ಬಮೂಲ್ ನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿ ಸಹಕಾರಿ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿರುವ ಮಾಜಿ ಸಂಸದ ಡಿ.ಕೆ.ಸುರೇಶ್ ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ರಾಮನಗರ
ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ಇಂದು (ಜೂನ್ 19) ಚುನಾವಣೆ ನಿಗದಿಯಾಗಿದ್ದು, ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಲ್ಲಿ ಯಾರು ಗದ್ದುಗೆ ಹಿಡಿಯಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಬಮೂಲ್ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಕುರಿತಂತೆ ಬೆಂಗಳೂರಲ್ಲಿ ನಡೆದ ನಿರ್ದೇಶಕರ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಸುರೇಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕುದೂರು ಕ್ಷೇತ್ರ ನಿರ್ದೇಶಕ ರಾಜಣ್ಣರವರ ಆಯ್ಕೆಯನ್ನು ಅಂತಿಮಗೊಳಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬಮೂಲ್ ನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿ ಸಹಕಾರಿ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿರುವ ಮಾಜಿ ಸಂಸದ ಡಿ.ಕೆ.ಸುರೇಶ್ ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಹಾಗೊಂದು ವೇಳೆ ಕೆಎಂಎಫ್ ಅಧ್ಯಕ್ಷ ಸ್ಥಾನ ಖಚಿತವಾದರೆ ಸುರೇಶ್ ಅಲ್ಪ ಅವಧಿವರೆಗೆ ಬಮೂಲ್ ಅಧ್ಯಕ್ಷರಾಗಿ ಅಧಿಕಾರ ನಡೆಸುವ ಸಾಧ್ಯತೆಗಳಿವೆ.
ಡಿ.ಕೆ.ಸುರೇಶ್ ಮನಸ್ಸು ಬದಲಾಯಿಸಿದರೆ ಬಮೂಲ್ ಅಧ್ಯಕ್ಷ ಸ್ಥಾನ ಬೇರೆಯವರ ಪಾಲಾಗಲಿದೆ. ಇನ್ನು ಉಪಾಧ್ಯಕ್ಷರಾಗಿ ಕುದೂರು ಕ್ಷೇತ್ರ ನಿರ್ದೇಶಕ ರಾಜಣ್ಣ ಆಯ್ಕೆಯಾಗುವುದು ನಿಶ್ಚಿತವಾಗಿದೆ.
ಇಷ್ಟೇ ಅಲ್ಲದೆ, ಅಧ್ಯಕ್ಷ ಸ್ಥಾನದ ಮೇಲೆ ಮಾಜಿ ಕೆಎಂಎಫ್ ಅಧ್ಯಕ್ಷ ಪಿ. ನಾಗರಾಜು, ಚನ್ನಪಟ್ಟಣ ನಿರ್ದೇಶಕ ಎಸ್. ಲಿಂಗೇಶ್‌ಕುಮಾರ್, ಮಾಗಡಿ ನಿರ್ದೇಶಕ ಎಚ್.ಎನ್. ಅಶೋಕ್, ಕುದೂರಿನ ರಾಜಣ್ಣ, ಹಾರೋಹಳ್ಳಿ ಹರೀಶ್ ಕುಮಾರ್ ಹಾಗೂ ಆನೇಕಲ್ ಕ್ಷೇತ್ರ ನಿರ್ದೇಶಕ ಆರ್.ಕೆ.ರಮೇಶ್ ರವರು ಕಣ್ಣಿಟ್ಟಿದ್ದಾರೆ. ಇವರೆಲ್ಲರನ್ನು ಸಮಾಧಾನಪಡಿಸಲು ಕಾಂಗ್ರೆಸ್ ವರಿಷ್ಠರು ಅಧಿಕಾರ ಹಂಚಿಕೆ ಸೂತ್ರ ಅನುಸರಿಸಲಿದ್ದಾರೆ ಎಂದು ಹೇಳಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.