ವಿವಿಧ ವಲಯಗಳ ಸೂಚ್ಯಂಕ ಆಧರಿಸಿ ಸರ್ಕಾರಕ್ಕೆ ವರದಿ: ಪ್ರೊ. ಎಂ. ಗೋವಿಂದ ರಾವ್

KannadaprabhaNewsNetwork |  
Published : Jun 18, 2025, 11:49 PM IST
ಬಳ್ಳಾರಿ ಡಿಸಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತ ಸಭೆಯಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಪ್ರೊ.ಎಂ.ಗೋವಿಂದ ರಾವ್ ಅವರು ಭಾಗವಹಿಸಿದ್ದರು.  | Kannada Prabha

ಸಾರಾಂಶ

ಜಿಲ್ಲೆಯಲ್ಲಿ ವಿವಿಧ ವಲಯಗಳ ಸೂಚ್ಯಂಕ ಆಧರಿಸಿ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಪರಾಮರ್ಶಿಸಿ ಸರ್ಕಾರಕ್ಕೆ ವರದಿ ನೀಡಲಾಗುವುದು.

ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಜಿಲ್ಲೆಯಲ್ಲಿ ಯಾವ ರೀತಿಯ ಬೆಳವಣಿಗೆ ಬದಲಾವಣೆಯಾಗಿದೆ. ಇನ್ನೂ ಏನೇನು ಅಭಿವೃದ್ಧಿಯಾಗಬೇಕಿದೆ ಎಂಬುದನ್ನು ಗುರುತಿಸಿ ಜಿಲ್ಲೆಯಲ್ಲಿ ವಿವಿಧ ವಲಯಗಳ ಸೂಚ್ಯಂಕ ಆಧರಿಸಿ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಪರಾಮರ್ಶಿಸಿ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಪ್ರೊ. ಎಂ. ಗೋವಿಂದ ರಾವ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತು ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಡಾ. ಡಿ.ಎಂ. ನಂಜುಂಡಪ್ಪ 2002ರ ವರದಿಯಲ್ಲಿ ಅಂದಿನ 176 ತಾಲೂಕುಗಳನ್ನು ಹಿಂದುಳಿದ, ಅತಿ ಹಿಂದುಳಿದ, ಅತ್ಯಂತ ಹಿಂದುಳಿದ ಹಾಗೂ ಅಭಿವೃದ್ದಿ ಹೊಂದಿದ ತಾಲೂಕುಗಳೆಂದು 4 ವರ್ಗದಲ್ಲಿ ವರ್ಗೀಕರಿಸಿ ಅದಕ್ಕನುಗುಣವಾಗಿ ಅನುದಾನ ಹಂಚಿಕೆಗೆ ಶಿಫಾರಸ್ಸು ಮಾಡಿದ್ದರು. ಇದರನ್ವಯ ಗುರುತಿಸಲಾದ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಸರ್ಕಾರ ₹31 ಸಾವಿರ ಕೋಟಿ ವೆಚ್ಚ ಮಾಡಿದೆ ಎಂದರು.

ಅಸಮತೋಲನ ಹೆಚ್ಚಾದಾಗ ಪ್ರದೇಶಗಳು ಹಿಂದುಳಿಯಲಿವೆ. ನಂಜುಂಡಪ್ಪ ವರದಿ ಅನುಷ್ಠಾನದಿಂದ ಹೇಗೆ ಅಭಿವೃದ್ಧಿಯಾಗಿದೆ ಎಂಬುದನ್ನು ಸೂಚ್ಯಂಕದ ಅಧಾರದ ಮೇಲೆ ನೋಡಲಾಗುತ್ತದೆ. ಹಿಂದುಳಿದಿದ್ದಲ್ಲಿ ಯಾವ ಕಾರಣಕ್ಕಾಗಿ ಯಾವ ಕ್ಷೇತ್ರದಲ್ಲಿ ಹಿಂದೆ ಉಳಿದಿದೆ ಎಂಬುದನ್ನು ಸಮಿತಿಯು ಪರಾಮರ್ಶಿಸಲಿದೆ. ತಲಾ ಆದಾಯ, ಶಿಕ್ಷಣ, ಆರೋಗ್ಯ ಇತರ ಕ್ಷೇತ್ರಗಳಲ್ಲಿನ ಸುಧಾರಣೆ, ಬೆಳವಣಿಗೆಯ ಬಗ್ಗೆಯು ಸಮಿತಿಯು ಪರಿಶೀಲಿಸಲಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ 2024ರ ಸೆಪ್ಟಂಬರ್‌ನಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಆರ್ಥಿಕ ತಜ್ಞರನ್ನೊಳಗೊಂಡ ಸಮಿತಿ ರಚಿಸಿದ್ದು, ಈ ಸಮಿತಿಯು ಕೃಷಿ, ಕೈಗಾರಿಕೆ, ಆರ್ಥಿಕ ಮೂಲ ಸೌಲಭ್ಯ, ಸಾಮಾಜಿಕ ಸೌಲಭ್ಯ, ಹಣಕಾಸಿನ ಮತ್ತು ತಾಂತ್ರಿಕ ಮೂಲ ಸೌಲಭ್ಯ ಮುಂತಾದ ವಲಯಗಳ ಅಭಿವೃದ್ಧಿ ಗುರುತಿಸಿ ಸೂಚ್ಯಂಕ ನಿಗದಿಪಡಿಸಲಿದೆ. ಬಳಿಕ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆ ಎಂದರು.

ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ಧಿ ಬಹಳ ಮುಖ್ಯವಾಗಿದೆ. ಇಲ್ಲಿನ ಯುವಕರಿಗೆ ಉದ್ಯೋಗ ದೊರೆಯುವಂತೆ ಮಾಡುವುದು ಹಾಗೂ ವಲಸೆ ಹೋಗುವುದನ್ನು ಕಡಿಮೆ ಮಾಡುವುದು ಬಹಳ ಮುಖ್ಯವಾಗಿದೆ ಹಾಗೂ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾತನಾಡಿ, ಇಲ್ಲಿ ಉತ್ಪಾದಿಸುವ ಬೆಳೆಗಳಿಗೆ ಮೌಲ್ಯವರ್ಧನೆ ಆಗಬೇಕಿದೆ. ಮೂಲ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ಕೊಡಲಾಗಿದೆ. ಟೆಕ್‌ಟೈಲ್ಸ್ ಹಬ್, ಮೈನಿಂಗ್, ಕೃಷಿ ಆಧಾರಿತ ಕೈಗಾರಿಕೆಗಳು, ಕೋಲ್ಡ್ ಸ್ಟೋರೆಜ್ ಘಟಕಗಳು, ಬೆಳೆಗಳಿಗೆ ಬೆಂಬಲ ಬೆಲೆ, ನೀರಾವರಿ, ಆಧುನಿಕ ಆಸ್ಪತ್ರೆಗಳು, ಸಣ್ಣ ಉದ್ಯಮಗಳಿಗೂ ಹೆಚ್ಚಿನ ಉತ್ತೇಜನ, ಶಿಕ್ಷಣ ಸಂಸ್ಥೆಗಳಿಗೆ ಮೂಲ ಸೌಕರ್ಯ ಸೇರಿದಂತೆ ಇತರ ಅಂಶಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಶಿಕ್ಷಣ, ಆರೋಗ್ಯ, ಕೈಗಾರಿಕೆ, ಕೃಷಿ, ಮೂಲಸೌಕರ್ಯ, ತಂತ್ರಜ್ಞಾನ, ಅಭಿವೃದ್ಧಿ, ಸಮಸ್ಯೆಗಳ ಬಗ್ಗೆ ವಿಷಯಾಧಾರಿತ ಚರ್ಚೆ ನಡೆಸಿದ ಸಮಿತಿಯು ಅಧಿಕಾರಿಗಳಿಂದ, ಜಿಲ್ಲೆಯ ಸಂಘ ಸಂಸ್ಥೆಗಳ ಮುಖಂಡರಿಂದ ಮಾಹಿತಿ ಪಡೆದುಕೊಂಡರು. ಸಮಿತಿಯು ಗುರುತಿಸಿರುವ ವಿಷಯಗಳಲ್ಲದೇ ಜಿಲ್ಲೆಗೆ ಸಂಬಂಧಿಸಿದಂತೆ ಇನ್ನೂ ಅನೇಕ ವಿಷಯಗಳನ್ನು ಗಮನಿಸಲಿದೆ ಎಂದರು.

ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಸದಸ್ಯರಾದ ಡಾ. ಎಸ್.ಟಿ. ಬಾಗಲಕೋಟಿ, ಡಾ. ಸಂಗೀತಾ ಕಟ್ಟಿ, ಜಿಪಂ ಸಿಒಒ ಮಹಮ್ಮದ್ ಹ್ಯಾರೀಸ್ ಸುಮೈರ್, ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ್ ಸಪ್ಪಂಡಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ್, ಡಿಎಚ್‌ಒ ಡಾ. ಯಲ್ಲಾ ರಮೇಶ್ ಬಾಬು, ಡಿಡಿಪಿಐ ಬಿ.ಉಮಾದೇವಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ವಿವಿಧ ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳು, ಮತ್ತಿತರರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