ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ, ಆಡಳಿತ ವಿಕೇಂದ್ರೀಕರಣದ ಭಾಗವಾಗಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರದ ವತಿಯಿಂದ ಐತಿಹಾಸಿಕ ಸಚಿವ ಸಂಪುಟ ಸಭೆ ನಡೆಯುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಬೆಂಗಳೂರನ್ನೇ ಕೇಂದ್ರೀಕರಿಸಿ, ಇತರೆ ಜಿಲ್ಲೆಗಳನ್ನು ನಿರ್ಲಕ್ಷಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಕೈಗಾರಿಕೆಗಳು ವಿಕೇಂದ್ರಿಕರಣ ಮಾಡಬೇಕು ಎಂದರು.
ಬೆಂಗಳೂರಿನ ಜನತೆಗೆ ನಮ್ಮ ಭಾಗದ ರೈತರು ಬೆಳೆಯುವ ತರಕಾರಿ, ಹಣ್ಣು, ಹಾಲು ಸರಬರಾಜು ಆಗುತ್ತಿದೆ. ಇಂತಹ ಫಲವತ್ತಾದ ಭೂಮಿಗಳನ್ನು ಕೆಐಎಡಿಬಿಗೆ ನೀಡಿ ರೈತರನ್ನು ಬೀದಿಗೆ ತರಲಾಗುತ್ತಿದೆ. ಅಭಿವೃದ್ಧಿಯ ಹೆಸರಲ್ಲಿ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ನೆಲಮಂಗಲದಿಂದ ದಾಬಸ್‌ಪೇಟೆವರೆಗೆ, ಯಲಹಂಕದಿಂದ ದೊಡ್ಡಬಳ್ಳಾಪುರದವರೆಗೆ, ಹೊಸಕೋಟೆ, ದೇವನಹಳ್ಳಿ ಸೇರಿದಂತೆ ಜಿಲ್ಲೆಯ ಎಲ್ಲ ಭಾಗಗಳಲ್ಲೂ ಸರ್ಕಾರ ಕೈಗಾರಿಕಾಭಿವೃದ್ಧಿಯ ಹೆಸರಲ್ಲಿ ಭೂಮಿಯನ್ನ ಕಸಿದುಕೊಳ್ಳುತ್ತಿದೆ. ಕ್ವಿನ್ ಸಿಟಿ ಹೆಸರಲ್ಲಿ ಸಾವಿರಾರರು ಎಕರೆ ವಶಪಡಿಸಿಕೊಳ್ಳಲಾಗುತ್ತಿದೆ. ಇದು ಹೀಗೆ ಮುಂದುವರೆದರೆ ಕೃಷಿ, ಹೈನುಗಾರಿಕೆ ಸಂಪೂರ್ಣ ನಶಿಸಿ ಹೋಗಿ ಮುಂದಿನ ದಿನಗಳಲ್ಲಿ ಆಹಾರ ಕೊರತೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಎತ್ತಿನಹೊಳೆ ಯೋಜನೆ ದಿಕ್ಕು ತಪ್ಪಿದ್ದು ನಮ್ಮ ಜಿಲ್ಲೆಗಳಿಗೆ ನೀರು ಸಿಗುವ ನಿರೀಕ್ಷೆಯೇ ಇಲ್ಲ. ಈ ಯೋಜನೆ ಸರ್ಕಾರದ ಪಾಲಿಗೆ ಹಣ ಮಾಡುವ ಯೋಜನೆಯಾಗಿ ಮಾರ್ಪಟ್ಟಿದೆ. ಪೈಪ್‌ಲೈನ್ ಅಳವಡಿಸಿರುವ ರೈತರಿಗೂ ಸೂಕ್ತ ಪರಿಹಾರ ಧನ ನೀಡಿಲ್ಲ. ಸಾವಿರಾರು ಕೋಟಿ ರು. ಖರ್ಚು ಮಾಡು ನೀರಾವರಿ ಯೋಜನೆಗಳಿಗಿಂತ ಸ್ಥಳೀಯವಾಗಿ ಸಿಗುವ ನೀರಿನ ಮೂಲಗಳಿಂದ ಕೆಲವಾರು ಕೋಟಿ ರು.ಗಳನ್ನು ಯೋಜನೆಗಳನ್ನು ರೂಪಿಸಬಹುದಾಗಿದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚರ್ಚಿಸಬೇಕು ಎಂದರು.
ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಆರ್.ಸತೀಶ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಸರ್ಕಾರ ಬಂದ ಕೂಡಲೇ ಹಾಲಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ₹5 ರಿಂದ ₹7ಕ್ಕೆ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಎರಡೂ ವರ್ಷ ಕಳೆದರೂ ಜಾರಿಯಾಗಿಲ್ಲ. ಸರ್ಕಾರ ನುಡಿದಂತೆ ನಡೆದಿಲ್ಲ. ಇದೇ ಸಚಿವ ಸಂಪುಟ ಸಭೆಯಲ್ಲಿಯೇ ಈ ತೀರ್ಮಾನ ಜಾರಿಯಾಗಬೇಕು ಎಂದರು.
ಈ ವೇಳೆ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಮುತ್ತೇಗೌಡ, ತಾಲೂಕು ಅಧ್ಯಕ್ಷ ಹನುಮೇಗೌಡ, ಪ್ರಧಾನ ಕಾರ್ಯದರ್ಶಿ ಸತೀಶ್, ಮುಖಂಡರಾದ ಮೂರ್ತಿ, ಶಿವಣ್ಣ, ಮುರಳಿ, ಧನಂಜಯ, ಹನುಮಂತರಾಯಪ್ಪ, ಚೆಲುವಮೂರ್ತಿ, ನಾರಾಯಣಸ್ವಾಮಿ, ಮುನಿನಾರಾಯಣಪ್ಪ, ಮತ್ತಿತರರು ಇದ್ದರು.
18ಕೆಡಿಬಿಪಿ1- ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದಲ್ಲಿ ರಾಜ್ಯ ರೈತ ಸಂಘದಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ರೈತ ಮುಖಂಡರು ಮಾತನಾಡಿದರು.