ಯಲಬುರ್ಗಾ: ಇಂದಿನ ಸಾಮಾಜಿಕ,ರಾಜಕೀಯ ಪ್ರಭಾವದಿಂದ ಗಣರಾಜ್ಯೋತ್ಸವ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ಅಂದು ಪ್ರಾಮಾಣಿಕ ರಾಜಕೀಯ ವ್ಯವಸ್ಥೆ, ಜನಪರ ಚಿಂತನೆ ಇರುವ ನಾಯಕರು ಇದ್ದರು. ಆದರೆ ಇವತ್ತು ಹಾಳಾಗುತ್ತಿದೆ. ಇದರ ಬಗ್ಗೆ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ಭ್ರಷ್ಟಚಾರ ರಹಿತ ಚುನಾವಣೆ ವ್ಯವಸ್ಥೆ ತರಲು ಚಿಂತನೆ ನಡೆಸುವ ಅವಶ್ಯಕತೆ ಇದೆ ಎಂದರು.
ಹಣ, ಜಾತಿ ಆಧಾರಿತ ಚುನಾವಣೆ ನಡೆದರೆ ಗಣರಾಜ್ಯೋತ್ಸವಕ್ಕೆ ಅರ್ಥ ಬರುವುದಿಲ್ಲ. ಡಾ.ಬಿ.ಆರ್. ಅಂಬೇಡ್ಕರ್ ರಚಿತ ಸಂವಿಧಾನ ಒಪ್ಪಿಕೊಂಡು ಆಡಳಿತ ನಡೆಸುತ್ತೇವೆ. ರಾಜ್ಯಪಾಲರು ಸಂವಿಧಾನದಂತೆ ನಡೆದುಕೊಳ್ಳದೆ ತಮ್ಮ ಇಚ್ಛೆಯಂತೆ, ಪ್ರಜಾಪ್ರಭುತ್ವದ ವಿರುದ್ಧವಾಗಿ ನಡೆದುಕೊಂಡಿರುವುದು ದುರದೃಷ್ಟಕರ. ಸರ್ಕಾರ ಕೊಟ್ಟ ಸಂದೇಶ ಓದಬೇಕು. ರಾಷ್ಟ್ರ, ಸಂವಿಧಾನ ವಿರೋಧಿ ಇದ್ದರೆ ಆ ಸರ್ಕಾರ ಕಿತ್ತು ಹಾಕುವ ಅಧಿಕಾರ ರಾಜ್ಯಪಾಲರಿಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮುಂದುವರೆಸಿ, ಜಿ ರಾಮ್ ಜಿ ಹೆಸರಿನಲ್ಲಿ ಬೇರೆ ಯೋಜನೆ ತರಬಹುದಿತ್ತು. ಯೋಜನೆ ಹೆಸರು ಬದಲಾಯಿಸಿದ್ದು ಗಾಂಧೀಜಿಯವರಿಗೆ ಮಾಡಿದ ದೊಡ್ಡ ಅಪಮಾನ ಎಂದರು.ಫೆಬ್ರವರಿ ತಿಂಗಳಲ್ಲಿ ಕೇಂದ್ರ ಸರ್ಕಾರದಿಂದ ನಡೆಯುವ ಬಜೆಟ್ ಅಧಿವೇಶನದಲ್ಲಿ ರಾಜ್ಯಕ್ಕೆ ೧೬ನೇ ಹಣಕಾಸಿನಲ್ಲಿ ಹೆಚ್ಚು ಆದ್ಯತೆ ಸಿಗುತ್ತದೆ ಎನ್ನುವ ನಿರೀಕ್ಷೆ ಇದೆ. ಮಾ. ೬ರಂದು ರಾಜ್ಯ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ ಎಂದರು.
ತಹಸೀಲ್ದಾರ್ ಪ್ರಕಾಶ ನಾಶಿ ಧ್ವಜಾರೋಹಣ ನೆರವೇರಿಸಿ ಸಂದೇಶ ಭಾಷಣ ಮಾಡಿದರು.ಈ ಸಂದರ್ಭ ತಾಪಂ ಇಒ ನೀಲಗಂಗಾ ಬಬಲಾದ, ಸಿಪಿಐ ಮೌನೇಶ್ವರ ಮಾಲಿಪಾಟೀಲ್,ಪಪಂ ಮುಖ್ಯಾಧಿಕಾರಿ ನಾಗೇಶ, ಕೆರಿಬಸಪ್ಪ ನಿಡಗುಂದಿ, ಯಂಕಣ್ಣ ಯರಾಶಿ, ಬಿ.ಎಂ.ಶಿರೂರ, ಸಂಗಣ್ಣ ತೆಂಗಿನಕಾಯಿ, ಆನಂದ ಉಳ್ಳಾಗಡ್ಡಿ, ಡಾ. ಶಿವನಗೌಡ ದಾನರಡ್ಡಿ, ಮಲ್ಲಿಕಾರ್ಜುನ ಜಕ್ಕಲಿ, ಹಂಪಯ್ಯಸ್ವಾಮಿ ಹಿರೇಮಠ, ಸುಧೀರ ಕೊರ್ಲಹಳ್ಳಿ, ಎಸ್.ಡಿ. ಗಾಂಜಿ, ಅಶೋಕ ಮಾಲಿಪಾಟೀಲ್, ರೇವಣಪ್ಪ ಹಿರೇಕುರುಬರ, ಶರಣಮ್ಮ ಪೂಜಾರ, ಸಾವಿತ್ರಿ ಗೊಲ್ಲರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತಿತರರು ಇದ್ದರು.