ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ನೇತೃತ್ವದಲ್ಲಿ ಜರುಗಿದ ಜಿಲ್ಲಾ ಸಲಹಾ ಸಮಿತಿ ಹಾಗೂ ಪರಿಶೀಲನಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೂನ್ ಮೊದಲ ವಾರದಲ್ಲಿ ನಡೆಯಲಿರುವ ಮುಂದಿನ ಪ್ರಗತಿ ಪರಿಶೀಲನಾ ಸಭೆಯೊಳಗೆ ಈ ಗುರಿ ತಲುಪದಿದ್ದರೆ, ಈ ಬಗ್ಗೆ ನಡವಳಿಯಲ್ಲಿ ದಾಖಲಿಸಿ ಆರ್‌ಬಿಐಗೆ ವರದಿ ಸಲ್ಲಿಸುವುದಾಗಿ ಎಚ್ಚರಿಸಿದರು.
ಬ್ಯಾಂಕುಗಳಲ್ಲಿ 100 ದಿನಗಳ ಕಾಲ ವಿಶೇಷ ಅಭಿಯಾನ ಹಮ್ಮಿಕೊಳ್ಳವ ಮೂಲಕ ಸಾಮಾಜಿಕ ಭದ್ರತಾ ಯೋಜನೆಗಳಾದ ಪಿಎಂಜೆಜೆಬಿವೈ (ಪ್ರಧಾನಮಂತ್ರಿ ಜೀವನ್ ಜ್ಯೋತಿ ಭಿಮಾ ಯೋಜನೆ), ಪಿಎಂಎಸ್ ಬಿವೈ (ಪ್ರಧಾನಮಂತ್ರಿ ಸುರಕ್ಷಾ ಭಿಮಾ ಯೋಜನೆ) ಮತ್ತು ಎಪಿವೈ (ಅಟಲ್ ಪೆನ್ಷನ್ ಯೋಜನೆ) ನೊಂದಣಿಗೆ ಶ್ರಮ ವಹಿಸುವಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಸೂಚಿಸಿದರು.ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ನೊಂದಣಿಯಾದವರ ಪ್ರಮಾಣ ಅತ್ಯಂತ ಕಡಿಮೆಯಿದೆ. ಬ್ಯಾಂಕ್‍ಗಳ ನಿರ್ಲಕ್ಷ್ಯ ಹಾಗೂ ವಿಳಂಬ ಧೋರಣೆಯ ಕ್ರಮಗಳಿಂದಾಗಿ ಕಡಿಮೆ ಪ್ರಮಾಣದ ನೊಂದಣಿಯಾಗಿದೆ. ಪ್ರಧಾನಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆಯಡಿ 18 ರಿಂದ 50 ವಯಸ್ಸಿನವರೆಗಿನ ನಾಗರಿಕರು ರು.436 ಮತ್ತು ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆಯಡಿ 18 ರಿಂದ 70 ವಯಸ್ಸಿನವರೆಗಿನ ನಾಗರೀಕರು ರು.20/- ಪ್ರೀಮಿಯಂ ಹಣವನ್ನು ವಾರ್ಷಿಕವಾಗಿ ಪಾವತಿಸಿದರೆ, ಯಾವುದೇ ರೀತಿಯ ಮರಣ ಸಂಭವಿಸಿದರೂ ಅವರ ವಾರಸುದಾರಿಗೆ ಪ್ರತಿ ಯೋಜನೆಯಡಿ ರು.2 ಲಕ್ಷದವರೆಗೆ ವಿಮೆ ಸೌಲಭ್ಯ ದೊರೆಯಲಿದೆ. ಈ ಬಗ್ಗೆ ಗ್ರಾಹಕರ ಮನವೊಲಿಸಿ ನೊಂದಣಿ ಮಾಡಿಸುವಂತೆ ಡಾ.ಎಸ್.ಆಕಾಶ್ ಹೇಳಿದರು.
ಸಾಮಾಜಿಕ ಭದ್ರತಾ ಯೋಜನೆಗಳಿಡಿ 21,865 ನೊಂದಣಿ ಮಾಡಿ ಪ್ರಥಮ ಸ್ಥಾನ ಪಡೆದ ಕರ್ನಾಟಕ ಗ್ರಾಮೀಣ ಬ್ಯಾಂಕ್, 11,392 ನೊಂದಣಿ ಮಾಡಿದ ಕೆನರಾ ಬ್ಯಾಂಕ್ ದ್ವಿತೀಯ ಸ್ಥಾನ ಪಡೆದಿದ್ದಕ್ಕಾಗಿ ಈ ಸಂದರ್ಭದಲ್ಲಿ ಜಿಪಂ.ಸಿಇಓ ಡಾ.ಆಕಾಶ್ ಅಭಿನಂದನೆ ಸಲ್ಲಿಸಿದರು. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕಾರ್ಯಾಚರಿಸುತ್ತಿರುವ ಕೆನರಾ ಬ್ಯಾಂಕ್‍ನ ಆರು ಶಾಖೆಗಳನ್ನು ಮೂಲಭೂತ ಸೌಕರ್ಯಗಳ ಕೊರತೆಯ ನೆಪದಲ್ಲಿ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ತಡೆಹಿಡಿಯುವಂತೆ ಜಿಪಂ ಸಿಇಒ ಡಾ.ಎಸ್.ಆಕಾಶ್ ಸಭೆಯಲ್ಲಿ ಸೂಚನೆ ನೀಡಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ರಾಘವೇಂದ್ರ.ಎಂ, ಆರ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕ ಅರುಣ್ ಕುಮಾರ್, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ವಿನ್ನತ್, ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕಿ ಸುನಿತಾ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ಜಯಲಕ್ಷ್ಮೀ, ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಜಗನಾಥ್ ಸೇರಿದಂತೆ ಬ್ಯಾಂಕುಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.