ಗಣರಾಜ್ಯೋತ್ಸವ: ರಾಜ್ಯದಲ್ಲಿ ಮೊದಲ ಬಾರಿಗೆ ಕನ್ನಡಿಗರಿಂದ ಪಥಸಂಚಲನ ನೇತೃತ್ವ

KannadaprabhaNewsNetwork | Updated : Jan 26 2024, 01:48 AM IST

ಸಾರಾಂಶ

ಇದುವರೆಗೂ ಅನ್ಯ ರಾಜ್ಯದ ಭಾರತೀಯ ರಕ್ಷಣಾ ಸೇವೆಯ ಅಧಿಕಾರಿಗಳು ಗಣರಾಜ್ಯೋತ್ಸವದ ಪರೇಡ್ ಕಮಾಂಡರ್ ನೇತೃತ್ವವನ್ನು ವಹಿಸುತ್ತಿದ್ದರು. ಈ ಬಾರಿ ನಡೆಯುವ ಗಣರಾಜ್ಯೋತ್ಸವ ಸಮಾರಂಭಕ್ಕೆ ಇದೇ ಮೊದಲ ಬಾರಿಗೆ ಕನ್ನಡಿಗ ಸೇನಾಧಿಕಾರಿಯೊಬ್ಬರು ನೇತೃತ್ವ ವಹಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕುಶಾಲನಗರಭಾರತೀಯ ರಕ್ಷಣಾ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಈ ಸಾಲಿನಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದ ಪಥಸಂಚಲನದಲ್ಲಿ ಪರೇಡ್ ಕಮಾಂಡರ್ ಆಗಿ ಪ್ರಥಮ ಬಾರಿಗೆ ಕನ್ನಡಿಗರೊಬ್ಬರು ಪರೇಡ್‌ ನೇತೃತ್ವ ವಹಿಸಲಿದ್ದಾರೆ.

ಮೇಜರ್ ಡಿ.ಸತೀಶ್ ಈ ಗೌರವಕ್ಕೆ ಪಾತ್ರರಾದ ಕನ್ನಡಿಗ. ಮೂಲತಃ ತುಮಕೂರು ಜಿಲ್ಲೆಯವರಾಗಿರುವ ಅವರು ಕೊಡಗಿನ ಅಳಿಯ.

ಇದುವರೆಗೂ ಅನ್ಯ ರಾಜ್ಯದ ಭಾರತೀಯ ರಕ್ಷಣಾ ಸೇವೆಯ ಅಧಿಕಾರಿಗಳು ಗಣರಾಜ್ಯೋತ್ಸವದ ಪರೇಡ್ ಕಮಾಂಡರ್ ನೇತೃತ್ವವನ್ನು ವಹಿಸುತ್ತಿದ್ದರು. ಈ ಬಾರಿ ನಡೆಯುವ ಗಣರಾಜ್ಯೋತ್ಸವ ಸಮಾರಂಭಕ್ಕೆ ಇದೇ ಮೊದಲ ಬಾರಿಗೆ ಕನ್ನಡಿಗ ಸೇನಾಧಿಕಾರಿಯೊಬ್ಬರು ನೇತೃತ್ವ ವಹಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.

ಮೇಜರ್ ಡಿ.ಸತೀಶ್ ಅವರು 2015ರಲ್ಲಿ ಭಾರತೀಯ ರಕ್ಷಣಾ ಇಲಾಖೆಯ ಉನ್ನತ ಹುದ್ದೆಯಾದ ಕಮಿಷನ್ ಅಧಿಕಾರಿಯಾಗಿ ರಾಷ್ಟ್ರಪತಿಗಳಿಂದ ನೇಮಕಗೊಂಡು ರಾಜ್ಯಕ್ಕೆ ಕೀರ್ತಿ ತಂದಿದ್ದರು. ಡೆಹ್ರಡೂನ್‌ನಲ್ಲಿ ಕಠಿಣ ತರಬೇತಿ ಮುಗಿಸಿ ಲೆಫ್ಟಿನೆಂಟ್ ಹುದ್ದೆಯಲ್ಲಿ ಜಮ್ಮು ಕಾಶ್ಮೀರದ ಭಯೋತ್ಪಾದನಾ ನಿಗ್ರಹದಳದಲ್ಲಿ ಕಾರ್ಯನಿರ್ವಹಿಸಿದ್ದ ಅವರು, ಭಾರತ ಸರ್ಕಾರದಿಂದ ಕ್ಯಾಪ್ಟನ್ ಹುದ್ದೆಗೆ ಬಡ್ತಿ ಪಡೆದು ಅಮೃತ್‌ಸರದಲ್ಲಿ ಕಾರ್ಯ ನಿರ್ವಹಿಸಿದ್ದರು. 2019ರಲ್ಲಿ ಭಾರತೀಯ ಸೇನೆಯ ಉನ್ನತ ಅಧಿಕಾರಿಗಳಿಗೆ ತರಬೇತಿ ನೀಡಲು ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಗೆ ನಿಯೋಜನೆಗೊಂಡು ನೂರಾರು ಅಧಿಕಾರಿಗಳಿಗೆ ಯಶಸ್ವಿಯಾಗಿ ತರಬೇತಿ ನೀಡಿದ ಅತಿ ಕಿರಿಯ ವಯಸ್ಸಿನ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ನಂತರ 2021ರಲ್ಲಿ ಮೇಜರ್ ಹುದ್ದೆಗೆ ಬಡ್ತಿ ಬಡ್ತಿ ಪಡೆದು ಬೆಂಗಳೂರು ವಿಭಾಗದ ಭಾರತೀಯ ರಕ್ಷಣಾ ಇಲಾಖೆಯ ಮಾನವ ಸಂಪನ್ಮೂಲ ಕೇಂದ್ರದ ಆಫೀಸರ್ ಕಮಾಂಡಿಂಗ್ ಹುದ್ದೆಯಲ್ಲಿ ನಿಯೋಜನೆಗೊಂಡು ರಾಜ್ಯದಲ್ಲಿ ಪ್ರಥಮ ಅಗ್ನಿಪಥ ಯೋಧರ ನೇಮಕಾತಿಯ ಜವಾಬ್ದಾರಿಯನ್ನು ನಿಭಾಯಿಸುವುದರೊಂದಿಗೆ ಅಗ್ನಿವೀರರಿಗೆ ಯಶಸ್ವಿಯಾಗಿ ತರಬೇತಿ ನೀಡಿದ ಕೀರ್ತಿಗೆ ಭಾಜನರಾಗಿದ್ದಾರೆ.

