು.ಸಚಿವರಿಗೆ ಛೀಮಾರಿ: ಸಮ್ಮೇಳನಕ್ಕೆ ಬಾರದ ಸಚಿವರು, ಶಾಸಕರಿಗೆ ವೇದಿಕೆಯಲ್ಲಿ ಕುಂ.ವೀರಭದ್ರಪ್ಪ ಛೀಮಾರಿ ಹಾಕಿದರು. ಕನ್ನಡದ ಕೆಲಸಕ್ಕೆ ಬಾರದ ದಟ್ಟದಾರಿದ್ರ್ಯ ಮನಸ್ಥಿತಿಯ ಜನಪ್ರತಿನಿಧಿಗಳು ಇರುವುದು ಅಸಹ್ಯಕರ ಎಂದು ವಾಗ್ದಾಳಿ ನಡೆಸಿದರು.
ಬಸವಣ್ಣನವರು ಜನ್ಮತಾಳಿದ ವಿಜಯಪುರ-ಬಾಗಲಕೋಟೆ ಜಿಲ್ಲೆಗಳನ್ನು ಅವರ ಹೆಸರಿನಲ್ಲಿ ಮರುನಾಮಕರಣ ಮಾಡಿ ಗೌರವಿಸಬೇಕು. ಬಸವಣ್ಣನವರ ಜನ್ಮಭೂಮಿ ವಿಜಯಪುರ ಜಿಲ್ಲೆಯಲ್ಲಿದ್ದು, ಐಕ್ಯಭೂಮಿ ಬಾಗಲಕೋಟೆ ಜಿಲ್ಲೆಯಲ್ಲಿದೆ. ಹೀಗಾಗಿ ಈ ಜಿಲ್ಲೆಗಳಿಗೆ ಬಸವಣ್ಣನವರ ಹೆಸರಿನಲ್ಲಿ ಮರು ನಾಮಕರಣ ಆಗಬೇಕೆಂದು ಒತ್ತಾಯಿಸಿದರು.ಕನ್ನಡ ಎಂದರೆ ಶ್ರಮ, ಪ್ರತಿಭೆ. ಯುವ ಸಮೂಹದಲ್ಲಿನ ಇಂಗ್ಲಿಷ್ ವ್ಯಾಮೋಹ ಕಡಿಮೆ ಆಗಬೇಕು. ಯುರೋಪ್ ದೇಶದ 32 ರಾಷ್ಟ್ರಗಳಲ್ಲೇ ಇಂಗ್ಲಿಷ್ ಬಳಕೆಯಲ್ಲಿಲ್ಲ. ಅದು ಇರೋದು ಲಂಡನ್‌ನಲ್ಲಿ ಮಾತ್ರ. ಇಂಗ್ಲಿಷ್ ಬಗ್ಗೆ ವ್ಯಾಮೋಹ ಸೃಷ್ಟಿಸುವ ಮೂಲಕ ಶಿಕ್ಷಣ ಅಪಾಯ ತಂದೊಡ್ಡುತ್ತಿದೆ. ಮಕ್ಕಳಿಲ್ಲ ಎಂದ್ಮೇಲೆ ಕನ್ನಡ ಶಾಲೆ ಮುಚ್ಚುವ ದಟ್ಟ ದರಿದ್ರ ಸರ್ಕಾರವಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಮಾತನಾಡಿ, ಬಳಸಿದಷ್ಟು ಕನ್ನಡ ಬೆಳೆಯುತ್ತದೆ. ಬದುಕು, ಅನ್ನಕ್ಕಾಗಿ ಕನ್ನಡದ ಬಗ್ಗೆ ತಿರಸ್ಕಾರ ಭಾವ ಹೊಂದಿರುವ ಸ್ಥಿತಿಯನ್ನು ಗಮನಸಿದ್ದೇವೆ. ಕನ್ನಡ ಸಾಹಿತ್ಯ ಓದಿದಷ್ಟು ಅಮೃತ ನೀಡುತ್ತದೆ. ಅದು ಯಾರಿಗೂ ನಿರಾಸೆ ಮೂಡಿಸಿಲ್ಲ ಎಂದರು.ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಮ್ಮೇಳನಾಧ್ಯಕ್ಷರಾದ ಡಾ.ತಾತಾಸಾಹೇಬ ಬಾಂಗಿ, ಶಾಸಕ ಎಚ್.ವೈ. ಮೇಟಿ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ಕಸಾಪ ಕೇಂದ್ರ ಗೌರವ ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜು, ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಚಂದ್ರಶೇಖರ ಕಾಳನ್ನವರ, ತಾಲೂಕಾಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ, ನಾಗರಾಜ ಹದ್ಲಿ ಅನೇಕರು ಇದ್ದರು.