ಮೇಜರ್ ಡಿ. ಸತೀಶ್, ರೈತ ಕುಟುಂಬದಿಂದ ಬಂದು ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾಭ್ಯಾಸ ಪೂರೈಸಿ ಇಂತಹ ಕೀರ್ತಿಗೆ ಪಾತ್ರರಾಗಿದ್ದು ನಿಜವಾಗಿಯೂ ಹೆಮ್ಮೆಯ ವಿಷಯ.ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಕರ್ತವ್ಯ ಸಲ್ಲಿಸುತ್ತಿರುವ ಅವರು ಕೇಂದ್ರ ಸರ್ಕಾರದ ಮಹತ್ವ ಯೋಜನೆಗಳಾದ ವೀರಗಾಥ, ವಿಧ್ಯಂಜಲಿ ಕಾರ್ಯಕ್ರಮಗಳು ಮತ್ತು ಅಗ್ನಿಪಥ ನೇಮಕಾತಿ ಮತ್ತು ತರಬೇತಿಯ ಜವಾಬ್ದಾರಿಯನ್ನು ರಾಜ್ಯಮಟ್ಟದಲ್ಲಿ ಯಶಸ್ವಿಯಾಗಿ ನಿಭಾಯಿಸಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಆತ್ಮಸ್ಥೈರ್ಯ, ಕಠಿಣ ಪರಿಶ್ರಮ ಹಾಗೂ ನಿರಂತರ ಪ್ರಯತ್ನದಿಂದ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯ. ಸರ್ಕಾರಿ ಶಾಲೆ ಹಾಗೂ ಗ್ರಾಮೀಣ ಪ್ರದೇಶದ ಹಿನ್ನೆಲೆ ಈ ಸಾಧನೆಗೆ ಸವಾಲಾಗಲಾರವು. ಅಂತಹವರಿಗೆ ಅಗತ್ಯ ಮಾಹಿತಿ ಮತ್ತು ಮಾರ್ಗದರ್ಶನ ಸಿಗಲಿ ಎಂದು ‘ಕರಿಯರ್ ಇನ್ ದಿ ಇಂಡಿಯನ್ ಡಿಫೆನ್ಸ್’ ಎಂಬ ಕೃತಿಯನ್ನು ತಮ್ಮ ಪತ್ನಿ, ಪ್ರಸ್ತುತ ಕೊಡಗು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿಯಾಗಿರುವ ಪಿ.ಪಾವನಿ ಅವರ ಸಹಾಯದೊಂದಿಗೆ ಬರೆದು ಪ್ರಕಟಿಸಿದ್ದಾರೆ.ಕೋಟ್‌ರಾಜ್ಯದಲ್ಲಿ ಭಾರತೀಯ ರಕ್ಷಣಾ ಸೇವೆಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಲು ಅವಕಾಶ ಬಂದಿರುವುದು ತನಗೆ ತುಂಬಾ ಖುಷಿಯ ವಿಚಾರ. ತನ್ನ ಈ ಒಂದು ಸಣ್ಣ ಸಾಧನೆಗೆ ತನ್ನ ತಂದೆ ತಾಯಿ ಹಾಗೂ ಗುರುಹಿರಿಯರ ಆಶೀರ್ವಾದ ಕಾರಣ.। ಮೇಜರ್ ಸತೀಶ್

------------------

ಬಡತನ ಗ್ರಾಮೀಣ ಪ್ರದೇಶದ ಹಿನ್ನೆಲೆ ಮತ್ತು ಕನ್ನಡ ಮಾಧ್ಯಮ ಶಾಲೆಯ ವಿದ್ಯಾಭ್ಯಾಸದ ಸಂಕೋಲೆಗಳನ್ನು ಭೇದಿಸಿ ಭಾರತೀಯ ರಕ್ಷಣಾ ಇಲಾಖೆಯ ಉನ್ನತ ಹುದ್ದೆಯನ್ನು ಅಲಂಕರಿಸಿರುವ ಮೇಜರ್ ಸತೀಶ್ ಡಿ. ಅವರು ಸ್ಫೂರ್ತಿಯ ಚಿಲುಮೆಯಾಗಿದ್ದಾರೆ.ವಿ.ಡಿ. ಪಂಡರಿಕಾಕ್ಷ, ಕುಶಾಲನಗರದ ಉದ್ಯಮಿ, ಸತೀಶ್‌ ಅವರ ಮಾವ

Share this article